ಎಪಿ ಉಸ್ತಾದ್ ಹೇಳಿಕೆ ವಿಮರ್ಶೆ; ಪ್ರಗತಿಪರ ಚಿಂತಕನ ವಿರುದ್ಧ ಮುಗಿಬಿದ್ದ SSF ಪಡೆ!
Thursday, September 3, 2026
ಮಂಗಳೂರು: ಖ್ಯಾತ ಸುನ್ನೀ ಪಂಡಿತ, SSF ನೇತಾರ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರು ಮಹಿಳೆಯರ ಬಗ್ಗೆ ನೀಡಿದ್ದ ಹೇಳಿಕೆಯನ್ನು ತನ್ನ ಫೇಸ್‌ಬುಕ್ ಖಾತೆಯಲ್ಲಿ ವಿಮರ್ಶಿಸಿದ್ದ ಪ್ರಗತಿಪರ ಚಿಂತಕ, ಪತ್ರಕರ್ತ ಶಶಿಧರ ಹೆಮ್ಮಾಡಿ ವಿರುದ್ಧ ಎಪಿ ಉಸ್ತಾದರ ಅನುಯಾಯಿಗಳು ಮುಗಿಬಿದ್ದಿದ್ದಾರೆ. ತಮ್ಮ ನೇತಾರ ನೀಡಿದ ಹೇಳಿಕೆಯ ಸಮರ್ಥನೆಗಿಳಿದ SSF ಕಾರ್ಯಕರ್ತರು ಶಶಿಧರ್ ಹೆಮ್ಮಾಡಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದು, ಈ ಕುರಿತು ಪತ್ರಕರ್ತ ಶಶಿಧರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
"ಮಹಿಳೆಯರು ವಸ್ತುಗಳಲ್ಲ ಉಸ್ತಾದರೆ" ಅನ್ನೋ ಒಕ್ಕಣೆಯಲ್ಲಿ ಬರೆದಿದ್ದ ಲೇಖನಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದು, ಮುಸ್ಲಿಂ ಧರ್ಮದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ನಡೆಸದಂತೆ SSF ನ ಕೆಲ ಕಾರ್ಯಕರ್ತರು ಕಾಮೆಂಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ತಡರಾತ್ರಿ ಪೋಸ್ಟ್‌ವೊಂದನ್ನು ಮಾಡಿರುವ ಶಶಿಧರ ಹೆಮ್ಮಾಡಿ, ರಾತ್ರಿ 11.45 ಆದರೂ ಇನ್‌ಬಾಕ್ಸ್‌ಗೆ ಬೈಗುಳ, ಹೆಂಡತಿ-ಮಕ್ಕಳ ಬಗ್ಗೆ ಕೊಳಕು ಮಾತು ಮತ್ತು ಧಮ್ಕಿಗಳು ಬರುತ್ತಲೇ ಇವೆ ಎಂದೆ ತಿಳಿಸಿದ್ದಾರೆ. ಬೇರೊಂದು ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ಶಶಿಧರ್ ಅವರು, "ಇಷ್ಟು ವರ್ಷ ನಾನು ಸಹಬಾಳ್ವೆಯ ಕಾಲಾಳಾಗಿ ದುಡಿದಿರುವುದು ಇವರ್ಯಾರಿಗೂ ಕಿಂಚಿತ್ತೂ ನೆನಪು ಇದ್ದಂತಿಲ್ಲ" ಎಂದು ತನ್ನ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಪ್ರಗತಿಪರ ವಲಯದಲ್ಲಿ ಗುರುತಿಸಿಕೊಂಡಿರುವ ಶಶಿಧರ್ ಹೆಮ್ಮಾಡಿ, ಜನಪರ ಪತ್ರಕರ್ತನಾಗಿ ಗುರುತಿಸಿಕೊಂಡವರು. ಕರಾವಳಿಯ ಹಿಂದುತ್ವ ರಾಜಕಾರಣದ ಬಗ್ಗೆ ಸದಾ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ. ಹಿಜಾಬ್ ವಿವಾದದ ಸಂದರ್ಭ ಸಂತ್ರಸ್ತ ಸಮುದಾಯದ ಪರ ನಿಂತಿದ್ದ ಹೆಮ್ಮಾಡಿಯವರನ್ನು ಸುನ್ನೀ ಸ್ಟೂಡೆಂಟ್ ಫೆಡರೇಶನ್ (SSF) ಕಾರ್ಯಕರ್ತರು ಹಾಗೂ ಎಪಿ ಉಸ್ತಾದರ ಬೆಂಬಲಿಗರು ಆಕ್ಷೇಪಾರ್ಹ ಪದಗಳಲ್ಲಿ ನಡೆಸಿಕೊಳ್ಳುತ್ತಿರುವುದು ಆಶ್ಚರ್ಯ ಉಂಟು ಮಾಡಿದೆ. ಆದರೆ, ಈ ಕುರಿತು ಇದುವರೆಗೂ SSF ಸಂಘಟನೆ ಯಾವುದೇ ಸ್ಪಷ್ಟೀಕರಣ ನೀಡಿಲ್ಲ.