ಮೂಡುಬಿದಿರೆ: ಹೆದ್ದಾರಿ ಸಮಸ್ಯೆ ಹೇಳಲು ಹೋದವರಿಗೆ ಅವಮಾನ!? ಸಂಸದರ ವಿರುದ್ಧ ಬಿಜೆಪಿ ಮಂಡಲ ಉಪಾಧ್ಯಕ್ಷನ ಆಕ್ರೋಶ!
Thursday, May 14, 2026
ಮಂಗಳೂರು: ಕಾರ್ಕಳ ಸಂಪರ್ಕ ಕಲ್ಪಿಸುವ ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲು ಸಾಲು ಅಪಘಾತಗಳು ನಡೆಯುತ್ತಿದ್ದು, ಸಂಸದರು ಸರಿಯಾದ ರೀತಿಯಲ್ಲಿ ಸ್ಪಂದಿಸದಿರುವ ಬಗ್ಗೆ ಖುದ್ದು ಬಿಜೆಪಿ ಮುಖಂಡರೊಬ್ಬರೇ ಆಕ್ರೋಶ ವ್ಯಕ್ತಪಡಿಸಿ ಜಾಲತಾಣದಲ್ಲಿ ತಮ್ಮ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಮೂಡುಬಿದಿರೆ ಬಿಜೆಪಿ ಮಂಡಲ ಉಪಾಧ್ಯಕ್ಷ ಸೂರಜ್ ಜೈನ್ ಮಾರ್ನಾಡು ತನ್ನ ಫೇಸ್‌ಬುಕ್ ಖಾತೆಯಲ್ಲಿ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ತೋರಿದ ವರ್ತನೆ ಬಗ್ಗೆ ಪೋಸ್ಟ್ ಮಾಡಿದ್ದು, ಬಿಜೆಪಿಯ ಒಳಜಗಳ ಈ ಮೂಲಕ ಬಹಿರಂಗಗೊಂಡಂತಾಗಿದೆ.
ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169 ರ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿ ಆರಂಭವಾಗಿ ಮೂರು ವರ್ಷಗಳಲ್ಲಿ 8 ಜೀವ ಬಲಿಯಾಗಿದ್ದು, ಸುಮಾರು 20 ಕ್ಕೂ ಅಧಿಕ ಸರಣಿ ಅಪಘಾತ ನಡೆದು ಹಲವು ಮಂದಿ ಗಾಯಗೊಂಡಿದ್ದಾರೆ. ಇದಕ್ಕೆಲ್ಲ ಸರ್ವಿಸ್ ರಸ್ತೆ ಇಲ್ಲದೇ ಇರೋದೆ ಕಾರಣ ಅಂತಾ ಆರೋಪಿಸಲಾಗಿದೆ. ಎರಡು ದಿನಗಳ ಹಿಂದೆ ಬನ್ನಡ್ಕದಲ್ಲಿ ನಡೆದ ಸರಣಿ ಅಪಘಾತಗಳ ಬಗ್ಗೆ ಮಾಹಿತಿ ನೀಡಲು ಸಂಸದರ ಆಹ್ವಾನದಂತೆ ಸಂಸದರ ಕಚೇರಿಗೆ ತೆರಳಿದ್ದ ನಮ್ಮನ್ನು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಮುಂದೆ ಅವಮಾನಿಸಲಾಗಿದೆ. ಅಧಿಕಾರಿಗಳ ಮುಂದೆ ನಮ್ಮನ್ನು ನಿಲ್ಲಿಸಿಯೇ ಮಾತನಾಡಿಸಲಾಗಿದೆ. ನಾವು ಹೇಳಿದ ಪ್ರತಿಯೊಂದು ಸಮಸ್ಯೆಗೂ ಜನರದ್ದೇ ಸಮಸ್ಯೆ ಅನ್ನೋ ರೀತಿಯಲ್ಲಿ ಮಾತನಾಡಲಾಗಿದೆ. ಜೊತೆಗೆ "ಜನರ ಪ್ರತಿಭಟನೆಗೆ ನಾನು ಹೆದರಲ್ಲ, ನೀವು ಹೇಳಿದಂತೆ ಕಾಮಗಾರಿ ನಡೆಸೋಕೆ ಸಾಧ್ಯವಿಲ್ಲ" ಎಂದು ಸಂಸದರು ಹೇಳಿದ್ದಾಗಿ ಸೂರಜ್ ಜೈನ್ ಮಾರ್ನಾಡು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಸಂಸದರಿಗೆ ಸಾಲು ಸಾಲು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಮೂಲಕ ಬಿಜೆಪಿ ಒಳಗಿನ ಬಣ ರಾಜಕೀಯ, ಸಂಸದರ ವಿರುದ್ಧದ ಆಕ್ರೋಶ ಎರಡೇ ವರ್ಷಕ್ಕೆ ಬೀದಿಗೆ ಬಂದಂತಾಗಿದೆ. ಈ ಪೋಸ್ಟ್‌ಗೆ ಹಲವು ಬಿಜೆಪಿ ಕಾರ್ಯಕರ್ತರ ಬೆಂಬಲವೂ ವ್ಯಕ್ತವಾಗಿದೆ.