PUTTUR: ಬಲ್ನಾಡು ಉಳ್ಳಾಲ್ತಿ ಅಮ್ಮನಿಂದ ಮಹಾಲಿಂಗೇಶ್ವರ ದೇವರ ಭೇಟಿ!!
ಸೂಟೆಯ ಬೆಳಕಿನಲ್ಲೇ ಬಲ್ನಾಡಿನಿಂದ ಶ್ರೀ ಮಹಾಲಿಂಗೇಶ್ವರ ದೇವರ ಕ್ಷೇತ್ರಕ್ಕೆ ಬಂದ ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರು ಜಾತ್ರೆಯಲ್ಲಿ ಪಾಲ್ಗೊಂಡರು. ಕಿರುವಾಳು ಮೆರವಣಿಗೆಯ ದಾರಿ ಮಧ್ಯೆ ಭಕ್ತರು ಸಾಲು ಸಾಲಾಗಿ ಆರತಿ ನೆರವೇರಿಸಿದರು. ಕಿರುವಾಳು ದೇವಳಕ್ಕೆ ತಲುಪಿದ ಬಳಿಕ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಶ್ರೀ ಕುಂಟಾರು ಗುರು ತಂತ್ರಿಯವರ ವೈದಿಕತ್ವದಲ್ಲಿ ರಾತ್ರಿಯಿಂದ ಬೆಳಗ್ಗಿನ ಜಾವದ ತನಕ ಉತ್ಸವಾದಿಗಳು ನಡೆಯಿತು. ಕೇಶವ ಅಡಿಗರು ಬ್ರಹ್ಮವಾಹಕರಾಗಿದ್ದರು.
ಕಿರುವಾಳು ಆಗಮನದ ಹಿನ್ನೆಲೆಯಲ್ಲಿ ಉಳ್ಳಾಲ್ತಿ ಅಮ್ಮನವರಿಗೆ ಬೆಳಗ್ಗಿನಿಂದಲೇ ಭಕ್ತರು ಮಲ್ಲಿಗೆ ಸಮರ್ಪಿಸುತ್ತಿದ್ದರು. ದೈವಗಳ ಭಂಡಾರದ ಸ್ಥಾನದಲ್ಲಿ ಮಲ್ಲಿಗೆ ಸಮರ್ಪಣೆಗೆ ಬೆಳಿಗ್ಗಿನಿಂದಲೇ ಅವಕಾಶ ನೀಡಲಾಗಿತ್ತು. ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ತಿಮ್ಮಪ್ಪ ಗೌಡ ಬ್ರಹ್ಮರಕೋಡಿ, ಕಾರ್ಯದರ್ಶಿ ನವೀನ್ ಕರ್ಕೇರ, ಸದಸ್ಯರಾದ ಆನಂದ ಸುವರ್ಣ, ಜಿನ್ನಪ್ಪ ಗೌಡ, ಗಂಗಾಧರ ಗೌಡ, ವಿಶ್ವನಾಥ ಗೌಡ, ಸತೀಶ ನಾಯ್ಕ, ಕಿರಣ್, ಕರುಣಾಕರ ಕರ್ಕೇರ, ರುಸ್ಮಯ ಕುಲಾಲ್, ಗಂಗಾಧರ ನಾಯ್ಕ,ಆಡಳಿತಾಽಕಾರಿ ದೇವಪ್ಪ ಪಿ.ಆರ್,ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿದ್ದ ಸತೀಶ್ ಗೌಡ ಒಳಗುಡ್ಡೆ, ವೆಂಕಟಕೃಷ್ಣ ಪಾಲೆಚ್ಚಾರು, ನವೀನ್ ಕರ್ಕೇರ, ನಾರಾಯಣ ಗೌಡ ಕುಕ್ಕುತ್ತಡಿ, ವಾಸುದೇವ ನಾಯ್ಕ ಸತೀಶ್ ನಾಯ್ಕ, ಪ್ರಮೀಳಾ ಚಂದ್ರಶೇಖರ ಗೌಡ,ಲಲಿತ ಶಂಕರ ಪಾಟಾಳಿ, ಅರ್ಚಕ ರವಿಚಂದ್ರ ನೆಲ್ಲಿತ್ತಾಯ, ನಿಕಟಪೂರ್ವ ಅಧ್ಯಕ್ಷ ಮಾಧವ ಗೌಡ ಕಾಂತಿಲ, ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ,ಮಾಜಿ ಸದಸ್ಯರು, ಅರ್ಚಕರು ವಿವಿಧ ವ್ಯವಸ್ಥೆ ಕಾರ್ಯ ನೆರವೇರಿಸಿದರು.ಸಂಜೆ ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ಈಶ್ವರ ಬೆಡೇಕರ್, ದಿನೇಶ್ ಪಿ.ವಿ, ಕಾರ್ಯನಿರ್ವಹಣಾಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ದೈವಸ್ಥಾನದ ಭಂಡಾರದ ಸ್ಥಾನಕ್ಕೆ ತೆರಳಿ ದೇವಳದ ಕಡೆಯಿಂದ ಮಲ್ಲಿಗೆ ಸಮರ್ಪಣೆ ಮಾಡಿದರು.
ಸಂಜೆ ಗಂಟೆ 5.55ಕ್ಕೆ ಬಲ್ನಾಡು ದೈವಗಳ ಭಂಡಾರದ ಸ್ಥಾನದಿಂದ ಹೊರಟ ಕಿರುವಾಳು ರಾತ್ರಿ ಕರ್ಕುಂಜ ತಲುಪಿ ಅಲ್ಲಿಂದ ಸುಮಾರು ಗಂಟೆ 8.20ಕ್ಕೆ ಬಪ್ಪಳಿಗೆ ತಲುಪುವಷ್ಟರಲ್ಲಿ ವರುಣನ ಪುಷ್ಪವೃಷ್ಟಿಯಾಯಿತು.ಈ ವೇಳೆ ಭಂಡಾರದ ಪಲ್ಲಕಿಗೆ ಮಳೆ ನೀರು ಬೀಳದಂತೆ ಬಪ್ಪಳಿಗೆ ಶ್ರೀ ಸತ್ಯನಾರಾಯಣ ಕಟ್ಟೆಯ ಬಳಿ ಪ್ಲಾಸ್ಟಿಕ್ ಹೊದಿಕೆ ಹಾಸಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಲಾಯಿತು.ಮಳೆ ಬಿಟ್ಟ ಬಳಿಕ ಮತ್ತೆ ಹೊರಡಲಾಯಿತು. 10.45ಕ್ಕೆ ಗಂಟೆಗೆ ಮಹಿಳಾ ಪೊಲೀಸ್ ಠಾಣೆಯ ಬಳಿಯ ಅಂಕದಕಟ್ಟೆಗೆ ಬಂದು ಅಲ್ಲಿ ಭಕ್ತರು ಸಮರ್ಪಣೆ ಮಾಡಿದ ಮಲ್ಲಿಗೆ ಸ್ವೀಕಾರ ಮಾಡಿ ದೇವಳಕ್ಕೆ ಪುಷ್ಕರಣಿಯ ಭಾಗದಿಂದ ಆಗಮಿಸಿ ಗಂಟೆ 11.30ಕ್ಕೆ ಶ್ರೀ ಉಳ್ಳಾಲ್ತಿ ನಡೆಯ ಬಳಿ ಶ್ರೀ ಮಹಾಲಿಂಗೇಶ್ವರ ದೇವರ ಭೇಟಿ ನಡೆಯಿತು.
ಉಪನ್ಯಾಸಕಿ ಹರಿಣಿ ಪುತ್ತೂರಾಯ, ಕೋಡಿಂಬಾಡಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿರಂಜನ ರೈ ಮಠಂತಬೆಟ್ಟು, ಡಾ. ರಾಜೇಶ್ ಬೆಜ್ಜಂಗಳ ಮಾಹಿತಿ ಕೇಂದ್ರದಲ್ಲಿ ಉದ್ಯೋಷಕರಾಗಿದ್ದರು.
ಈ ಸಂದರ್ಭದಲ್ಲಿ ಉಳ್ಳಾಲ್ತಿಯ ಪಾತ್ರಿಯಾಗಿ ರಾಜಣ್ಣ, ದಂಡನಾಯಕ ಪಾತ್ರಿಯಾಗಿ ಪರಮೇಶ್ವರ ಗೌಡ, ಮಲರಾಯನ ಪಾತ್ರಿಯಾಗಿ ತೀರ್ಥಪ್ರಸಾದ್, ಕಲ್ಲುರ್ಟಿ ಪಾತ್ರಿಯಾಗಿ ಅಚ್ಚುತ ಗೌಡ ಅಲ್ಲದೆ ಲೋಕೇಶ್ ಗೌಡ, ಮಂಜಪ್ಪ ಗೌಡ ಕುಕ್ಕುತ್ತಡಿ, ಬೆಳಿಯಪ್ಪ ಗೌಡ ಅವರು ಸಂಪ್ರದಾಯದಂತೆ ಪಾತ್ರಿಗಳಾಗಿ ಸಹಕರಿಸಿದರು. ಭಂಡಾರ ಬರುವ ಜೊತೆಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ರವಿಚಂದ್ರ ನೆಲ್ಲಿತ್ತಾಯ, ಕಚೇರಿ ನಿರ್ವಾಹಕ ಚಂದ್ರಶೇಖರ್ ಭಟ್,ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರು, ಸದಸ್ಯರು, ರವಿಕೃಷ್ಣ ಕಲ್ಲಾಜೆ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಮುರಳಿಕೃಷ್ಣ ಹಸಂತಡ್ಕ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸುತ್ತಿದ್ದಂತೆ ದೇವಳದ ಕಂಬಳದ ಕರೆಯ ಬಳಿ ವಿಶೇಷ ಸುಡುಮದ್ದು ಪ್ರದರ್ಶನ ನಡೆಯಿತು.
ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರ ಕಿರುವಾಳು ಆಗಮನದ ವೇಳೆ ರಾತ್ರಿ ಗಂಟೆ 8.16ಕ್ಕೆ ಮಳೆಯ ಸಿಂಚನ ಆಯಿತು.ಮಳೆ ಒಮ್ಮೆ ಜೋರಾಗಿ ಬಂದು ಸುಮಾರು 9ಕ್ಕೆ ಮಳೆ ನಿಂತಿದೆ. ಮಳೆ ಬರುವ ಮುಂದೆ ಉಳ್ಳಾಲ್ತಿ ಅಮ್ಮನವರ ಅಂಕದ ಕಟ್ಟೆಯಲ್ಲಿ ಮಲ್ಲಿಗೆ ಸಮರ್ಪಣೆ ಮಾಡಲು ಭಕ್ತರ ಸರತಿ ಸಾಲು ಮುಖ್ಯರಸ್ತೆಯಿಂದ ಮಾರ್ಕೆಟ್ ರಸ್ತೆಯ ತನಕ ತಲುಪಿತ್ತು.ಮಳೆಯ ಸಿಂಚನವಾದಾಗ ಭಕ್ತರು ಚದುರಿದರು. ಈ ನಡುವೆ ಉಳ್ಳಾಲ್ತಿ ಅಮ್ಮನವರ ಭಂಡಾರ ಮಳೆಯಿಂದಾಗಿ ಸ್ವಲ್ಪ ಹೊತ್ತು ಬಪ್ಪಳಿಗೆ ಶ್ರೀ ಸತ್ಯನಾರಾಯಣ ಕಟ್ಟೆಯ ಬಳಿ ಸ್ಥಗಿತಗೊಳಿಸಲಾಯಿತು.ಉಳ್ಳಾಲ್ತಿ ಅಮ್ಮನವರ ಭಂಡಾರದ ಪಲ್ಲಕಿಗೆ ದೈವಸ್ಥಾನದ ಪರಿಚಾರಕರು ಪ್ಲಾಸ್ಟಿಕ್ ಹೊದಿಕೆ ಹಾಕಿ ಕೈಯಲ್ಲಿ ಹಿಡಿದು ಕೊಂಡಿದ್ದರು.ಉಳಿದಂತೆ ದೈವದ ಪಾತ್ರಿಗಳು ಮಳೆಗೆ ನೆನೆದರು. ಮಳೆ ಬಿಟ್ಟ ಬಳಿಕ ಮತ್ತೆ ಭಂಡಾರವನ್ನು ಹೊರಡಿಸಲಾಯಿತು.
ದೇವಳದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಮತ್ತು ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರ ಕಿರುವಾಳು ಎದುರುಗೊಳ್ಳುವ ಸಂದರ್ಭ ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ, ವೇ.ಮೂ.ವಿ.ಎಸ್ ಭಟ್ ಮತ್ತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರುಗಳು, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ರವೀಂದ್ರ, ಮಾಜಿ ಆಡಳಿತ ಮೊಕ್ತಸರ ಎನ್.ಕೆ.ಜಗನ್ನಿವಾಸ ರಾವ್,ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಮಾಜಿ ಸದಸ್ಯರು ಸಹಿತ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಈ ಸಂದರ್ಭ ಉಪಸ್ಥಿತರಿದ್ದರು.
.jpeg)
.jpeg)

.jpeg)