-->
POLITICS: `ಯಾರೂ ಕೂಡ ಪುತ್ತೂರು ಕಾಂಗ್ರೆಸ್ ಭವನ ಶಿಲಾನ್ಯಾಸದ ಹತ್ತಿರ ಹೋಗಬೇಡಿ'

POLITICS: `ಯಾರೂ ಕೂಡ ಪುತ್ತೂರು ಕಾಂಗ್ರೆಸ್ ಭವನ ಶಿಲಾನ್ಯಾಸದ ಹತ್ತಿರ ಹೋಗಬೇಡಿ'


ಪುತ್ತೂರು: ಮುಸ್ಲಿಂ ಸಮುದಾಯಕ್ಕೆ ಅಪಮಾನ ಆಗಿದೆ, ಯಾರೂ ಕೂಡ ಪುತ್ತೂರಿನಲ್ಲಿ ನಡೆಯುವ ಕಾಂಗ್ರೆಸ್ ಭವನದ ಶಿಲಾನ್ಯಾಸದ ಕಾರ್ಯಕ್ರಮದ ಹತ್ತಿರ ಹೋಗಬಾರದು ಅಂತ ದ.ಕ. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅಶ್ರಫ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಭವನದ ಶಿಲಾನ್ಯಾಸದಲ್ಲಿ ಮುಸಲ್ಮಾನರ ಹೆಸರು ಹಾಕಿದ್ರೆ ಏನಾಗುತ್ತೆ? ಇಲ್ಲಾಂದ್ರೆ ಆ ಕಾರ್ಯಕ್ರಮಕ್ಕೆ ಯಾರೂ ಬರಬೇಡಿ ಎಂದು ನೇರವಾಗಿ ಹೇಳಿ. ಮುಸಲ್ಮಾನರ ಹೆಸರು ಹಾಕದಂತೆ ಪುತ್ತೂರು ಶಾಸಕ ಅಶೋಕ್ ರೈ ಅವರ ಕೈವಾಡ ಇದೆಯಾ? ಎಂದು ಕಿಡಿಕಾರಿದ್ದಾರೆ. 


ಕಾಂಗ್ರೆಸ್ ಪಕ್ಷದ ನಡೆಯಿಂದ ಮುಸ್ಲಿಂ ಸಮುದಾಯಕ್ಕೆ ನೋವಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಕಾರ್ಯಕರ್ತರು ಪ್ರಶ್ನೆ ಮಾಡ್ತಾ ಇದ್ದಾರೆ ಎಂದ ಅವರು, ಮುಸಲ್ಮಾನ ನಾಯಕರಿಂದ ಯಾರಿಗಾದ್ರೂ ತೊಂದರೆ ಆಗೋದಾದ್ರೆ ಅದನ್ನ ನೇರವಾಗಿ ಹೇಳಲಿ ಎಂದು ಹೇಳಿದರು. 

ಕಳೆದ ಚುನಾವಣೆಯಲ್ಲೂ 80% ಮುಸಲ್ಮಾನರು ಕಾಂಗ್ರೆಸ್ ಓಟ್ ಹಾಕಿದ್ದಾರೆ. ಹೀಗಿರುವಾಗ ಪುತ್ತೂರಿನ ಕಾಂಗ್ರೆಸ್ ಭವನ ಶಿಲಾನ್ಯಾಸ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮುಸಲ್ಮಾನ ನಾಯಕರನ್ನ ಕಡೆಗಣಿಸಿದ್ದು ಸರಿಯಲ್ಲ. ಮುಸಲ್ಮಾನರಿಗೆ ಇದರಿಂದ ತುಂಬಾ ನೋವಾಗಿದೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ತೋರಿಸುವುದು ಎಸ್‍ಡಿಪಿಐನವರಲ್ಲ, ಕಾಂಗ್ರೆಸ್ ಪಕ್ಷದ ಮೇಲೆ ಪ್ರೀತಿ ಇರುವ ಕಾರ್ಯಕರ್ತರು. ತಪ್ಪಾಗಿದೆ ಎಂದು ಅರ್ಥವಾದ ಬಳಿಕ ಮತ್ತೆ ಆಹ್ವಾನ ಪತ್ರಿಕೆ ಮರು ಮುದ್ರಣ ಮಾಡಿ ಇನಾಯತ್ ಆಲಿ ಅವರ ಹೆಸರು ಹಾಕಿದ್ದಾರೆ. ಇನಾಯತ್ ಆಲಿ ಪುತ್ತೂರಿಗೆ ಸಂಬಂಧಿಸಿದವರಲ್ಲ. ಅವರು ಸುರತ್ಕಲ್ ನವರು, ಅಲ್ಲದೇ ಅವರು ರಾಜ್ಯ ಮಟ್ಟದ ನಾಯಕ ಅಲ್ಲ. ಸ್ಥಳೀಯ ನಾಯಕರು ಪುತ್ತೂರಿನಲ್ಲಿ ತುಂಬಾ ಜನ ಇದ್ದಾರೆ. ಪ್ರಚಾರ ಸಮಿತಿ ಅಧ್ಯಕ್ಷ ಮಹಮ್ಮದ್ ಆಲಿ ಪುತ್ತೂರಿನವರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನವಾಝ್ ಹೆಸರು ಹಾಕಬಹುದಿತ್ತು. ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹೆಸರು ಹಾಕಬಹುದಿತ್ತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ನಿಗಮದ ಅಧ್ಯಕ್ಷ ಗಫೂರ್, ಟಿ.ಎಂ. ಶಹೀದ್ ಆ ಭಾಗದವರೇ ಅವರ ಹೆಸರು ಹಾಕಬಹುದಿತ್ತು. ಇದರಲ್ಲಿ ಹೆಸರು ಹಾಕದೇ ಇರೋ ಹುನ್ನಾರ ಯಾರದ್ದು? ಈ ತಪ್ಪು ಯಾರು ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ಆಗಲಿ. ಇದರಲ್ಲಿ ಮುಸಲ್ಮಾನರ ಹೆಸರು ಹಾಕದಂತೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಕೈವಾಡ ಇದೆಯಾ ಎಂದು ಕಿಡಿಕಾರಿದ್ರು. 


ಇನ್ನು ಜಿಲ್ಲಾ ಕಾಂಗ್ರೆಸ್ ಹಾಗೂ ರಾಜ್ಯ ಕಾಂಗ್ರೆಸ್ ಈ ಎಲ್ಲಾ ಬೆಳವಣಿಗೆಯ ಬಗ್ಗೆ ತನಿಖೆ ಮಾಡಿ ಮುಸಲ್ಮಾನರಿಗೆ ನ್ಯಾಯ ದೊರಕಿಸಿ ಕೊಡಬೇಕು. ಇಷ್ಟು ದೊಡ್ಡ ಕಾಂಗ್ರೆಸ್ ಪಕ್ಷ ಯಾವುದೇ ಕಾರ್ಯಕ್ರಮ ಮಾಡುವಾಗ ಆಲೋಚನೆ ಮಾಡಿ ಮಾಡಬೇಕು. ಇದನ್ನು ಡಿಕೆ ಶಿವಕುಮಾರ್ ಅವರು ತನಿಖೆ ಮಾಡಬೇಕು ಅನ್ನೋದು ನಮ್ಮ ಆಗ್ರಹ ಎಂದರು. ಅಷ್ಟೇ ಅಲ್ಲದೇ ಮುಸಲ್ಮಾನರು ಆ ಕಾರ್ಯಕ್ರಮಕ್ಕೆ ಬೇಡ ಅಂದ ಮೇಲೆ ನಮ್ಮ ಕಾರ್ಯಕರ್ತರು ಅದರಿಂದ ದೂರ ಉಳಿಯಲಿ. ಕಾಂಗ್ರೆಸ್ ಪಕ್ಷದ ವೇದಿಕೆ ಅಥವಾ ಆ ಕಾರ್ಯಕ್ರಮದ ಹತ್ತಿರ ಸುಲಿಯೋದು ಬೇಡ, ಅದು ದೊಡ್ಡ ಅಪಮಾನ ಮಾಡಿದಂತಾಗಿದೆ. ನಮ್ಮ ಸಮುದಾಯಕ್ಕೆ ಅಪಮಾನ ಆಗಿದೆ. ಯಾರೂ ಕೂಡ ಪುತ್ತೂರಿನ ಕಾಂಗ್ರೆಸ್ ಭವನ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಹತ್ತಿರ ಹೋಗಬೇಡಿ ದೂರದಿಂದ ನೋಡಿ. ಇಷ್ಟೆಲ್ಲಾ ಆಕ್ರೋಶ ಆಗಿದ್ದಕ್ಕೆ ಸ್ಥಳೀಯ ನಾಯಕರೇ ಕಾರಣ, ಇದೆಲ್ಲ ನಮ್ಮ ರಾಜ್ಯದ ನಾಯಕರಿಗೆ ಗೊತ್ತಿರಲ್ಲ. ನಮ್ಮ ಸಮುದಾಯಕ್ಕೆ ಅನ್ಯಾಯ ಆದಾಗ ಮಾತನಾಡಿದ್ರೆ ಪಕ್ಷದ್ರೋಹಿ ಅಂತ ನಮಗೆ ನೊಟೀಸ್ ಕೊಡ್ತಾರೆ ಎಂದ ಅವರು, ನಾವು ಪಕ್ಷ ವಿರೋಧಿ ಮಾತನಾಡ್ತಾ ಇಲ್ಲ, ಪಕ್ಷಕ್ಕೆ ಆಗೋ ಅನ್ಯಾಯ ಡ್ಯಾಮೇಜ್ ಬಗ್ಗೆ ಮಾತನಾಡ್ತಾ ಇದ್ದೇವೆ. ಅಲ್ಲಿನ ಸ್ಥಳೀಯ ಶಾಸಕರಿಗೆ ಅರ್ಥ ಆಗಲ್ವಾ? ಅವರು ಆಹ್ವಾನ ಪತ್ರಿಕೆ ಮಾಡುವಾಗ ನೋಡಿ ಮಾಡಬೇಕಲ್ವ ಎಂದು ಆಕ್ರೋಶ ಹೊರಹಾಕಿದ್ರು. 

Ads on article

Advertise in articles 1

advertising articles 2

Advertise under the article