PUTTUR: ಪುತ್ತೂರು ಬಿಜೆಪಿಯಲ್ಲಿ ಮುಂದುವರಿದ ಮುನಿಸಿನ ಗುದ್ದಾಟ!?
ಪುತ್ತೂರು: ಇಂದು ಪುತ್ತೂರಿನಲ್ಲಿ ನಡೆದ ಅಟಲ್ ವಿರಾಸತ್ ಸಮಾವೇಶಕ್ಕೆ ಪುತ್ತಿಲ ಪರಿವಾರದ ನಾಯಕ ಅರುಣ್ ಕುಮಾರ್ ಪುತ್ತಿಲ ಮತ್ತೆ ಗೈರಾಗುವ ಮೂಲಕ ಬಿಜೆಪಿ ಶಕ್ತಿ ಪ್ರದರ್ಶನದ ವೇದಿಕೆಯಲ್ಲಿ ಭಿನ್ನಮತ ಬಟಾಬಯಾಲಾಗಿದೆ.
ಹೌದು ಇಂದು ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಕರಾವಳಿ ಜಿಲ್ಲೆಯ ಸಂಸದರು ಹಾಗೂ ಶಾಸಕರ ಸಹಿತ ಅನೇಕ ನಾಯಕರು ಅಟಲ್ ವಿರಾಸತ್ ಸಮಾವೇಶದಲ್ಲಿ ಭಾಗಿಯಾಗಿದ್ರು. ಆದ್ರೆ ಬಿಜೆಪಿಯ ಕಾರ್ಯಕ್ರಮದಲ್ಲಿ ಅರುಣ್ ಕುಮಾರ್ ಪುತ್ತಿಲ ಕಾಣಿಸಲಿಲ್ಲ. ಈ ಮೂಲಕ ಪುತ್ತೂರಿನಲ್ಲಿ ಬಿಜೆಪಿಯಲ್ಲಿ ಮುನಿಸು ಮತ್ತೆ ಮುಂದುವರಿದಿದೆ. ಇದರೊಂದಿಗೆ ಪುತ್ತೂರಿನ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಮತ್ತೆ ಸಾಬೀತಾಗಿದೆ. ಇನ್ನು ಅರುಣ್ ಕುಮಾರ್ ಪುತ್ತಿಲ ಅನುಪಸ್ಥಿತಿ ಬಗ್ಗೆ ಕಾರ್ಯಕರ್ತರು ಅಸಮಾಧಾನ ಹೊಂದಿದ್ದು ಒಂದು ಕಡೆಯಾದ್ರೆ, ಇತ್ತ ಬಿಜೆಪಿ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಅರುಣ್ ಕುಮಾರ್ ಪುತ್ತಿಲ ಫ್ಯಾನ್ಸ್ ಫೇಸ್ ಬುಕ್ ಪೇಜ್ ನಲ್ಲಿ 2028 ವಿಧಾನಸೌಧಕ್ಕೆ ಪುತ್ತಿಲ ಅನ್ನೋ ಟ್ಯಾಗ್ ಲೈನ್ ಮೂಲಕ ಪುತ್ತೂರು ಕ್ಷೇತ್ರದ ಅಭ್ಯರ್ಥಿ ಅನ್ನೋ ಪ್ರಚಾರದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಮೂಲಕ ಪುತ್ತೂರು ಬಿಜೆಪಿ ಮತ್ತೆ ಒಡೆದ ಮನೆಯಾಗಿದೆ.
ಇನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಕಳೆದ 2023ರ ಚುನಾವಣೆಯಲ್ಲಿ ಪಕ್ಷೇತರನಾಗಿ ಕಣಕ್ಕಿಳಿದು ಬಿಜೆಪಿಯನ್ನು ಸೋಲಿಸಿದ್ದರು. ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬೆನ್ನಲ್ಲೇ ರಾತ್ರೋ ರಾತ್ರಿ ಬಿಜೆಪಿಗೆ ಸೇರ್ಪ ಡೆಗೊಂಡಿದ್ದರು. ಇವೆಲ್ಲವೂ ಪುತ್ತೂರಿನ ಬಿಜೆಪಿ ಬಣ ರಾಜಕೀಯದ ಹೈಡ್ರಾಮಗಳಿಗೆ ಸಾಕ್ಷಿಯಾಗಿತ್ತು. ಇದೀಗ ಎಲ್ಲವೂ ಸರಿಹೋಯ್ತು ಅನ್ನುವ ಮಟ್ಟಿಗೆ ಒಂದಾಗಿದ್ರೂ, ಇಂದು ನಡೆದ ಅಟಲ್ ವಿರಾಸತ್ ಕಾರ್ಯಕ್ರಮಕ್ಕೆ ಅರುಣ್ ಪುತ್ತಿಲ ಗೈರಾಗುವ ಮೂಲಕ ಬಿಜೆಪಿ ಒಡೆದ ಮನೆ ಎಂದು ಸಾಬೀತಾಗಿದೆ.
ಇನ್ನು ಈ ಬಗ್ಗೆ ಮಾಧ್ಯಮದವರು ಪುತ್ತಿಲ ಗೈರಾದ ವಿಚಾರವನ್ನು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬಳಿ ಪ್ರಶ್ನೆ ಹಾಕಿದಾಗ ನೊ ರಿಯಾಕ್ಷನ್ ಎಂದು ತೆರಳಿದ್ದಾರೆ. ಪುತ್ತೂರಿನ ಬಿಜೆಪಿಯ ಈ ಎಲ್ಲಾ ಗುದ್ದಾಟ 2028ರ ಚುನಾವಣೆ ವೇಳೆಗೆ ಶಮನಗೊಳ್ಳುತ್ತಾ ಎಂಬುದು ರಾಜಕೀಯ ಪಂಡಿತರ ಲೆಕ್ಕಚಾರ.

