ಉಳ್ಳಾಲ: ವಲಸರಿ ಹೋಗುವ ಗದ್ದೆಯಲ್ಲಿ ತ್ಯಾಜ್ಯ ರಾಶಿ; ಕೆಂಡಾಮಂಡಲವಾದ ದೈವ!
Friday, December 27, 2024
ಮಂಗಳೂರು: ದೈವದ ನೇಮ ಆಗುವ ಗದ್ದೆಯಲ್ಲಿ ಕಸ-ಕಡ್ಡಿ, ತ್ಯಾಜ್ಯರಾಶಿಯನ್ನು ಕಂಡು ದೈವ ಕೆಂಡಾಮಂಡಲವಾದ ಘಟನೆ ಮಂಗಳೂರು ಹೊರವಲಯದ ಕನೀರುತೋಟದಲ್ಲಿ ನಡೆದಿದೆ. ತೊಕ್ಕೊಟ್ಟು ಕುಂಪಲ ಬಳಿಯ ಕನೀರುತೋಟದಲ್ಲಿ ಮಲಯಾಳ ಚಾಮುಂಡಿ ದೈವದ ಕಟ್ಟೆಜಾತ್ರೆ ಬುಧವಾರ ನಡೆದಿತ್ತು. ರಾತ್ರಿ ಇಲ್ಲಿ ವೈದ್ಯನಾಥ ದೈವದ ನೇಮ ಹಾಗೂ ವಲಸರಿ ಸೇವೆಯಿತ್ತು. ಆವೇಶವಾಗಿ ಅಣಿಯೇರಿ ನೇಮ ನಡೆದು ಇನ್ನೇನು ವಲಸರಿ ಹೊರಡಬೇಕು ಎನ್ನುವಾಗ ವೈದ್ಯನಾಥ ದೈವವು ಆಡಳಿತ ಮಂಡಳಿಯ ಮೇಲೆ ಕೆಂಡಾಮಂಡಲವಾಗಿದೆ. ನೇಮ ನಡೆಯುವ ಗದ್ದೆಯಲ್ಲಿ ತ್ಯಾಜ್ಯದ ರಾಶಿಯೇ ಇದಕ್ಕೆ ಕಾರಣ. "ಇದೇನು ವಲಸರಿ ಗದ್ದೆಯೋ, ಸಂತೆಗದ್ದೆಯೋ?. ನಾನು ಎಂಜಲು ತುಳಿದು ಹೋಗಬೇಕೇ? ತ್ಯಾಜ್ಯ ತೆಗೆಯದೆ, ದೀಪದ ದಳಿಯಲ್ಲಿ ಇರುವ ಸಂತೆ ತೆಗೆಯದೆ ವಲಸರಿ ಇಳಿಯೋಲ್ಲ" ಎಂದು ವೈದ್ಯನಾಥ ದೈವ ಕೋಪಾವೇಶದಲ್ಲಿ ನುಡಿದಿದೆ.