ಮಂಗಳೂರಿನಲ್ಲಿ ಸರಕಾರ ಕಾಂಗ್ರೆಸ್ನದ್ದೋ? ಬಿಜೆಪಿಯದ್ದೋ? 'ಖಾದರ್ ಕಾಕ' ವಿರುದ್ಧ ಮುನೀರ್ ಕಾಟಿಪಳ್ಳ ಮತ್ತೊಂದು ಟೀಕಾಸ್ತ್ರ!
Thursday, December 5, 2024
ಮಂಗಳೂರು: ಬುಧವಾರ ಹಿಂದೂ ಹಿತರಕ್ಷಣಾ ಸಮಿತಿ ಹೆಸರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿಯ ಹಲವು ನಾಯಕರು, ಶಾಸಕರು ಹಾಗೂ ಸಂಘಪರಿವಾರದ ಮುಖಂಡರು ಭಾಗಿಯಾಗಿದ್ದರೂ, ಪಾಂಡೇಶ್ವರ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಯಾರೊಬ್ಬರ ಹೆಸರನ್ನು ಉಲ್ಲೇಖಿಸದೇ ಎಫ್ಐಆರ್ ದಾಖಲಿಸಲಾಗಿದೆ. ಈ ಕುರಿತಂತೆ ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ಹಾಗೂ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ವಿರುದ್ಧ ಸಾಮಾಜಿಕ ಹೋರಾಟಗಾರ, ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಹರಿಹಾಯ್ದಿದ್ದಾರೆ.
ಜನಪರ ಪ್ರತಿಭಟನೆಗೆ ಅವಕಾಶ ನೀಡದ ಪೊಲೀಸ್ ಕಮೀಷನರ್ ಅವರಿಗೆ ಸಂಘಪರಿವಾರ ಎಂದರೆ ಅಚ್ಚುಮೆಚ್ಚು. ನಿಯಮ ಉಲ್ಲಂಘಿಸುತ್ತಾರೆ ಎಂದು ಗೊತ್ತಿದ್ರೂ ಬಿಜೆಪಿ ಪರಿವಾರದ ಸಂಘಟನೆಗಳಿಗೆ ಅನುಮತಿ ನೀಡಲಾಗಿದೆ. ಪ್ರತಿಭಟನೆ ಸಮಯದಲ್ಲಿ ನಿಯಮ ಉಲ್ಲಂಘಿಸಿದ್ದರಿಂದ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾದ ಒತ್ತಡದ ಹಿನ್ನೆಲೆ FIR ದಾಖಲಿಸಲಾಗಿದೆ. ಆದರೆ, ಪ್ರಕರಣದಲ್ಲಿ ಯಾರೊಬ್ಬರ ಹೆಸರನ್ನು ಉಲ್ಲೇಖಿಸಲಾಗಿಲ್ಲ.
ಪ್ರತಿಭಟನೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್, ಶರಣ್ ಪಂಪ್ವೆಲ್, ವೇದವ್ಯಾಸ ಕಾಮತ್, ಮೇಯರ್, ಮಾಜಿ ಮೇಯರ್ ಎಲ್ಲರೂ ಭಾಗವಹಿಸಿದ್ದರು. ಶಾಸಕ ವೇದವ್ಯಾಸ ಕಾಮತ್ ಡಿಸಿಪಿ ಜೊತೆಗೆ ವಾಗ್ವಾದ ನಡೆಸಿರುವ ವೀಡಿಯೋ ಮಾಧ್ಯಮಗಳಲ್ಲಿ ಬಂದಿದ್ರೂ, ಅವರ್ಯಾರ ಹೆಸರನ್ನು FIR ನಲ್ಲಿ ನಮೂದಿಸಿಲ್ಲ. ಇದು ಕಣ್ಣಿಗೆ ಮಣ್ಣೆರೆಚುವ ತಂತ್ರವಾಗಿದೆ. ಮಂಗಳೂರಿನಲ್ಲಿರುವುದು ಕಾಂಗ್ರೆಸ್ ಸರಕಾರವೋ, ಬಿಜೆಪಿ ಸರಕಾರವೋ ಖಾದರ್ ಕಾಕಾ ಈಗೆನ್ನುತ್ತಾರೆ ಎಂದು ಮುನೀರ್ ಕಾಟಿಪಳ್ಳ ಹರಿಹಾಯ್ದಿದ್ದಾರೆ.