-->
ಮಂಜನಾಡಿ ಗ್ಯಾಸ್‌ ಸ್ಫೋಟ ದುರಂತ: ಸೂಕ್ತ ತನಿಖೆಗೆ ಆಗ್ರಹಿಸಿದ ಮುನೀರ್‌ ಕಾಟಿಪಳ್ಳ ವಿರುದ್ಧ ಮುಗಿಬಿದ್ದ ಸ್ಪೀಕರ್ & ಟೀಂ!

ಮಂಜನಾಡಿ ಗ್ಯಾಸ್‌ ಸ್ಫೋಟ ದುರಂತ: ಸೂಕ್ತ ತನಿಖೆಗೆ ಆಗ್ರಹಿಸಿದ ಮುನೀರ್‌ ಕಾಟಿಪಳ್ಳ ವಿರುದ್ಧ ಮುಗಿಬಿದ್ದ ಸ್ಪೀಕರ್ & ಟೀಂ!

 


ಮಂಗಳೂರು: ಮಂಜನಾಡಿ ಗ್ಯಾಸ್ ಸ್ಫೋಟ ದುರಂತ ಕುರಿತಂತೆ ಸೂಕ್ತ ತನಿಖೆ ಹಾಗೂ ಪರಿಹಾರ ಘೋಷಿಸಬೇಕೆಂದು ಆಗ್ರಹಿಸಿದ್ದ ಸಾಮಾಜಿಕ ಕಾರ್ಯಕರ್ತರನ್ನು ಗುರಿಯಾಗಿಸುವ ಪ್ರಕ್ರಿಯೆಯನ್ನು ಕಾಂಗ್ರೆಸ್‌ ಮುಂದುವರೆಸಿದೆ. ಸ್ಪೀಕರ್‌ ಯುಟಿ ಖಾದರ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ, ಘಟನೆ ಏನು, ನಡೆದಿದ್ದು ಎಲ್ಲಿ ಎಂದು ಗೊತ್ತಿಲ್ಲದವರು ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದರು. ಇದಾದ ಬೆನ್ನಿಗೆ ಖಾದರ್‌ ಆಪ್ತ ಎನ್‌ಎಸ್‌ ಕರೀಂ ಎಂಬವರು ಪತ್ರಿಕಾ ಹೇಳಿಕೆ ಕೊಟ್ಟಿದ್ದು, ಮುನೀರ್‌ ಕಾಟಿಪಳ್ಳ ವಿರುದ್ಧ ಹರಿಹಾಯ್ದಿದ್ದಾರೆ. ಈ ಮೂಲಕ ಆಡಳಿತರೂಢ ಕಾಂಗ್ರೆಸ್‌ ಪಕ್ಷದ ನಾಯಕರು ಸೂಕ್ತ ಪರಿಹಾರ ಹಾಗೂ ಉನ್ನತ ಸಮಿತಿಯ ತನಿಖೆಗೆ ಆಗ್ರಹಿಸಿದವರನ್ನೇ ಟೀಕಿಸುವ ರೇಸ್‌ಗೆ ಇಳಿದಿದ್ದು ಕಾಂಗ್ರೆಸ್‌ನ ಈ ರೀತಿಯ ರಾಜಕೀಯಕ್ಕೆ ಜನರು ಅಚ್ಚರಿ ಪಡುವಂತಾಗಿದೆ.


ಅಷ್ಟಕ್ಕೂ ಮುನೀರ್‌ ಕಾಟಿಪಳ್ಳ ಹೇಳಿದ್ದೇನು?

ಉಳ್ಳಾಲ ತಾಲೂಕು ಮಂಜನಾಡಿಯ ಮನೆಯೊಂದರಲ್ಲಿ ನಡೆದ ಅಡುಗೆ ಅನಿಲ ಸಿಲಿಂಡರ್ ಸ್ಪೋಟದಲ್ಲಿ ಮೃತ ಪಟ್ಟವರ ಸಂಖ್ಯೆ ಮೂರಕ್ಕೆ ಏರಿದೆ. ಗಾಯಾಳುಗಳಾಗಿ ತೀವ್ರ ನಿಗಾ ವಿಭಾಗದಲ್ಲಿ ದಾಖಲಾಗಿದ್ದ ತಾಯಿ ಹಾಗೂ ಮೂವರು ಹೆಣ್ಣುಮಕ್ಕಳಲ್ಲಿ ಮೂರು ವಾರಗಳ ಅವಧಿಯಲ್ಲಿ ಮೂವರು ಮೃತ ಪಟ್ಟಿದ್ದಾರೆ. ದುರಂತದ ದಾರುಣತೆಗೆ ಜನ ಸಮೂಹ ದುಃಖತಪ್ತವಾಗಿದೆ. ಜೊತೆಗೆ ಬೆಚ್ಚಿಬಿದ್ದಿದೆ. ರಾಜ್ಯ ಸರಕಾರ ಪರಿಹಾರ ಧನ ಘೋಷಿಸಲು ವಿಳಂಬ ಮಾಡುತ್ತಿರುವುದು ಜನತೆಯ ನೋವನ್ನು ಮತ್ತಷ್ಟು ಹೆಚ್ಚಿಸಿದೆ.

 ನೋವಿನ ಜೊತೆಗೆ ಜನತೆ ಬೆಚ್ಚಿ ಬೀಳಲು ಪ್ರಮುಖ ಕಾರಣ, ಮನೆಯುಲ್ಲಿ ಹೆಚ್ಚುವರಿಯಾಗಿದ್ದ ಎರಡನೇ ಸಿಲಿಂಡರ್ ಸೋರಿಕೆ ಗೊಂಡಿರುವುದು, ವಿದ್ಯುತ್ ಸ್ವಿಚ್ ಆನ್ ಮಾಡುವಾಗ ಸೋರಿಕೆಯಾದ ಗ್ಯಾಸ್ ಗೆ ಬೆಂಕಿ ಹತ್ತಿ ಅನಾಹುತ ಸಂಭವಿಸಿರುವುದು. ಇದು ಖಂಡಿತವಾಗಿಯೂ ಭಯ ಹುಟ್ಟಿಸುವ ವಿದ್ಯಮಾನ. ಮಂಜನಾಡಿ ಮಾತ್ರ ಅಲ್ಲ, ಅವಧಿಯಲ್ಲಿ ಇನ್ನೂ ಕೆಲವೆಡೆ ಮನೆಗಳಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಅವಘಡಗಳು ಸಂಭವಿಸಿರುವುದು, ಪ್ರಾಣಹಾನಿ ಸಂಭವಿಸಿರುವುದೂ ವರದಿಯಾಗಿದೆ. ಹಲವು ಮನೆಗಳಲ್ಲಿ ಸಿಲಿಂಡರ್ ನಲ್ಲಿ ಸಣ್ಣ ಪ್ರಮಾಣದ ಸೋರಿಕೆಯಾಗುವ ಕುರಿತು ಆರೋಪಗಳೂ ಇವೆ‌. ಅದರಲ್ಲಿಯೂ ಸ್ಟೌ ಗೆ ಸಂಪರ್ಕಗೊಳ್ಳದ ಹೆಚ್ಚುವರಿ ಸಿಲಿಂಡರ್ ಸೋರಿಕೆಗೊಳ್ಳುವುದು ತೀರಾ ಅಪಾಯಕಾರಿ. ಇದೆಲ್ಲದರಿಂದಾಗಿ ಮಂಜನಾಡಿ ದುರಂತದಲ್ಲಿ ಪ್ರಾಣಹಾನಿ ಹೆಚ್ಚುತ್ತಲೆ ಅಡುಗೆ ಅನಿಲ ಬಳಸುವ ಜನರಲ್ಲಿ ಆತಂಕವೂ ಹೆಚ್ಚುತ್ತಿದೆ.

 ಮಂಜನಾಡಿ ಮನೆಯಲ್ಲಿ ನಡೆದ ಅಡುಗೆ ಅನಿಲ ಸ್ಪೋಟದ ನೇರ ಹೊಣೆ ಅಡುಗೆ ಅನಿಲ ಒದಗಿಸುವ ಕಂಪೆನಿಯದ್ದಾಗಿದೆ. ಸಂತ್ರಸ್ತ ಕುಟುಂಬಕ್ಕೆ ಪರಿಹಾರದ ಜೊತೆಗೆ ಕುರಿತು ಪಾರದರ್ಶಕ ತನಿಖೆಗೆ ಸರಕಾರ ಆದೇಶಿಸಬೇಕಿದೆ. ಸ್ಥಳೀಯ ಶಾಸಕ ಯು ಟಿ ಖಾದರ್ ಅವರು ಪ್ರಕರಣವನ್ನು ನಿಯಮಗಳಿಗಿಂತ ಮಾನವೀಯ ದೃಷ್ಟಿಯಿಂದ ನೋಡುವಂತೆ, ದೃಷ್ಟಿಯಲ್ಲಿ ಪರಿಹಾರ ಒದಗಿಸುವಂತೆ ಅಧಿಕಾರಿಗಳು, ಗ್ಯಾಸ್ ಕಂಪೆನಿಗಳಿಗೆ ತಿಳಿಸಿರುವುದಾಗಿ ಹೇಳಿಕೊಂಡಿದ್ದಾರೆ.. ಶಾಸಕರ ಹೇಳಿಕೆ ಬಹಳಷ್ಟು ಪ್ರಚಾರವೂ ಆಗಿದೆ. ಆದರೆ, ಪ್ರಕರಣ ಮಾನವೀಯ ನೆಲೆಯಲ್ಲಿ ನೋಡಿ, ಅನುಕಂಪದ ಆಧಾರದಲ್ಲಿ ಕಂಪೆನಿ ಒಂದಿಷ್ಟು ಮೊತ್ತ ಪರಿಹಾರ ಒದಗಿಸಿ ಕೈ ತೊಳೆದು ಮುಗಿಸುವಷ್ಟು ಸರಳ ಅಲ್ಲ ಎಂದಿದ್ದರು.

 
ಯುಟಿ ಖಾದರ್‌ ಆಪ್ತನ ಹೇಳಿಕೆ ಏನು?
ಇದಕ್ಕೆ ಪ್ರತಿಕ್ರಿಯಿಸಿರುವ ಯುಟಿ ಖಾದರ್‌ ಆಪ್ತ, ತಮ್ಮ ಶಾಸಕರಲ್ಲಿ ಸೂಕ್ತ ತನಿಖೆ ಆಗ್ರಹಿಸಿದ್ದನ್ನೇ ದೊಡ್ಡ ಇಶ್ಯೂ ಎಂಬಂತೆ ಬಿಂಬಿಸಿದ್ದಾರೆ. ಮುನೀರ್‌ ಕಾಟಿಪಳ್ಳ ಅವರೇ ಬದುಕುಳಿದಿರುವ ಹೆಣ್ಣು ಮಗಳ ಮುಂದಿನ ಚಿಕಿತ್ಸೆ ಭರಿಸಿ ಹಾಗೂ ಉನ್ನತ ಮಟ್ಟದ ತನಿಖೆ ನಡೆಸಿ ಪರಿಹಾರ ಕೊಡಿಸಲಿ ಎಂದು ಬೇಜವಾಬ್ದಾರಿಯುವ ಹೇಳಿಕೆ ಕೊಟ್ಟಿದ್ದಾರೆ.

ನಾಲ್ಕು ಜನ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಉನ್ನತ ಮಟ್ಟದ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಮೂವರು ಮೃತಪಟ್ಟು ಒಬ್ಬರು ಬದುಕುಳಿದಿದ್ದಾರೆ.ನಾವು ನೆರೆಕರೆ ಊರವರು ಕುಟುಂಬಸ್ಥರು ಸೇರಿಕೊಂಡು ನಮ್ಮ ಅನುಭವ ಹಾಗೂ ಜವಾಬ್ದಾರಿಗೆ ತಕ್ಕಂತೆ ನಾಲ್ಕು ಜನರನ್ನು ಉಳಿಸಲು ಸತತ ಪ್ರಾಮಾಣಿಕ ಪ್ರಯತ್ನ ನಡೆಸಿದರೂ ಅಲ್ಲಾಹನ ವಿಧಿಯಿಂದ ಮೂರು ಜನ ಮೃತಪಟ್ಟು ಒಬ್ಬರು ಗಂಭೀರ ಗಾಯಗಳೊಂದಿಗೆ ಬದುಕುಳಿದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಬೇಕಾಬಿಟ್ಟಿ ಗೀಚುವ ಮುನೀರ್ ಕಾಟಿಪಳ್ಳ ಹಾಗೂ ಅವರ ಕೂಟದವರ ರವರ ಪ್ರಕಾರ ನಮ್ಮ ಜವಾಬ್ದಾರಿ,ಹಾಗೂ ಪ್ರಾಮಾಣಿಕತೆ ಸಾಕಾಗದೇ ಇದ್ದರೆ,ಅತ್ಯಂತ ಅನುಭವ,ಜವಾಬ್ದಾರಿ ಪ್ರಾಮಾಣಿಕತೆ ಇರುವ ನೀವು ಮುಂದೆ ಬಂದು ಬದುಕುಳಿದಿರುವ ಆ ಹೆಣ್ಣುಮಗಳ ಮುಂದಿನ ಚಿಕಿತ್ಸೆ ಹಾಗೂ ಉನ್ನತ ಮಟ್ಟದ ತನಿಖೆಯ ಜವಾಬ್ದಾರಿಯನ್ನು ಬಂದು ವಹಿಸಿ ಗ್ಯಾಸ್ ಏಜೆನ್ಸಿಯಿಂದ ಈಗಿನ ಮೊತ್ತಕಿಂತ ಹೆಚ್ಚಿನ ಪರಿಹಾರ ತೆಗೆಸಿ ಕೊಟ್ಟರೆ ನಮಗೆ ಬಹಳಷ್ಟು ಸಂತೋಷ.

ಆದರೆ ಸಮಗ್ರ ತನಿಖೆಯಾಗಿ ಈಗ ಸಿಗುವ ಪರಿಹಾರವೂ ಸಿಗದೇ ಹೋದರೆ ಅದರ ಜವಾಬರಿಯನ್ನು ಕೂಡಾ ನೀವೇ ವಹಿಸಿಕೊಳ್ಳಬೇಕು ಎಂದು ನಮ್ಮ ಎಲ್ಲಾ ಊರವರ ಪರವಾಗಿ ಮನವಿ ಮಾಡಿಕೊಳ್ಳುತ್ತೇನೆಂದು ಕಾಂಗ್ರೆಸ್ ಮುಖಂಡ ಎನ್ ಎಸ್ ಕರೀಮ್ ರವರು ಮನವಿ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಆಡಳಿತವಿದ್ದು, ಘಟನೆ ನಡೆದ ಕ್ಷೇತ್ರವನ್ನು ಕಾಂಗ್ರೆಸ್‌ ಶಾಸಕ ಯುಟಿ ಖಾದರ್‌ ಅವರೇ ಪ್ರತಿನಿಧಿಸುತ್ತಿದ್ದು, ಈಗಿರಬೇಕಿದ್ರೆ ಸೂಕ್ತ ತನಿಖೆಗೆ ಶಾಸಕರನ್ನ ಆಗ್ರಹಿಸುವುದರಲ್ಲಿ ತಪ್ಪೇನು ಅಂತಾ ಇದೀಗ ಉಳ್ಳಾಲ ಭಾಗದ ಕಾಂಗ್ರೆಸ್‌ ಕಾರ್ಯಕರ್ತರೇ ಪ್ರಶ್ನಿಸುವಂತಾಗಿದೆ.

Ads on article

Advertise in articles 1

advertising articles 2

Advertise under the article