.jpg)
ಮಂಗಳೂರು: ಬಸ್‌ನಲ್ಲಿ ತಿಗಣೆ ಕಾಟ; ರಿಯಾಲಿಟಿ ಶೋ ತಾರೆ ಪರ ಗ್ರಾಹಕ ನ್ಯಾಯಾಲಯ ತೀರ್ಪು!
ಮಂಗಳೂರು: ಬಸ್ ಪ್ರಯಾಣದ ವೇಳೆ ತಿಗಣೆ ಕಾಟದಿಂದ ಬೇಸತ್ತ ಮಹಿಳಾ ಪ್ರಯಾಣಿಕರೋರ್ವರು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿ ನಷ್ಟ ಪರಿಹಾರ ಭರಿಸಿಕೊಂಡ ಅಪರೂಪದ ಘಟನೆ ಮಂಗಳೂರಿನಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯವು ಖಾಸಗಿ ಬಸ್ ಹಾಗೂ ಬಸ್ ಬುಕ್ಕಿಂಗ್ ಆ್ಯಪ್ 'ರೆಡ್ ಬಸ್'ಗೆ (RED BUS) ಪರಿಹಾರ ಮೊತ್ತದ ಜತೆಗೆ ದಂಡ ವಿಧಿಸಿದೆ.
ಆಗಸ್ಟ್ 16, 2022 ರಲ್ಲಿ ಖ್ಯಾತ ಕಿರುತೆರೆ ನಟ ಶೋಭರಾಜ್ ಪಾವೂರು ಅವರ ಪತ್ನಿ ದೀಪಿಕಾ ಸುವರ್ಣ 'ರಾಜಾರಾಣಿ' ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಉದ್ದೇಶದಿಂದ ಮಂಗಳೂರಿನಿಂದ ಬೆಂಗಳೂರಿಗೆ ರಾತ್ರಿ 10.30 ರ ಸುಮಾರಿಗೆ ಸೀ ಬರ್ಡ್ ಬಸ್‌ನಲ್ಲಿ ಹೊರಟಿದ್ದರು. ಬಸ್ ಟಿಕೆಟನ್ನು 'ರೆಡ್ ಬಸ್' ಆ್ಯಪ್ ಮೂಲಕ ಕಾಯ್ದಿರಿಸಿದ್ದರು. ಆದರೆ, ಬಸ್‌ನಲ್ಲಿ ವಿಪರೀತ ತಿಗಣೆ ಕಾಟದಿಂದ ದೀಪಿಕಾ ಅವರು ಹಿಂಸೆ ಅನುಭವಿಸಬೇಕಾಗಿ ಬಂದಿತ್ತು.
ಇದರಿಂದಾಗಿ ರಿಯಾಲಿಟಿ ಶೋ ತಯಾರಿ ಮಾಡಲು ಆಗದೆ ಕಷ್ಟ ಅನುಭವಿಸಿದ್ದರು. ರಿಯಾಲಿಟಿ ಶೋನಲ್ಲಿ ಸಿಗುವ ಸಂಭಾವನೆಗೂ ಅಡ್ಡಿಯಾಗಿತ್ತು. ಹೀಗಾಗಿ ಸೀಬರ್ಡ್ ಬಸ್ ಹಾಗೂ ರೆಡ್ ಬಸ್ ವಿರುದ್ದ ದೂರು ದೀಪಿಕಾ ಸುವರ್ಣ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು.
ದಂಡ ವಿಧಿಸಿದ ನ್ಯಾಯಾಲಯ
ಇದೀಗ ವಾದ, ಪ್ರತಿವಾದ ಆಲಿಸಿದ ಗ್ರಾಹಕ ನ್ಯಾಯಾಲಯವು 1 ಲಕ್ಷ ರೂಪಾಯಿ ಪರಿಹಾರ, 18650 ರೂಪಾಯಿ ದಂಡ, 850 ಟಿಕೇಟ್ ಹಣ ಹಾಗೂ ಕಾನೂನು ಸಮರದ 10 ಸಾವಿರ ನೀಡಲು ಆದೇಶವಿತ್ತಿದೆ. ದೂರುದಾರೆ ದೀಪಿಕಾ ಸುವರ್ಣ ಪರ ವಕೀಲ ಎಂ. ಚಿದಾನಂದ ಕೆದಿಲಾಯ ವಾದಿಸಿದ್ದರು.