-->
KUKKE: ಸುಬ್ರಹ್ಮಣ್ಯದಲ್ಲಿ ಭಕ್ತರಿಂದ ಬೀದಿ ಮಡೆಸ್ನಾನ ಸೇವೆ ಆರಂಭ!!

KUKKE: ಸುಬ್ರಹ್ಮಣ್ಯದಲ್ಲಿ ಭಕ್ತರಿಂದ ಬೀದಿ ಮಡೆಸ್ನಾನ ಸೇವೆ ಆರಂಭ!!

                                                                    FILE PHOTO

ಸುಬ್ರಹ್ಮಣ್ಯ: ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಮಹೋತ್ಸವದ ಸಂದರ್ಭ ಸ್ವಯಂಸ್ಫೂರ್ತಿಯಿಂದ ದೇವರಿಗೆ ಸಲ್ಲಿಸುವ ಬೀದಿ ಉರುಳು (ಬೀದಿ ಮಡೆಸ್ನಾನ) ಸೇವೆ ಭಾನುವಾರ ಮುಂಜಾನೆಯಿಂದ ಆರಂಭಗೊಂಡಿತು.

ಸುಬ್ರಹ್ಮಣ್ಯ ಲಕ್ಷ ದೀಪೋತ್ಸವದ ರಥೋತ್ಸವದ ಬಳಿಕ ಭಕ್ತರು ಈ ಸೇವೆ ಆರಂಭಿಸಿದ್ದಾರೆ. ಷಷ್ಠಿಯ ಮಹಾರಥೋತ್ಸವ ಎಳೆಯುವ ವರೆಗೆ ಈ ಸೇವೆಯನ್ನು ಭಕ್ತರು ನೆರವೇರಿಸುತ್ತಾರೆ. ಜಾತ್ರೋತ್ಸವದ ಪ್ರಧಾನ ದಿನವಾದ ಚೌತಿ, ಪಂಚಮಿಯಂದು ಅಧಿಕ ಸಂಖ್ಯೆಯಲ್ಲಿ ಭಕ್ತರು ಈ ಸೇವೆ ನೆರವೇರಿಸುತ್ತಾರೆ.

ಉರುಳು ಸೇವೆ ಮಾಡುವ ಭಕ್ತರು ಕುಮಾರಧಾರ ನದಿಯಲ್ಲಿ ಸ್ನಾನ ಮಾಡಿ ಅಲ್ಲಿಂದ ರಾಜರಸ್ತೆ, ರಥಬೀದಿಯಲ್ಲಿ ಉರುಳಿಕೊಂಡು ದೇವಳಕ್ಕೆ ಬಂದು ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕಿ ಮೂಡು ಬಾಗಿಲಿನಲ್ಲಿ ಹೊರ ಹೋಗಿ ದರ್ಪಣ ತೀರ್ಥ ನದಿಯಲ್ಲಿ ಸ್ನಾನ ಮಾಡಿ ಬಂದು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸುತ್ತಾರೆ.

ಕುಮಾರಧಾರದಿಂದ ದೇವಸ್ಥಾನದವರೆಗೆ ಚತುಷ್ಪಥ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದ್ದು, ರಸ್ತೆಯ ಒಂದು ಭಾಗವನ್ನು ಉರುಳು ಸೇವೆಗಾಗಿ ವ್ಯವಸ್ಥೆಗೊಳಿಸಲಾಗಿದೆ. ದೇವಳದಿಂದ ಪ್ರತಿನಿತ್ಯ ರಸ್ತೆಯನ್ನು  ಸ್ವಚ್ಛಮಾಡಲಾಗುತ್ತಿದೆ.

ಈ ಬಾರಿ ಕಾಂಕ್ರೀಟ್ ರಸ್ತೆಯಲ್ಲಿ ಉರುಳು ಸೇವೆ ಮಾಡಬೇಕಾದ ಕಾರಣ ಸಂಜೆ 5ರಿಂದ ಬೆಳಿಗ್ಗೆ 6 ಗಂಟೆಯ ಒಳಗೆ ಸೇವೆ ಆರಂಭಿಸಬೇಕು. ರಾತ್ರಿ ಮತ್ತು ಮುಂಜಾನೆ ವೇಳೆ ಸೇವೆಯನ್ನು ಕುಮಾರಧಾರೆಯಿಂದ ಆರಂಭಿಸಬೇಕು ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article