ಮಂಗಳೂರು: ವಿವಿ ಮುತ್ತಿಗೆ ವೇಳೆ ಹಾನಿ; ಎಬಿವಿಪಿ ಕಾರ್ಯಕರ್ತರ ಬಂಧನಕ್ಕೆ NSUI ಆಗ್ರಹ!
Friday, November 15, 2024
ಮಂಗಳೂರು: ರಾಜಕೀಯ ದುರುದ್ದೇಶದಿಂದ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ನುಗ್ಗಿ ಎಬಿವಿಪಿ ಕಾರ್ಯಕರ್ತರು ಗೂಂಡಾಗಿರಿ ಮೆರೆದಿದ್ದಾರೆ ಎಂದು ಎನ್ಎಸ್‌ಯುಐ ಆರೋಪಿಸಿದೆ. ಶುಕ್ರವಾರ ಎಬಿವಿಪಿ ನಡೆಸಿದ್ದ 'ಮಂಗಳೂರು ಚಲೋ' ವೇಳೆ ನಡೆದ ಘಟನೆ ಸಂಬಂಧಿಸಿ ಎಬಿವಿಪಿ ಕಾರ್ಯಕರ್ತರನ್ನು ಬಂಧಿಸುವಂತೆ ಎನ್ಎಸ್‌ಯುಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಒತ್ತಾಯಿಸಿದ್ದಾರೆ.
ಎಬಿವಿಪಿ ಸಂಘಟನೆಯು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಂಕಪಟ್ಟಿ ಬಿಡುಗಡೆಗೊಳಿಸುವಂತೆ ಮಂಗಳ ಗಂಗೋತ್ರಿಯಲ್ಲಿ ಪ್ರತಿಭಟನೆಯ ನೆಪದಲ್ಲಿ ಗೂಂಡಾಗಿರಿ ನಡೆಸಿದ್ದು, ವಿಶ್ವವಿದ್ಯಾನಿಲಯದ ಗಾಜುಗಳಿಗೆ ಹಾನಿ ಮಾಡಿರುವುದಲ್ಲದೆ, ಪೊಲೀಸರ ಮೇಲೂ ಹಲ್ಲೆ ನಡೆಸಿದ್ದಾರೆ. ಇದನ್ನು ಎನ್ಎಸ್‌ಯುಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಮತ್ತು ಎಬಿವಿಪಿ ಕಾರ್ಯಕರ್ತರನ್ನು ಬಂಧಿಸಲು ಆಗ್ರಹಿಸುತ್ತದೆ.
ಅಂಕಪಟ್ಟಿ ವಿಷಯಕ್ಕೆ ಸಂಬಂಧಿಸಿದಂತೆ ಎನ್ಎಸ್‌ಯುಐ ಜಿಲ್ಲಾ ಮತ್ತು ಉಳ್ಳಾಲ ಸಮಿತಿ ವತಿಯಿಂದ ಸಭಾಧ್ಯಕ್ಷರಾದ ಯು.ಟಿ ಖಾದರ್ ಮತ್ತು ಉನ್ನತ ಶಿಕ್ಷಣ ಸಚಿವರಾದ ಎಂ.ಸಿ ಸುಧಾಕರ್ ರವರ ಗಮನಕ್ಕೆ ತಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಈ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದ್ದಾರೆ.
ಆದರೆ, ಇದೀಗ ಎಬಿವಿಪಿ ಸಂಘಟನೆಯು ರಾಜಕೀಯ ಲಾಭಕ್ಕೋಸ್ಕರ ವಿಶ್ವವಿದ್ಯಾನಿಲಯಕ್ಕೆ ನುಗ್ಗಿ ಹಾನಿ ಮಾಡಿರುವ ಜೊತೆಗೆ ಪೊಲೀಸರ ಮೇಲೂ ಹಲ್ಲೆ ನಡೆಸಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ದೇವಾಲಯದಂತೆ ಕಾಣುವ ಸಮಾಜದಲ್ಲಿ ಎಬಿವಿಪಿ ಕಾರ್ಯಕರ್ತರ ಈ ವರ್ತನೆಯು ಅವರ ನೈಜ ಮುಖವಾಡವನ್ನು ತೋರಿಸುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆಯು ಗೂಂಡಾಗಿರಿ ನಡೆಸಿದವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸುಹಾನ್ ಆಳ್ವ ಆಗ್ರಹಿಸಿದ್ದಾರೆ.