
ಕಿನ್ನಿಗೋಳಿ: ಬ್ರೈಟ್ ಫ್ಯೂಚರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ
ಕಿನ್ನಿಗೋಳಿ: ಮಾಜಿ ಪ್ರಧಾನ ಮಂತ್ರಿ ಜವಹರಲಾಲ್ ನೆಹರೂ ಅವರ ಜನ್ಮದಿನದ ಪ್ರಯುಕ್ತ ಇಲ್ಲಿನ ಶಾಂತಿನಗರ ಬ್ರೈಟ್ ಫ್ಯೂಚರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಹಸಿರು ಗಿಡಕ್ಕೆ ನೀರುಣಿಸುವ ಮೂಲಕ ಬ್ರೈಟ್ ಫ್ಯೂಚರ್ ಎಜ್ಯುಕೇಶನಲ್ ಹಾಗೂ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಟಿ.ಎ. ಹನೀಫ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮುಲ್ಕಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಅರುಣ್ ಪ್ರದೀಪ್ ಡಿಸೋಜ ಮಾತನಾಡಿ, ಮಕ್ಕಳನ್ನು ಕೇವಲ ಶೈಕ್ಷಣಿಕ ಕಾರ್ಯಕ್ರಮಗಳಿಗಷ್ಟೇ ಸೀಮಿತಗೊಳಿಸದಿರಿ. ಅವರಲ್ಲಿನ ಸೂಕ್ತ ಪ್ರತಿಭೆಗಳನ್ನು ಹೊರ ತರಲು ಪೋಷಕರು ಹಾಗೂ ಶಿಕ್ಷಕರು ಗಮನ ಹರಿಸಬೇಕು. ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳ ಅನಾವರಣಕ್ಕೆ ಮಕ್ಕಳ ದಿನಾಚರಣೆ ಒಂದು ಉತ್ತಮ ವೇದಿಕೆ ಆಗಿದೆ. ಹೀಗಾಗಿ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಶಾಲೆಗಳು ನಿರ್ವಹಿಸುವ ಪಾತ್ರ ಮಹತ್ತರದ್ದಾಗಿದೆ ಎಂದರು.
ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಟಿ.ಎ. ಹನೀಫ್ ವಹಿಸಿದ್ದರು. ಇದೇ ಸಂದರ್ಭ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ
ಪ್ರಕಾಶ್ ಆಚಾರ್ಯ ಕಿನ್ನಿಗೋಳಿ ಹಾಗೂ ಫಿಸಿಯೋಥೆರಪಿ ವೈದ್ಯಕೀಯ ವಿದ್ಯಾರ್ಥಿನಿ ಪೂಜಾಶ್ರೀ ವಿ.
ಕೋಟ್ಯಾನ್ ಇವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ
ಮುಖ್ಯ ಅತಿಥಿಗಳಾಗಿ ಖಿಲ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಎ.ಬಿ. ಅಬೂಬಕ್ಕರ್, ತಾಲೂಕು ಪಂಚಾಯತ್
ಮಾಜಿ ಸದಸ್ಯ ದಿವಾಕರ ಕರ್ಕೇರ, ಕಿನ್ನಿಗೋಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಟಿ.ಎಚ್. ಮಯ್ಯದ್ದಿ,
ಶ್ರೀಮೂಕಾಂಬಿಕಾ ದೇವಸ್ಥಾನ ಧರ್ಮದರ್ಶಿ ವಿವೇಕಾನಂದ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಕಲಾ ಹಾಗೂ ಬ್ರೈಟ್
ಫ್ಯೂಚರ್ ಎಜ್ಯುಕೇಶನಲ್ ಹಾಗೂ ಚಾರಿಟೇಬಲ್ ಟ್ರಸ್ಟ್ ಸಂಚಾಲಕ ಟಿ.ಕೆ. ಅಬ್ದುಲ್ ಖಾದರ್, ಕೋಶಾಧಿಕಾರಿ
ಜೆ.ಎಚ್. ಜಲೀಲ್, ಲೆಕ್ಕ ಪರಿಶೋಧಕ ಅಸ್ಕರ್ ಅಲಿ ಹಾಗೂ ಟ್ರಸ್ಟ್ ಸದಸ್ಯರಾದ ಇಕ್ಬಾಲ್ ಚೋಟರಿಕೆ,
ನವಾಝ್ ಕಲ್ಕರೆ, ನೂರುದ್ದೀನ್ ಉಪಸ್ಥಿತರಿದ್ದರು. ಸುನೈನಾ ಸ್ವಾಗತಿಸಿ, ಅಶ್ವಿನಿ ವಂದಿಸಿದರು.
ಶೈಲಜಾ ನಿರೂಪಿಸಿದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು.