
APMC: ಭ್ರಷ್ಟ ಅಧಿಕಾರಿಯ ಬದಲು, ಪ್ರಾಮಾಣಿಕ ಅಧಿಕಾರಿ ಮೇಲೆ ತನಿಖೆಗೆ ಆದೇಶ!!
ಹೌದು ಪುತ್ತೂರು ಎಪಿಎಂಸಿಯಲ್ಲಿ ಪ್ರಭಾರ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರಾಮಚಂದ್ರ ಎನ್ನುವ ಅಧಿಕಾರಿಯ ವಿರುದ್ಧ ಎಪಿಎಂಸಿಯಲ್ಲಿ ವ್ಯವಹಾರ ಮಾಡುತ್ತಿರುವ ಎಲ್ಲಾ ಅಂಗಡಿಗಳ ಮಾಲಕರು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಆತನ ವಿರುದ್ಧ ದೂರು ನೀಡಿದ್ದರು. ಇದೀಗ ಮೇಲಾಧಿಕಾರಿಗಳಿಂದ ದೂರಿಗೆ ಸಂಬಂಧಿಸಿದಂತೆ ತನಿಖೆ ಆರಂಭಗೊಂಡಿದ್ದು, ಆರೋಪಿತ ಅಧಿಕಾರಿಯ ಹೆಸರಿನ ಬದಲಾಗಿ, ಎಪಿಎಂಸಿ ಯಲ್ಲಿ ಸದ್ಯ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಬ್ಬರ ವಿರುದ್ಧ ಈ ತನಿಖೆ ಆರಂಭವಾಗಿದೆ. ಈ ಬೆಳವಣಿಗೆಯಿಂದ ಅಂಗಡಿ ಮಾಲಕರು ಗೊಂದಲಕ್ಕೀಡಾಗಿದ್ದು, ದೂರು ನೀಡಿದ ವ್ಯಕ್ತಿಯ ಬದಲು ಇನ್ನೋರ್ವ ಅಧಿಕಾರಿಯ ವಿರುದ್ಧ ಇದೀಗ ತನಿಖೆ ಆರಂಭಗೊಂಡಿರೋದು ಅಂಗಡಿ ಮಾಲಕರ ನಿದ್ದೆಗೆಡಿಸಿದೆ. ಪ್ರಾಮುಖ್ಯ ವಿಚಾರವೆಂದರೆ ಅಂಗಡಿಯವರು ನೀಡಿದ ದೂರಿನ ಪ್ರತಿಗಳಲ್ಲಿ ಕೆಲವು ಪ್ರತಿಗಳನ್ನು ಬೆಂಗಳೂರಿನ ಕೃಷಿ ಮಾರಾಟ ನಿರ್ದೇಶಕರ ಕಚೇರಿಯೊಳಗೆ ನಕಲಿ ಮಾಡಲಾಗಿದೆ.
ಅಂಗಡಿ ಮಾಲಕರು ನೀಡಿದ ದೂರಿನಲ್ಲಿ ಉಲ್ಲೇಖವಿರುವ ರಾಮಚಂದ್ರ ಎನ್ನುವ ಅಧಿಕಾರಿಯ ಬದಲು, ಪ್ರಸ್ತುತ ಎಪಿಎಂಸಿಯಲ್ಲಿ ಕಾರ್ಯದರ್ಶಿಯಾಗಿರುವ ಎಂ.ಸಿ. ಪಡಗನೂರ ಎನ್ನುವ ಅಧಿಕಾರಿಯ ಹೆಸರಿನಲ್ಲಿ ನಕಲಿ ದೂರು ಸೃಷ್ಠಿಸಿ, ಆ ದೂರಿನ ಪ್ರತಿಯ ಜೊತೆಗೆ ಅಂಗಡಿ ಮಾಲಕರು ರಾಮಚಂದ್ರ ಎನ್ನುವ ಅಧಿಕಾರಿಯ ವಿರುದ್ಧ ನೀಡಿದ ದೂರಿಗೆ ಹಾಕಿದ್ದ ಸಹಿಗಳನ್ನು ಜೋಡಿಸಲಾಗಿದೆ. ಹಿರಿಯ ಅಧಿಕಾರಿಗಳ ಕಚೇರಿಯಲ್ಲೇ ಈ ರೀತಿಯ ನಕಲಿ ದಾಖಲೆಗಳನ್ನು ಸೃಷ್ಢಿ ನಡೆದರೆ, ಉಳಿದ ಕಡೆಗಳಲ್ಲಿ ಯಾವ ರೀತಿಯ ನಕಲಿ ವ್ಯವಸ್ಥೆಗಳು ನಡೆಯಬಹುದು ಎನ್ನುವ ಆತಂಕ ಎದುರಾಗಿದೆ.
ಸರಕಾರಿ ಕಚೇರಿಯೊಳಗೆ ದಾಖಲೆ ಪತ್ರಗಳನ್ನು ಈ ರೀತಿಯಲ್ಲಿ ನಕಲಿ ಮಾಡುವುದು ಒಂದು ಗಂಭೀರ ವಿಷಯವೂ ಆಗಿದೆ. ಈ ನಿಟ್ಟಿನಲ್ಲಿ ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎನ್ನುವ ಒತ್ತಾಯವೂ ಸಾರ್ವಜನಿಕ ವಲಯದಿಂದ ಕೇಳಿ ಬರಲಾರಂಭಿಸಿದೆ.