-->
PUTTUR: ಸವಣೂರು ಚಾಪಳ್ಳ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಅವ್ಯವಹಾರ!!

PUTTUR: ಸವಣೂರು ಚಾಪಳ್ಳ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಅವ್ಯವಹಾರ!!


ಪುತ್ತೂರು:
  ಸವಣೂರಿನ ಚಾಪಳ್ಳದ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸ್ವಯಂ ಘೋಷಿತ ಪದಾಧಿಕಾರಿಗಳನ್ನೊಳಗೊಂಡ ಅನಧಿಕೃತ ಆಡಳಿತ ಮಂಡಳಿ ಕಾರ್ಯಾಚರಿಸುತ್ತಿದ್ದು, ಜಮಾಅತ್‍ಗೊಳಪಟ್ಟ ಬಡ ಜನರ ಮೇಲೆ ಈ ಮಂಡಳಿ ಅಧಿಕ ವಂತಿಗೆ ವಿಧಿಸಿ ಶೋಷಣೆ ನಡೆಸುತ್ತಿದೆ. ಅಲ್ಲದೆ ವಂತಿಕೆ ಹೆಚ್ಚಳದ ಕುರಿತು ಪ್ರಶ್ನಿಸಿದ ಕಾರಣಕ್ಕಾಗಿ ತನ್ನ ಮೇಲೆ ಹಲ್ಲೆ ನಡೆಸಿ, ತನ್ನ ಮೇಲೆಯೇ ಸುಳ್ಳು ದೂರು ನೀಡಿದ್ದಾರೆ ಎಂದು ಜಮಾಅತ್ ಸದಸ್ಯರಾದ ಸವಣೂರು ಗ್ರಾಮದ ಕಾಯರ್ಗ ನಿವಾಸಿ ಹಸೈನಾರ್ ಯಂ ಅವರು ಆರೋಪಿಸಿದ್ದಾರೆ.  

ಪುತ್ತೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಸೀದಿಯ ಗೌರವಾಧ್ಯಕ್ಷ ಮಹಮ್ಮದ್ ಹಮೀದ್ ತಂಙಳ್ ಅವರು, ವಕ್ಫ್ ಬೋರ್ಡ್ ಮೂಲಕ ಆಯ್ಕೆಯಾದ ಅಧಿಕೃತ ಆಡಳಿತ ಮಂಡಳಿಯನ್ನು ವಜಾ ಮಾಡಿ ತಮ್ಮ ಬೆಂಬಲಿಗರನ್ನು ಸೇರಿಸಿಕೊಂಡು ವಕ್ಫ್ ಬೋರ್ಡ್‍ನ ಅನುಮತಿ ಪಡೆಯದೆ ಅನಧಿಕೃತ ಮಂಡಳಿಯನ್ನು ನೇಮಿಸಿದ್ದಾರೆ. ಮಸೀದಿಗೆ ಸಂಬಂಧಿಸಿದ ಮನೆಗಳಿಂದ ಸಂಗ್ರಹಿಸುವ ಮಾಸಿಕ ವಂತಿಗೆಯನ್ನು, ಕಮಿಟಿಯ ಯಾವುದೇ ನಿರ್ಣಯಕೈಗೊಳ್ಳದೆ ಏಕಾಏಕಿ ಏರಿಸಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಮಹಮ್ಮದ್ ಕಣಿಮಜಲು ಮತ್ತವರ ತಂಡ ಈ ಹಿಂದೆ ಚಾಪಳ್ಳದ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧ್ಯಕ್ಷರ ಸಹಿತ ಆರು ಮಂದಿಯನ್ನು ನೋಂದಣಿಗೊಂಡಿದ್ದ ಅಧಿಕೃತ ಆಡಳಿತ ಮಂಡಳಿಯಿಂದ ಬಲಾತ್ಕಾರವಾಗಿ ಹೊರಹಾಕಿ, ಸ್ವಯಂ ಘೋಷಿತ ಪದಾಧಿಕಾರಿಗಳಾಗಿ ಅನಧಿಕೃತವಾಗಿ ಆಡಳಿತ ನಡೆಸುತ್ತಿದ್ದಾರೆ. `ಸಿ' ಕೆಟಗರಿಯಲ್ಲಿದ್ದ ತಾನು ಈ ಹಿಂದೆ ಊಟೋಪಚಾರದ ವೆಚ್ಚ ಸೇರಿದಂತೆ 6 ತಿಂಗಳಿಗೆ ರೂ.2270 ವಂತಿಕೆ ಪಾವಸಿಕೊಂಡು ಬರುತ್ತಿದ್ದೆ. ಆದರೆ ಈ ಸ್ವಯಂ ಘೋಷಿತ ಆಡಳಿತ ಮಂಡಳಿಯವರು ಯಾವುದೇ ಕಮಿಟಿ ನಿರ್ಣಯವಿಲ್ಲದೆ, ರಿಕ್ಷಾ ಚಾಲಕನಾಗಿ ದುಡಿಯುತ್ತಿರುವ ತನ್ನಿಂದ ಹೆಚ್ಚಿನ ವಂತಿಗೆ ಸಂಗ್ರಹಿಸುವ ದುರುದ್ದೇಶದಿಂದ  `ಸಿ' ಕೆಟಗರಿಯಲ್ಲಿದ್ದ ತನ್ನನ್ನು `ಬಿ' ಕೆಟಗರಿ ಎಂದು ಸೂಚಿಸಿ ಅಧಿಕ ವಂತಿಗೆ ಕೊಡಬೇಕೆಂದು ಸತಾಯಿಸಿದ್ದಾರೆ ಎಂದು ಅವರು ದೂರಿದರು.

ವಂತಿಗೆ ಹೆಚ್ಚಳದ ವಿಚಾರದಲ್ಲಿ ಪ್ರಶ್ನಿಸಿದ ಕಾರಣಕ್ಕಾಗಿ ತನ್ನನ್ನು ಸ್ವಯಂ ಘೋಷಿತ ಆಡಳಿತ ಮಂಡಳಿಯ ಅಧ್ಯಕ್ಷ ಮಹಮ್ಮದ್ ಕಣಿಮಜಲು ಮತ್ತು ಕಾರ್ಯದರ್ಶಿ ಕರೆ ಮಾಡಿ ಕರೆಸಿಕೊಂಡು ಬೆದರಿಕೆಯೊಡ್ಡಿದ್ದಲ್ಲದೆ, ತನ್ನ ಬೆಂಬಲಿಗರ ಮೂಲಕ ನನ್ನನ್ನು ಮಸೀದಿಯ ಕಚೇರಿಗೆ ಎಳೆದುಕೊಂಡು ಹೋಗಿ  ಹಲ್ಲೆ ನಡೆಸಿ, ತನ್ನ ಮೇಲೆಯೇ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣ ತನಿಖೆಯಲ್ಲಿದೆ ಎಂದು ಅವರು ಹೇಳಿದರು.

ಈ ಅನಧಿಕೃತ ಆಡಳಿತ ಮಂಡಳಿಯವರು ವಂತಿಗೆ ಹಣ, ಖರ್ಚು-ವೆಚ್ಚ, ಜಿಎಸ್‍ಟಿ  ಪಾವತಿಸಿದ ವಿವರವನ್ನು ನೀಡುತ್ತಿಲ್ಲ. ಸಂಸ್ಥೆಗೆ ವಕ್ಫ್ ಬೋರ್ಡಿನಿಂದ ಬಂದ ಅನುದಾನದ ಬಗ್ಗೆಯೂ ಮಾಹಿತಿ ನೀಡುತ್ತಿಲ್ಲ. ಹಣಕಾಸಿನ ವಿಚಾರದಲ್ಲೂ ದುರುಪಯೋಗಯೋಗವಾಗಿರುವ ಮಾಹಿತಿ ಇದೆ. ಈ ಕುರಿತು ಜಿಲ್ಲಾ ವಕ್ಫ್ ಬೋರ್ಡಿಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು, ಈ ಎಲ್ಲಾ ಅಂಶಗಳ ಕುರಿತು ತನಿಖೆ ನಡೆಸಿ ವಸ್ತುಸ್ಥಿತಿಯನ್ನು ಅರಿತುಕೊಂಡು ಅನಧಿಕೃತ ಕಮಿಟಿಯನ್ನು ಬರ್ಖಾಸ್ತುಗೊಳಿಸಿ, ಹಿಂದಿನ ಪದಾಧಿಕಾರಿಗಳನ್ನೇ ನೇಮಕಗೊಳಿಸಿ ನ್ಯಾಯ ಒದಗಿಸಬೇಕೆಂದು ತಾನು ಈಗಾಗಲೇ ದ.ಕ.ಜಿಲ್ಲಾಧಿಕಾರಿಗಳಿಗೆ ಮತ್ತು ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್‍ಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದರು.

ಹಸೈನಾರ್ ಅವರ ಸಂಬಂಧಿಕರಾದ ಉಮ್ಮರ್ ಫಾರೂಕ್ ಮಂಜಲ್ಪಡ್ಪು, ಬಶೀರ್ ಕಾರ್ಜಾಲು, ಫವಾಝ್ ಕಾರ್ಜಾಲು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Ads on article

Advertise in articles 1

advertising articles 2

Advertise under the article