PUTTUR: ಎಪಿಎಂಸಿಯಲ್ಲಿ ಅನಧಿಕೃತ ವಾಸ್ತವ್ಯ; ಬೀಗ ಜಡಿಯಲು ಕೌಂಟ್ ಡೌನ್!!
ಪುತ್ತೂರು: ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸೇರಿದ ವಸತಿಗೃಹದಲ್ಲಿ ಅನಧಿಕೃತವಾಗಿ ಮಹಿಳೆಯೊಬ್ಬರು ವಾಸವಾಗಿದ್ದು, ತಕ್ಷಣ ಈ ಮಹಿಳೆಯನ್ನು ತೆರವುಗೊಳಿಸುವಂತೆ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಎಂ.ಸಿ.ಪಡಗಾನೂರು ನೋಟೀಸು ನೀಡಿದ್ದಾರೆ.
ಈ ಹಿಂದೆ ಎಪಿಎಂಸಿಯಲ್ಲಿ ಪ್ರಭಾರ ಕಾರ್ಯದರ್ಶಿ ಹುದ್ದೆ ನಿರ್ವಹಿಸಿಕೊಂಡಿದ್ದ ವ್ಯಕ್ತಿ ವಸತಿಗೃಹ 03ರಲ್ಲಿ ಈಕೆಗೆ ಅವಕಾಶವನ್ನು ಕಲ್ಪಿಸಿದ್ದರು. ಈ ಮಹಿಳೆಯ ಪುತ್ತೂರು ಎಪಿಎಂಸಿ ಕಚೇರಿಯಲ್ಲಿ ದಿನಗೂಲಿ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ದಿನಗೂಲಿ ಆಧಾರದಲ್ಲಿ ಕೆಲಸ ಮಾಡುವವರಿಗೆ ಕಾನೂನು ಪ್ರಕಾರ ವಸತಿಗೃಹದಲ್ಲಿ ಅವಕಾಶ ಇಲ್ಲ. ಹಾಗಿದ್ದರೂ ಹಾಸ್ಟೆಲ್ ಒಂದರಲ್ಲಿ ಕೆಲಸ ಮಾಡುವ ಮಹಿಳೆಯ ಹೆಸರಲ್ಲಿ ಈ ವಸತಿಗೃಹವನ್ನು ದಿನಗೂಲಿ ನೌಕರಿಯಲ್ಲಿರುವ ಮಹಿಳೆಗೆ ನೀಡಲಾಗಿತ್ತು. ಇದು ಎಪಿಎಂಸಿ ನಿಯಮಕ್ಕೆ ವಿರುದ್ಧವಾಗಿದ್ದು, ಈ ಬಗ್ಗೆ ಹಲವಾರು ದೂರುಗಳು ಎಪಿಎಂಸಿ ಕಾರ್ಯದರ್ಶಿ ಅವರಿಗೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಈಗಿನ ಕಾರ್ಯದರ್ಶಿ ತಕ್ಷಣ ಕಾನೂನು ಬಾಹಿರವಾಗಿ ವಾಸ್ತವಾಗಿರುವ ಈ ಮಹಿಳೆಯ ವಾಸ್ತವ್ಯವನ್ನು ತೆರವು ಮಾಡುವಂತೆ ಸೂಚನೆ ನೀಡಿದ್ದಾರೆ.
ಪುತ್ತೂರು ಎಪಿಎಂಸಿಯಲ್ಲಿ ಈ ಹಿಂದೆ ಪ್ರಭಾರ ಕಾರ್ಯದರ್ಶಿ ಹುದ್ದೆಯಲ್ಲಿದ್ದ ವ್ಯಕ್ತಿ ಪ್ರಸ್ತುತ ಕರ್ತವ್ಯಲೋಪದ ಹಿನ್ನಲೆಯಲ್ಲಿ ಕೆಲ ಸಮಯ ಅಮಾನತುಗೊಂಡಿದ್ದು, ಸೆ.೧೪ಕ್ಕೆ ಬಳ್ಳಾರಿಗೆ ವರ್ಗಾವಣೆಯಾಗಿದೆ. ಅದರ ಮರುದಿನವೇ ಪುತ್ತೂರು ಎಪಿಎಂಸಿಯಿಂದ ಬಿಡುಗಡೆ ಮಾಡಲಾಗಿತ್ತು. ಆದರೆ ಈತ ಬಳ್ಳಾರಿ ಎಪಿಎಂಸಿಯಲ್ಲಿ ಹುದ್ದೆ ಸ್ವೀಕಾರ ಮಾಡಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.
ವಸತಿಗೃಹದ ಕೊಠಡಿಯನ್ನು ತೆರೆವು ಮಾಡಲು ಅನಧಿಕೃವಾಗಿ ವಾಸವಿರುವ ಎಪಿಎಂಸಿ ದಿನಗೂಲಿ ನೌಕರೆಗೆ ಮಂಗಳವಾರ ತನಕ ಅವಕಾಶ ನೀಡಲಾಗಿದೆ.
ಬುಧವಾರ 11:30ಕ್ಕೆ ಪುತ್ತೂರು ಎಪಿಎಂಸಿಯ ಆಡಳಿತಾಧಿಕಾರಿ, ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆ ಅವರ ಅನುಮತಿ ಪಡೆದುಕೊಂಡು ವಸತಿಗೃಹ 03 ಕೊಠಡಿಗೆ ಬೀಗಜಡಿಯಲು ಎಪಿಎಂಸಿ ಅಧಿಕಾರಿ ವರ್ಗ ತೀರ್ಮಾನಿಸಿದೆ. ಕಳೆದ ಒಂದು ವರ್ಷದಿಂದ ಈ ಅನಧಿಕೃತ ವಾಸ್ತವ್ಯದ ವಿವಾದವಿದ್ದು, ಈ ಬಾರಿ ವಿವಾದಕ್ಕೆ ಅಂತ್ಯ ದೊರೆಯಲಿದೆ.


