.jpg)
PUTTUR PILIGOBBU: ಪುತ್ತೂರು ಪಿಲಿಗೊಬ್ಬು; ಫುಡ್ ಫೆಸ್ಟ್ ಸೀಸನ್-2ಗೆ ಇನ್ನೆರಡು ದಿನ ಬಾಕಿ!!
ಪುತ್ತೂರು: 'ಹುಲಿವೇಷ ಕುಣಿತ' ತುಳು ನಾಡಿನ ಧಾರ್ಮಿಕ ಹಿನ್ನೆಲೆ ಇರುವ ಜಾನಪದ ಕಲೆ. ಈ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪಿಲಿ ಗೊಬ್ಬು ಹಾಗೂ ಜೊತೆಗೆ ಜನರ ಸಂಭ್ರಮಕ್ಕಾಗಿ ಪುತ್ತೂರು ಫುಡ್ ಫೆಸ್ಟ್ ಅನ್ನು ಅಕ್ಟೋಬರ್ 5 ಶನಿವಾರ ಹಾಗೂ ಅಕ್ಟೋಬರ್ 6 ಆದಿತ್ಯವಾರದಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ ಎಂದು ಪಿಲಿಗೊಬ್ಬುವಿನ ಸಾರಥಿ, ಗೌರಾವಾಧ್ಯಕ್ಷರಾದ ಸಹಜ್ ರೈ ಬಳಜ್ಜ ಹೇಳಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಲಿ ಗೊಬ್ಬು ಕಾರ್ಯಕ್ರಮದ ಉದ್ಘಾಟನೆಯು ಅಕ್ಟೋಬರ್ 6 ಅದಿತ್ಯವಾರ ಬೆಳಗ್ಗೆ 10:30ಕ್ಕೆ ಗಂಟೆಗೆ ನಡೆಯಲಿದೆ ಪಿಲಿಗೊಬ್ಬು ವೇದಿಕೆಯನ್ನು ಮೂಡುಬಿದರೆಯ ಆಳ್ವಾಸ್ ವಿದ್ಯಾ ಸಂಸ್ಥೆಯ ಶ್ರೀ ಮೋಹನ್ ಆಳ್ವ ಅವರು ನೆರವೇರಿಸಲಿದ್ದು, ಗಣ್ಯಾತಿ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಬಹುಮಾನಗಳ ವಿವರ: ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಆಯ್ದ 9 ಹುಲಿವೇಷ ತಂಡಗಳನ್ನು ಆಹ್ವಾನಿಸಿ ಅವರೊಳಗೆ ಉತ್ತಮ ನಿರ್ವಹಣೆ ಮಾಡಿದ ತಂಡಕ್ಕೆ ಪ್ರಥಮ ಬಹುಮಾನ ರೂ 3 ಲಕ್ಷ ದ್ವಿತೀಯ ಬಹುಮಾನ 2 ಲಕ್ಷ, ಹಾಗೂ ತೃತೀಯ ಬಹುಮಾನ 1 ಲಕ್ಷ ಹಾಗೂ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಗುವುದು ಮಾತ್ರವಲ್ಲದೆ ಭಾಗಿಯಾದ ತಂಡಗಳಿಗೆ ತಲಾ 50,000 ಗೌರವ ಸಂಭಾವನೆಯನ್ನು ನೀಡಿ ಗೌರವಿಸಲಾಗುವುದು. ಮಾತ್ರವಲ್ಲದೆ ಸಮಗ್ರ ತಂಡ ಪ್ರಶಸ್ತಿ, ಸಮಗ್ರ ಶಿಸ್ತಿನ ತಂಡ, ಗುಂಪು ಪ್ರಶಸ್ತಿ ವಿಭಾಗ ದಲ್ಲಿ ಉತ್ತಮ ಪ್ರವೇಶ ಹಾಗೂ ನಿರ್ಗಮನ, ಉತ್ತಮ ತಾಸ, ಉತ್ತಮ ಬಣ್ಣ, ಉತ್ತಮ ಧರಣಿ ಮಂಡಲ ಕುಣಿತ ವೈಯುಕ್ತಿಕ ಪ್ರಶಸ್ತಿ ವಿಭಾಗದಲ್ಲಿ ಕಪ್ಪು ಹುಲಿ, ಮರಿ ಹುಲಿ ಪುತ್ತೂರುದ ಹುಲಿ,ಮುಡಿ ಹಾರಿಸುವುದು, ನಾಣ್ಯ ತೆಗೆಯುವುದಕ್ಕೆ ವಿಶೇಷ 10,000 ನಗದು ಬಹುಮಾನದ 10 ಪ್ರತ್ಯೇಕ ವೈಯುಕ್ತಿಕ ಬಹುಮಾನವಿದೆ. ಪ್ರತಿ ತಂಡದಲ್ಲಿ 15 ಹುಲಿವೇಷ ಹಾಗೂ ಪ್ರತಿ ತಂಡಕ್ಕೆ ಹುಲಿ ವೇಷ ಕುಣಿತದ ಕಲಾ ಪ್ರದರ್ಶನ ನೀಡಲು 22 ನಿಮಿಷದ ಕಾಲಾವಕಾಶವಿರುತ್ತದೆ. ಈ ಕ್ಷೇತ್ರದಲ್ಲಿ ಉತ್ತಮ ಪರಿಣತಿ ಹೊಂದಿದ ಜಿಲ್ಲೆಯ ಖ್ಯಾತ ತೀರ್ಪುಗಾರರು ಭಾಗವಹಿಸಲಿದ್ದಾರೆ.
ತಾರಾ ಮೆರುಗು: ಕಾರ್ಯಕ್ರಮ ವೀಕ್ಷಿಸಲು ತುಳುನಾಡಿನ ಹೆಸರಾಂತ ಕೋಸ್ಟಲ್ ವುಡ್ ಹಾಗೂ ರಾಜ್ಯದ ಹೆಸರಾಂತ ಸ್ಯಾಂಡಲ್ ವುಡ್ ನಟ ನಟಿಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮುಖ್ಯವಾಗಿ ಸ್ಯಾಂಡಲ್ ವುಡ್ ನಾಯಕ ನಟ ಶ್ರೀ ಮುರಳಿ, ಶಿವಧ್ವಜ್, ರೂಪೇಶ್ ಶೆಟ್ಟಿ, 2021 ನೇ ಬಿಗ್ ಬಾಸ್ 8ರ ದ್ವಿತೀಯ ವಿಜೇತ ಅರವಿಂದ್ ಕೆ ಪಿ, ಮಿಸ್ ಕರ್ನಾಟಕ ಕು.ವಿಜೇತ ಪೂಜಾರಿ, ಸರಿಗಮಪ ಖ್ಯಾತಿಯ ಗಾಯಕಿ ಸಮನ್ವಿ ರೈ ಮುಂತಾದವರು ಭಾಗವಹಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಪುತ್ತೂರು ಹಾಗೂ ಸುತ್ತಲಿನ ಹತ್ತುರಿನಿಂದ ಲಕ್ಷಕ್ಕೂ ಅಧಿಕ ಜನ ಸೇರಬಹುದು ಎಂದು ಆಯೋಜಕರು ಹೇಳಿದ್ದಾರೆ.
ಪುತ್ತೂರು ಫುಡ್ ಫೆಸ್ಟ್: ಅಕ್ಟೋಬರ್ 5 ಶನಿವಾರ ಸಂಜೆ ಗಂಟೆ 4:00 ಫುಡ್ ಫೆಸ್ಟ್ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಉಜ್ವಲ್ ಪ್ರಭು,ಯು ಆರ್ ಪ್ರಾಪರ್ಟಿ, ಶ್ರೀ ನರೇಂದ್ರ ಕಾಮತ್, ಪಾಪ್ಯುಲರ್ ನ್ಯೂಟ್ರಿಷಿಯಸ್ ಇವರು ಉದ್ಘಾಟನೆ ನೆರವೇರಿಸಲಿದ್ದಾರೆ. ಆಹಾರ ಮೇಳವು ಅಕ್ಟೋಬರ್ 5 ಶನಿವಾರ ಸಂಜೆ ಗಂಟೆ 4 ರಿಂದ ಸುಮಾರು ರಾತ್ರಿ 11 ರ ತನಕ, ಅಕ್ಟೋಬರ್ 6ರ ಅದಿತ್ಯವಾರ ಬೆಳಗ್ಗೆ 10 ಗಂಟೆಯಿಂದ ಸುಮಾರು ರಾತ್ರಿ 11:00 ಗಂಟೆ ತನಕ ನಡೆಯಲಿದೆ.
ಪುತ್ತೂರು ಪುಡ್ ಫೆಸ್ಟ್ ವಿಶೇಷತೆಗಳು: ಪಗೋಡ ಮಾದರಿಯ ಸುಂದರ ಸುಸಜ್ಜಿತ ಆಹಾರ ಮಳಿಗೆಯಲ್ಲಿ ಬರ್ಗರ್, ಸ್ಯಾಂಡ್ ವಿಚ್, ಕೇರಳ ಪುಟ್ಟು, ಲೈವ್ ಮಸಾಲೆ ದೋಸೆ, ಲೈವ್ ಹಲಸಿನ ಹೋಳಿಗೆ,ಲೈವ್ ರುಮಾಲಿ ರೋಟಿ,ವಿವಿಧ ಬಗೆಯ ದೋಸೆಗಳು, ವಿವಿಧ ಬಗೆಯ ಐಸ್ ಕ್ರೀಮ್ ಗಳು, ಮೊಕ್ ಟೈಲ್ ಜ್ಯೂಸ್, ಮಟ್ಕಾ ಸೋಡಾ,ಕರಾವಳಿಯ ರುಚಿಕರ ಖಾದ್ಯಗಳ ಸಹಿತ ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಐವತ್ತು ವಿವಿಧ ಖಾದ್ಯಗಳ ಮಳಿಗೆಗಳು ವಿಜೃಂಭಿಸಲಿದೆ. ವಿಶೇಷವಾಗಿ ಅಮೆರಿಕದಲ್ಲಿ ಹೊಟೇಲ್ ಮ್ಯಾನೇಜೆಂಟ್ ಕೋರ್ಸ್ ಮಾಡಿದ ಯಶಸ್ ಎಂಬ ಯುವಕನೊಬ್ಬ ಅನುಭವಕ್ಕಾಗಿ ಆಹಾರ ಮೇಳದಲ್ಲಿ ಮಳಿಗೆಯನ್ನು ಹಾಕಲು ಆಸಕ್ತಿಯಿಂದ ಮುಂದೆ ಬಂದಿದ್ದಾರೆ.
ಸ್ವಚ್ಛತೆಗೆ ಆದ್ಯತೆ : ಬೆನ್ಸ್ ವುಡ್ ಸ್ವಾಲ್ ಸ್ಪರ್ಧೆ ಕಳೆದ ವರ್ಷ ಸ್ವಚ್ಛತೆಗೆ ಪ್ರಾಮುಖ್ಯತೆಯನ್ನು ನೀಡಿದ್ದು, ಯಾವುದೇ ಸಂದರ್ಭದಲ್ಲಿ ಕಸ ಕಡ್ಡಿಗಳು ಮಾರ್ಗದಲ್ಲಿ ಅಥವಾ ಆಹಾರ ಮಳಿಗೆಗಳ ಸುತ್ತಮುತ್ತ ಕಸದ ಬುಟ್ಟಿಯಲ್ಲಿ ತುಂಬಿ ತುಳುಕದಂತೆ ಮುಂಜಾಗ್ರತೆಯನ್ನು ವಹಿಸಿತ್ತು. ಅಲ್ಲದೇ ಸಾರ್ವಜನಿಕರಿಂದಲೂ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ವರ್ಷವೂ ಕೂಡ ಈ ಗುಣಮಟ್ಟವನ್ನು ಕಾಪಾಡುವ ನಿಟ್ಟಿನಲ್ಲಿ ಆಹಾರ ಮಳಿಗೆಗಳ ಮಾಲಕರಿಗೆ ಸ್ವಚ್ಛತೆಗೆ ಆದ್ಯತೆಯ ಜೊತೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ . ಪ್ರಥಮ ಬಹುಮಾನ 5,000, ದ್ವಿತೀಯ ಬಹುಮಾನ 3000, ತೃತೀಯ ಬಹುಮಾನ 2000 ಜೊತೆಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು.
ಸ್ವಚ್ಛತಾ ಸೇನಾನಿಗಳಿಗೆ ವಿಶೇಷ ಗೌರವಾರ್ಪಣೆ: ಕಳೆದ ವರ್ಷ ಅತ್ಯಂತ ಶ್ರದ್ಧಾಪೂರ್ವಕವಾಗಿ ಕಾರ್ಯಕ್ರಮದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಸ್ವಚ್ಛತಾ ಸೇವಕರಾದ ಗದಗ್ ಮೂಲದ ರೇಣುಕಾ ಹಾಗೂ 10 ಸ್ವಚ್ಛತಾ ಸಿಬ್ಬಂದಿಗಳಿಗೆ ಗೌರವಾರ್ಪಣೆ ಹಾಗೂ ಸ್ವಚ್ಛತಾ ಸಿಬ್ಬಂದಿಗಳ ಕುಟುಂಬದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಸಹಾಯಧನ ಹಸ್ತಾಂತರ ನಡೆಯಲಿದೆ.
ತಾತ್ಕಾಲಿಕ ಶೌಚಾಲಯದ ವ್ಯವಸ್ಥೆ: ಇದೇ ಪ್ರಪ್ರಥಮ ಬಾರಿಗೆ ಸಾರ್ವಜನಿಕರಿಗಾಗಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬರುವವರಿಗಾಗಿ ಈ ತಾತ್ಕಾಲಿಕ ಶೌಚಾಲಯವನ್ನು ಪ್ರಾಯೋಗಿಕವಾಗಿ ನಿರ್ಮಾಣ ಮಾಡಲಾಗಿದೆ.
ವಿಶೇಷ ಆಕರ್ಷಣೆ ಯಾಗಿ ಸೆಲ್ಫಿ ಕಾರ್ನರ್: ಇಲ್ಲಿ ಬರುವ ಕಲಾಭಿಮಾನಿಗಳಿಗೆ ಸೆಲ್ಫಿ ಕಾರ್ನರ್ ನಲ್ಲಿ ತಮ್ಮ ಭಾವಚಿತ್ರವನ್ನು ತೆಗೆದು ಸಂಭ್ರಮಿಸಲು ಆಕರ್ಷಕ ವಿನ್ಯಾಸದ ಸೆಲ್ಫಿ ಕಾರ್ನರ್ ರಚಿಸಲಾಗಿದೆ. ಜೊತೆಗೆ ಹುಲಿ ವೇಷದ ಮಕ್ಕಳಿಗಾಗಿ ತಯಾರಿಸಿದ ಟೋಪಿ ಮಾರಾಟಕ್ಕೆ ಲಭ್ಯವಾಗಲಿದೆ.
ಪಾರ್ಕಿಂಗ್ ಸೌಲಭ್ಯ: ಕಳೆದ ಬಾರಿ ನಿರೀಕ್ಷೆಗೂ ಮೀರಿದ ಜನಸ್ಪಂದನೆ ಹಾಗೂ ವಾಹನ ನಿಲುಗಡೆಯಲ್ಲಿ ಆದ ಅಡಚಣೆಗಳನ್ನು ಮನಗಂಡು ಈ ಬಾರಿ, ಶನಿವಾರ ಹಾಗೂ ಆದಿತ್ಯವಾರ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರು ತಮ್ಮ ತಮ್ಮ ವಾಹನಗಳನ್ನು ಕಿಲ್ಲೆ ಮೈದಾನದಲ್ಲಿ (ಕೋರ್ಟ್ ಮೈದಾನ ) ಮಹಾಲಿಂಗೇಶ್ವರ ದೇವಸ್ಥಾನದ ರಥ ನಿಲ್ಲಿಸುವ ಜಾಗದ ಮುಂಭಾಗ, ನಾಗನಕಟ್ಟೆ ಹಾಗೂ ಅಯ್ಯಪ್ಪ ಗುಡಿಯ ಮುಂಭಾಗ, ಖಾಸಗಿ ಬಸ್ ನಿಲ್ದಾಣದ ಮುಂಭಾಗದ ಕಂಬಳ ಕೆರೆಯ ಎಡಭಾಗ ಹಾಗೂ ಮೂಲ ನಾಗ ಸನ್ನಿಧಿಯ ಮುಂಭಾಗದಲ್ಲಿ, ಪಾರ್ಕಿಂಗ್ ಮಾಡಬಹುದಾಗಿದೆ. ಮಾತ್ರವಲ್ಲದೆ ವಿಶೇಷವಾಗಿ ಆದರ್ಶ ಆಸ್ಪತ್ರೆಯ ಮುಂಭಾಗದಿಂದ ಎಂ ಜಿ ರಸ್ತೆ ಬರುವಾಗ ಖಾಸಗಿ ಬಸ್ಸು ನಿಲ್ದಾಣದ ಹಿಂಭಾಗದಲ್ಲಿ ವಿಶಾಲವಾದ 3 ಎಕರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಾರ್ವಜನಿಕರು ವಾಹನದಟ್ಟಣೆಯನ್ನು ನಿಯಂತ್ರಿಸುವಲ್ಲಿ ಕೈಜೋಡಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.