
ELECTION: ವಿಧಾನ ಪರಿಷತ್ ಉಪ ಚುನಾವಣೆ; ಪುತ್ತೂರಿನಲ್ಲಿ ಬಿರುಸಿನ ಮತದಾನ
ಪುತ್ತೂರು: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧೀಕಾರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆಯುವ ಉಪ ಚುನಾವಣೆ ಇಂದು ನಡೆಯುತ್ತಿದ್ದು, ಮತದಾನ ಬಿರುಸಿನಿಂದ ಆರಂಭಗೊಂಡಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯನ್ನೊಳಗೊಂಡ ಈ ಕ್ಷೇತ್ರದಲ್ಲಿ ಒಟ್ಟು 392 ಮತಗಟ್ಟೆಗಳಿದ್ದು, 6032 ಮಂದಿ ಮತದಾರರಿದ್ದಾರೆ. ಉಭಯ ಜಿಲ್ಲೆಗಳ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು, ಶಾಸಕರು ಹಾಗೂ ಸಂಸದರು ಮತದಾನ ಮಾಡಲಿದ್ದಾರೆ. ಈಗಾಗ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಸಿನಿಂದ ಮತದಾನ ಆರಂಭಗೊಂಡಿದ್ದು, ಹಲವೆಡೆ ಬಿಜೆಪಿಯ ಚುನಾಯಿತ ಸದಸ್ಯರನ್ನೊಳಗೊಂಡ ಮತದಾರರು ಮತ ಚಲಾಯಿಸಿದ್ದಾರೆ.
ಪುತ್ತೂರಿನ ಆರ್ಯಾಪು ಕುರಿಯ ಪಂಚಾಯತ್ ನ ಬಿಜೆಪಿಯ ಎಲ್ಲಾ 14 ಸದಸ್ಯರು ಮತ ಚಲಾಯಿಸಿದ್ದಾರೆ. ಹಾಗೆಯೇ ಕೇಪು ಗ್ರಾಮ ಪಂಚಾಯತ್ ನ ಬಿಜೆಪಿಯ ಎಲ್ಲಾ 13 ಸದಸ್ಯರು ಮತ ಚಲಾವಣೆ ಮಾಡಿದ್ದಾರೆ. ನರಿಮೊಗರು, ವಿಡ್ಲ ಮುಡ್ನೂರು, ಹಿರೇಬಂಡಾಡಿ, ಕೆಯ್ಯೂರು, ಕೆದಂಬಾಡಿ, ಕೊಳ್ತಿಗೆ ಪಂಚಾಯತ್ ನ ಎಲ್ಲಾ ಬಿಜೆಪಿ ಸದಸ್ಯರು ಮತ ಚಲಾಯಿಸಿದ್ದಾರೆ.
ಇನ್ನು ಪುತ್ತೂರು ಬಿಜೆಪಿ ಕಚೇರಿಗೆ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಆಗಮಿಸಿದ್ದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಗೆಲುವಿಗೆ ಎಲ್ಲಾ ಬಿಜೆಪಿಯ ಸದಸ್ಯರು ಒಗ್ಗಟ್ಟಾಗಿ ಶ್ರಮಿಸುತ್ತಿದ್ದಾರೆ. ನಮ್ಮ ಗೆಲುವು ನಿಶ್ಚಿತ. ಆದ್ರೆ ಬಹುದೊಡ್ಡ ಅಂತರದಲ್ಲಿ ಗೆಲುವು ಪಡೆಯುವ ಮೂಲಕ ರಾಜ್ಯ ಸರ್ಕಾರಕ್ಕೆ ಜನಪ್ರತಿನಿಧಿಗಳೇ ಕಾಂಗ್ರೆಸನ್ನ ತಿರಸ್ಕಾರ ಮಾಡಿದ್ದಾರೆ ಅಂತ ಗೊತ್ತಾಗಬೇಕು ಎಂದರು. ಇನ್ನು ಬಿಜೆಪಿಯಿಂದ ಕಿಶೋರ್ ಕುಮಾರ್ ಪುತ್ತೂರು, ಕಾಂಗ್ರೆಸ್ ನಿಂದ ರಾಜು ಪೂಜಾರಿ, ಎಸ್ ಡಿಪಿಐನಿಂದ ಅನ್ವರ್ ಸಾದತ್ ಎಸ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ದಿನಕರ ಉಳ್ಳಾಲ ಕಣದಲ್ಲಿದ್ದಾರೆ.