APMC: ಪುತ್ತೂರು ಎಪಿಎಂಸಿಯಲ್ಲಿ ಭಾರೀ ಹೈಡ್ರಾಮ!!
ಪುತ್ತೂರು: ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿರುವ ವಸತಿಗೃಹದಲ್ಲಿ ಅನಧಿಕೃತವಾಗಿ ವಾಸ್ತವ್ಯವಿದ್ದ ಎಪಿಎಂಸಿ ದಿನಗೂಲಿನೌಕರೆಯ ಕೊಠಡಿಗೆ ಬುಧವಾರ ಬೀಗ ಜಡಿಯುವ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ವಿವಾದಕ್ಕೆ ಕೊನೆಗೂ ಅಂತ್ಯ ಸಿಕ್ಕಿದಂತಾಗಿದೆ.
ವಸತಿಗೃಹದ ಕೊಠಡಿ ಸಂಖ್ಯೆ 3ನ್ನು ಪ್ರೇಮಾ ಕುಮಾರಿ ಎಂಬವರು ಪಡೆದುಕೊಂಡಿದ್ದು, ಇದರಲ್ಲಿ ಎಪಿಎಂಸಿಯಲ್ಲಿ ದಿನಗೂಲಿ ನೌಕರಿ ಮಾಡುತ್ತಿರುವ ಜಾನಕಿ ಎಂಬವರು ಅನಧಿಕೃತವಾಗಿ ವಾಸ್ತವ್ಯ ಹೂಡಿದ್ದರು. ಈ ಬಗ್ಗೆ ಎಪಿಎಂಸಿ ಕಾರ್ಯದರ್ಶಿ ಎಂ.ಸಿ.ಪಡಗಾನೂರು ಅವರು ಪ್ರೇಮಾಕುಮಾರಿ ಅವರಿಗೆ ನೋಟೀಸು ನೀಡಿ ಕೊಠಡಿ ತೆರವು ಮಾಡುವಂತೆ ಸೂಚನೆ ನೀಡಿದ್ದರು. ಈ ಕೊಠಡಿ ತೆರವು ಮಾಡಲು ನನ್ನ ಅಭ್ಯಂತರ ಇಲ್ಲ ಎಂದು ಆಕೆ ಲಿಖಿತವಾಗಿ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಕೊಠಡಿಯಲ್ಲಿ ಅನಧಿಕೃತವಾಗಿ ವಾಸವಾಗಿರುವ ದಿನಗೂಲಿ ನೌಕರೆಗೆ ಸುಮಾರು 4 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ಆಕೆ ಕೊಠಡಿ ತೆರವು ಮಾಡದ ಹಿನ್ನಲೆಯಲ್ಲಿ ಎಪಿಎಂಸಿ ಆಡಳಿತಾಧಿಕಾರಿ ತಹಶೀಲ್ದಾರ್ ಪುರಂದರ ಹೆಗ್ಡೆ ಅವರ ಅನುಮತಿಯೊಂದಿಗೆ ಈ ಕೊಠಡಿಗೆ ಬೀಗ ಜಡಿದು ಪ್ರವೇಶ ನಿರಾಕರಿಸಲಾಗಿದೆ.
ಎಪಿಎಂಸಿಯಲ್ಲಿ ಹೈಡ್ರಾಮಾ...
ಬೆಳಿಗ್ಗೆ 11.30ಕ್ಕೆ ಕೊಠಡಿ ತೆರವು ಮಾಡುವುದಾಗಿ ಎಪಿಎಂಸಿ ಕಾರ್ಯದರ್ಶಿ ನೋಟೀಸು ನೀಡಿದ್ದು, ಈ ಸಂದರ್ಭ ಹಾಜರಿರಬೇಕಾದ ದಿನಗೂಲಿ ನೌಕರೆ ಜಾನಕಿ ಅವರು ಎಪಿಎಂಸಿ ಕಚೇರಿಯಲ್ಲಿ ಕುಳಿತು ಪ್ರತಿರೋಧ ತೋರಿದರು. ಕಾರ್ಯದರ್ಶಿ ಸೇರಿದಂತೆ ಎಪಿಎಂಸಿ ಅಧಿಕಾರಿ-ಸಿಬಂದಿಗಳು ಮನವಿ ಮಾಡಿಕೊಂಡರೂ ಆಕೆ ಮಾತ್ರ ಬರಲೇ ಇಲ್ಲ. ಪೊಲೀಸ್ ಅಧಿಕಾರಿಗಳೂ ಈಕೆಯನ್ನು ಕರೆದು ತರುವ ಪ್ರಯತ್ನ ನಡೆಸಿದರು. ಆದರೆ ಜಪ್ಪಯ್ಯ ಅಂದರೂ ಆಕೆ ಕಚೇರಿ ಬಿಟ್ಟು ಹೊರಬರಲೇ ಇಲ್ಲ. ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಈ ಹೈಡ್ರಾಮಾ ನಡೆಯಿತು. ಯಾವ ವಿನಂತಿಗೂ ಬಗ್ಗದ ಆಕೆ ನನನ್ನ ತಮ್ಮ ಪೊಲೀಸ್. ಅವರು ಬರಬೇಕು ಎಂದು ಹೇಳಿದರು. ಆ ಬಳಿಕ ನಾನು ಬರಬೇಕಾದರೆ ಶಾಸಕರು ಹೇಳಬೇಕು ಎಂದರು. ಕೊನೆಗೆ ಕೊಠಡಿಗೆ ಬೀಗ ಜಡಿದು ಪ್ರವೇಶ ನಿರಾಕರಣೆ ಮಾಡಲಾಯಿತು. ಆದರೆ ಜಾನಕಿ ಅವರಿಗೆ ಸೇರಿದ ವಸ್ತುಗಳು ಕೂಡಾ ಇದೀಗ ಕೊಠಡಿಯಲ್ಲಿಯೇ ಬಾಕಿಯಾಗಿದೆ.
ಈ ಹಿಂದೆ ಎಪಿಎಂಸಿ ಪ್ರಭಾರ ಕಾರ್ಯದರ್ಶಿ ಹುದ್ದೆ ನಿರ್ವಹಣೆ ಮಾಡಿದ್ದ ರಾಮಚಂದ್ರ ಅವರು ಹಾಸ್ಟೆಲ್ ನಲ್ಲಿ ಅಡುಗೆ ಸಿಬಂದಿಯಾಗಿರುವ ಪ್ರೇಮಾ ಕುಮಾರಿ ಹೆಸರಲ್ಲಿ ಈ ಕೊಠಡಿಯನ್ನು ನೀಡಿದ್ದರು. ಆದರೆ ಪ್ರೇಮಾ ಕುಮಾರಿ ಇಲ್ಲಿ ವಾಸ್ತವ್ಯಕ್ಕೆ ಬಂದಿರಲಿಲ್ಲ. ಬದಲಿಗೆ ಅನಧಿಕೃತವಾಗಿ ದಿನಗೂಲಿ ನೌಕರೆ ಜಾನಕಿ ಅವರು ವಾಸವಾಗಿದ್ದರು. ರಾಮಚಂದ್ರ ಅವರಿಗೆ ಅಮಾನತು ಶಿಕ್ಷೆ ಹಾಗೂ ಬಳ್ಳಾರಿಗೆ ವರ್ಗಾವಣೆಯಾಗಿದ್ದು, ಈ ಅನಧಿಕೃತ ವಾಸ್ತವ್ಯದ ಬಗ್ಗೆ ಕಾರ್ಯದರ್ಶಿಗಳಿಗೆ ದೂರು ಬಂದ ಹಿನ್ನಲೆಯಲ್ಲಿ ಇದೀಗ ಕ್ರಮ ಕೈಗೊಳ್ಳಲಾಗಿದೆ ಎಂದು ಕಾರ್ಯದರ್ಶಿ ಎಂ.ಸಿ.ಪಡಾಗನೂರು ಮಾದ್ಯಮಕ್ಕೆ ತಿಳಿಸಿದರು.
ಕೊಠಡಿಗೆ ಬೀಗ ಜಡಿಯುವ ಸಂದರ್ಭ ಎಪಿಎಂಸಿಯ ಹಿರಿಯ ಮಾರುಕಟ್ಟೆ ಮೇಲ್ವಿಚಾರಕರು ಪವಿತ್ರಾ, ಆತಂರಿಕ ಲೆಕ್ಕಪರಿಶೋಧಕರಾದ ರವಿಕುಮಾರ್ ಹಾಜರಿದ್ದರು. ನಗರಠಾಣೆಯ ಎಎಸೈ ಗಂಗಾಧರ್ ನೇತೃತ್ವದಲ್ಲಿ ಬಂದೋಬಸ್ತು ವ್ಯವಸ್ತೆ ಮಾಡಲಾಗಿತ್ತು.
ವರ್ಗಾವಣೆಯಾದರೂ ವಸತಿಗೃಹದಲ್ಲಿಯೇ..
ಪುತ್ತೂರು ಎಪಿಎಂಸಿಯಲ್ಲಿ ಲೆಕ್ಕಾಧಿಕಾರಿಯಾಗಿದ್ದು, ಪ್ರಭಾರ ಕಾರ್ಯದರ್ಶಿಯೂ ಆಗಿದ್ದ ರಾಮಚಂದ್ರ ಅವರಿಗೆ ಸೆ.12ಕ್ಕೆ ಬಳ್ಳಾರಿಗೆ ವರ್ಗಾವಣೆಯಾದ ಹಿನ್ನಲೆಯಲ್ಲಿ ಪುತ್ತೂರು ಎಪಿಎಂಸಿಯಿಂದ ಬಿಡುಗಡೆ ಮಾಡಲಾಗಿತ್ತು. ವರ್ಗಾವಣೆಗೊಂಡ ಬಳಿಕ 2 ತಿಂಗಳ ಕಾಲ ಪುತ್ತೂರು ಎಪಿಎಂಸಿ ವಸತಿಗೃಹದಲ್ಲಿ ನ.12ರ ತನಕ ವಾಸ್ತವ್ಯಕ್ಕೆ ಕಾನೂನು ಪ್ರಕಾರ ಅವಕಾಶ ಇದೆ. ಇಲ್ಲಿಂದ ರಿಲೀವ್ ಆರ್ಡರ್ ಪಡೆದುಕೊಂಡರೂ ರಾಮಚಂದ್ರ ಅವರು ಬಳ್ಳಾರಿ ಎಪಿಎಂಸಿಯಲ್ಲಿ ಹುದ್ದೆ ಸ್ವೀಕರಿಸದೆ ಪುತ್ತೂರಿನಲ್ಲಿಯೇ ಉಳಿದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.



