
PUTTUR: ತುಳುನಾಡಿನ ಸೊಬಗನ್ನ ಬಿಂಬಿಸುವ 'ಕಲ್ಜಿಗ' ರಾಜ್ಯಾದ್ಯಂತ ನಾಳೆ ತೆರೆಗೆ!!
ಪುತ್ತೂರು: ತುಳುನಾಡಿನ ಯುವಕರು ಸೇರಿಕೊಂಡು ಮಂಗಳೂರು ಸೀಮೆಯ ಕನ್ನಡ ಭಾಷಾ ಸೊಗಡನ್ನ ಬಳಸಿಕೊಂಡು ನಿರ್ಮಿಸಿದ 'ಕಲ್ಜಿಗ' ಕನ್ನಡ ಚಲನಚಿತ್ರ ನಾಳೆ ತೆರೆಗೆ ಅಪ್ಪಳಿಸಲಿದೆ. ಹೌದು ತುಳುನಾಡಿನ ಕಥಾಹಂದರವನ್ನ ಈ ಚಿತ್ರದಲ್ಲಿ ಬಳಸಿಕೊಂಡಿದ್ದು, ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಸುಮನ್ ಸುವರ್ಣ ಅವರದ್ದು.
ಧರ್ಮದ ದಾರಿಯಲ್ಲಿ ಅಧರ್ಮದ ನೆರಳು ಬಿದ್ದ ನಂತರ ಹೊರಹೊಮ್ಮುವ ರೋಚಕ ಕಥನ ಕಲ್ಜಿಗದ ವಿಶೇಷತೆ. ಮುಖ್ಯವಾಗಿ ಬಹುಕಾಲದ ಬಳಿಕ ನಾದಬ್ರಹ್ಮ ಹಂಸಲೇಖ ಸಂಗೀತ ನಿರ್ದೇಶನಕ್ಕೆ ಕಲ್ಜಿಗ ಚಿತ್ರದ ಮೂಲಕ ಮರಳಿದ್ದಾರೆ. ಹಿನ್ನೆಲೆ ಸಂಗೀತವನ್ನ ತುಳುನಾಡಿನ ಪ್ರತಿಭೆ ಪ್ರಸಾದ್ ಶೆಟ್ಟಿ ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿರುವುದು ಚಿತ್ರದ ಟೀಸರ್ ಮೂಲಕ ಹೊರಹೊಮ್ಮಿದೆ. ಸದ್ಯ 'ಕಲ್ಜಿಗ' ಅನ್ನೋದು ತುಳುಪದ. ಕನ್ನಡದಲ್ಲಿ ಕಲ್ಜಿಗ ಅಂದ್ರೆ ಕಲಿಯುಗ. ಆದ್ರೆ ಚಲನಚಿತ್ರ ಕನ್ನಡದಲ್ಲಿ ರಾಜ್ಯಾದ್ಯಂತ ಹಾಗೂ ದೇಶ-ವಿದೇಶಗಳಲ್ಲೂ ಬಿಡುಗಡೆಯಾಗಲಿದೆ.
ಕಾಂತಾರ ಚಿತ್ರದ ಜನಪ್ರೀಯತೆಯ ಬಳಿಕ ಮತ್ತೊಂದು ಕರಾವಳಿಯ ಸೊಬಗನ್ನ ಬಿಂಬಿಸುವ 'ಕಲ್ಜಿಗ' ಚಲನಚಿತ್ರ ತೆರೆಗೆ ಅಪ್ಪಳಿಸಲು ರೆಡಿಯಾಗಿದೆ. ಚಿತ್ರದ ಪ್ರತಿಯೊಂದು ಪ್ರಮುಖ ಘಟ್ಟದಲ್ಲೂ ಕರಾವಳಿಯ ಸಂಸ್ಕ್ರತಿಗಳಲ್ಲಿ ಕಂಡುಬರುವಂತ ತಾಸೆ, ನಾದಸ್ವರ, ಪಾರ್ದನ ಹೀಗೆ ವಿಭಿನ್ನ ಮಾದರಿಯಲ್ಲಿ ಹಿನ್ನೆಲೆ ಸಂಗೀತ ಮೂಡಿಬಂದಿದೆ. ಇಂತಹ ಪ್ರಯೋಗ ಪ್ರಪ್ರಥಮವಾಗಿ ಕಲ್ಜಿಗ ಚಿತ್ರದ ಮೂಲಕ ಮಾಡಿದ್ದೇವೆ ಅಂತಾರೆ ಪ್ರಸಾದ್ ಶೆಟ್ಟಿ.
ಇನ್ನುಳಿದಂತೆ ಈ ಚಿತ್ರದಲ್ಲಿ ತುಳುನಾಡಿನ ಕಿಂಗ್ ಆಫ್ ಆ್ಯಕ್ಷನ್ ಅರ್ಜುನ್ ಕಾಪಿಕಾಡ್ ನಟನಾಗಿ ಅಭಿನಯಿಸಿದ್ದಾರೆ. ಇವರಿಗೆ ನಾಯಕಿ ನಟಿಯಾಗಿ ಸುಶ್ಮಿತ್ ಭಟ್ ಬಣ್ಣ ಹಚ್ಚಿದ್ದಾರೆ. ಹಿಮಾನಿ ಫಿಲಂಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡ 'ಕಲ್ಜಿಗ' ಚಿತ್ರಕ್ಕೆ ಶರತ್ ಕುಮಾರ್ ಎ.ಕೆ. ಹಣ ಹೂಡಿದ್ದಾರೆ. ಚಿತ್ರದಲ್ಲಿ ಗೋಪಿನಾಥ್ ಭಟ್, ಜ್ಯೋತಿಷ್ ಶೆಟ್ಟಿ, ಮಾನಸಿ ಸುಧೀರ್, ವಿಜಯ್ ಶೋಭರಾಜ್ ಪಾವೂರು, ಶ್ಲಾಘಾ ಸಾಲಿಗ್ರಾಮ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಚಿನ್ ಶೆಟ್ಟಿ ಛಾಯಾಗ್ರಹಣ, ಯಶ್ವಿನ್ ಕೆ ಶೆಟ್ಟಿಗಾರ್ ಸಂಕಲನ ಈ ಚಿತ್ರಕ್ಕಿದೆ. ಸದ್ಯ ಚಿತ್ರದ ಟ್ರೇಲರ್ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿದ್ದು, ನಾಳೆ ಬಿಡುಗಡೆಗಾಗಿ ಸಿನಿ ಪ್ರೇಮಿಗಳು ಕಾತುರದಲ್ಲಿದ್ದಾರೆ.