.jpg)
Mangaluru: ಈದ್ ಮಿಲಾದ್ ರ‍್ಯಾಲಿ ವಿರುದ್ಧ ಬಜರಂಗದಳದಿಂದ ಬಿ.ಸಿ. ರೋಡ್ ಚಲೋ! ಕದಡಿದ ಕರಾವಳಿಗೆ ಬೇಕಿದೆ ಪೊಲೀಸರ ಆ್ಯಕ್ಷನ್!
ಮಂಗಳೂರು: ಮಂಡ್ಯದ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಗಲಭೆ ಇನ್ನೂ ಆತಂಕ ಪರಿಸ್ಥಿತಿ ನಿರ್ಮಿಸಿರುವ ಬೆನ್ನಲ್ಲೇ ಕರಾವಳಿಯಲ್ಲೂ ಕೋಮು ವೈಷಮ್ಯ ಕದಡಲು ಕಿಡಿಗೇಡಿಗಳು ಮುಂದಾಗಿದ್ದಾರೆ. ನಾಗಮಂಗಲ ಗಲಾಟೆ ವಿರುದ್ಧ ಪ್ರತಿಭಟನೆ ನಡೆಸಿದ್ದ ವೇಳೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ (Sharan Pumpwel) ಉದ್ರೇಕಕಾರಿ ಭಾಷಣ ಮಾಡಿದ್ದರು. ಒಂದು ವೇಳೆ “ಹಿಂದೂಗಳು ಅವಕಾಶ ನೀಡದಿದ್ದರೆ ಈದ್ ಮಿಲಾದ್ (Eid Milad) ಜಾಥಾ ನಡೆಯದು” ಎಂದು ಹೇಳಿದ್ದರು. ಇದೇ ಬೆನ್ನಿಗೆ ಸೋಮವಾರ (ಸೆಪ್ಟಂಬರ್ 16) ಈದ್ ಮಿಲಾದ್ ಆಚರಣೆಗೆ ಸಿದ್ಧರಾಗಿರುವ ಮುಸ್ಲಿಂ ಸಮುದಾಯಕ್ಕೆ ಆತಂಕ ಎದುರಾಗಿದೆ. ಈ ನಡುವ ಬಂಟ್ವಾಳ ಪುರಸಭೆ ಮಾಜಿ ಅಧ್ಯಕ್ಷ ಮೊಹಮ್ಮದ್ ಶರೀಫ್ ಹಾಗೂ ಹುಸೈನಾರ್ ಎಂಬವರು ಸೇರಿಕೊಂಡು ಮಾಡಿದ ಆಡಿಯೋ ಸಂದೇಶ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಏನಿದೆ ಆಡಿಯೋದಲ್ಲಿ?
ತುಳುವಿನಲ್ಲಿರುವ ಈ ಆಡಿಯೋದಲ್ಲಿ “ಬಿ.ಸಿ. ರೋಡ್ ಕೈಕಂಬ, ಪರ್ಲಿಯಾ, ತಾಳಿಪಡ್ಪು, ಪೊಳಲಿ ದ್ವಾರವಾಗಿ ಕೈಕಂಬ ಮಸೀದಿವರೆಗೆ ಈದ್ ಮಿಲಾದ್ ಮೆರವಣಿಗೆ ನಡೆಯಲಿದೆ. ನಿನಗಾಗಲೀ ಅಥವಾ ನಿನ್ನ ಚೇಳಾಗಳಿಗಾಗಲೀ ತಾಕತ್ತು ಇದ್ದರೆ ನಮ್ಮ ಮೆರವಣಿಗೆ ಹೋಗುವಾಗ ನೀನು ಬಂದು ನಿಲ್ಲಬೇಕು. ನಿನ್ನನ್ನು ಕಾಯುತ್ತೇವೆ” ಎಂದು ಸವಾಲು ರೀತಿಯಲ್ಲಿ ಸಂದೇಶ ರವಾನಿಸಿದ್ದಾರೆ.
ಬಿ.ಸಿ. ರೋಡ್ ಚಲೋಗೆ ಕರೆ!
ಈ ನಡುವೆ ಆಡಿಯೋ ಸಂದೇಶಕ್ಕೆ ಟಕ್ಕರ್ ಅನ್ನೋ ರೀತಿಯಲ್ಲಿ ಬಜರಂಗದಳ ಮುಖಂಡ ಪುನೀತ್ ಅತ್ತಾವರ ಬಿ.ಸಿ. ರೋಡ್ ಚಲೋಗೆ ಕರೆ ನೀಡಿದ್ದಾರೆ. ತನ್ನ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ, “ಜಿಹಾದಿಗಳೇ ನಿಮ್ಮ ಸವಾಲು ಸ್ವೀಕರಿಸಿದ್ದೇವೆ. ನಾವು ಬರುತ್ತಿದ್ದೇವೆ, ತಾಕತ್ತು ಇದ್ದರೆ ತಡೆಯಿರಿ” ಎಂದು ಪುನೀತ್ ಅತ್ತಾವರ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಕರಾವಳಿಗೆ ಮತ್ತೆ ಕೋಮು ಆತಂಕ!
ಇತ್ತೀಚೆಗಿನವರೆಗೂ ಗಣೇಶ ವಿಸರ್ಜನೆ ಮೆರವಣಿಗೆ ಹಾಗೂ ಈದ್ ಮಿಲಾದ್ ರ‍್ಯಾಲಿಗಳು ಕರಾವಳಿಯಲ್ಲಿ ಅಂತಹ ಗಲಭೆಯನ್ನು ಹುಟ್ಟು ಹಾಕಿಲ್ಲ. ಆದರೆ, ಈ ಬಾರಿ ಇಂತಹ ಕೋಮು ವೈಷಮ್ಯ ಬಿತ್ತುವ ಕೆಲಸಗಳನ್ನು ಸಂಘಟನೆಗಳು ನಡೆಸಿವೆ. ಎರಡು ವರ್ಗದ ಕೆಲವೊಂದು ಕಿಡಿಗೇಡಿಗಳು ಶಾಂತಿ ಕದಡಲು ಹವಣಿಸಿದಂತಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಹಾಗೂ ಮಂಗಳೂರು ನಗರ ಪೊಲೀಸ್ ಈ ಕುರಿತು ತುರ್ತಾಗಿ ಕಠಿಣ ಕ್ರಮಕ್ಕೆ ಮುಂದಾಗಲಿ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಆಗ್ರಹಿಸಿದ್ದರೆ.