
Ullal: ಕಡಪ್ಪರ ಸಮೀರ್ ಮೇಲೆ ತಲವಾರು ದಾಳಿ ನಡೆಸಿ ಹ*ತ್ಯೆ!
Monday, August 12, 2024
ಮಂಗಳೂರು: ಕರಾವಳಿಯಲ್ಲಿ ಮತ್ತೆ ಗ್ಯಾಂಗ್ ವಾರ್ ಕಾಳಗ ಮುಂದುವರೆದಿದ್ದು ಕಡಪ್ಪರ ಸಮೀರ್ ಬಲಿಯಾಗಿದ್ದಾನೆ. ನಟೋರಿಯಸ್ ರೌಡಿಶೀಟರ್ ಆಗಿ ಗುರುತಿಸಿಕೊಂಡಿದ್ದ ಕಡಪ್ಪರ ಸಮೀರ್ ನನ್ನು ಭಾನುವಾರ ರಾತ್ರಿ ತನ್ನ ತಾಯಿಯ ಜೊತೆಗೆ ಇರಬೇಕಾದರೆ ಅಟ್ಟಾಡಿಸಿಕೊಂಡು ಉಳ್ಳಾಲ ವ್ಯಾಪ್ತಿಯ ಕಲ್ಲಾಪುವಿನಲ್ಲಿ ಹ*ತ್ಯೆಗೈಯಲಾಗಿದೆ.
ಕಡಪ್ಪರ ಸಮೀರ್ 2018 ರ ಡಿಸೆಂಬರ್ 11 ರಂದು ನಡೆದಿದ್ದ ಟಾರ್ಗೆಟ್ ಇಲ್ಯಾಸ್ ಹ*ತ್ಯೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದ. ಭಾನುವಾರ ರಾತ್ರಿ ತಾಯಿಯೊಂದಿಗೆ ಊಟಕ್ಕೆಂದು ಬಂದಿದ್ದ ಎಂದು ಗೊತ್ತಾಗಿದೆ. ಈ ವೇಳೆ ದುಷ್ಕರ್ಮಿಗಳ ತಂಡ ಹೋಟೆಲ್ ನಿಂದ ಹೊರ ಬರುತ್ತಿದ್ದಂತೆ ಅಟ್ಟಾಡಿಸಿ ಬೆನ್ನಟ್ಟಿದೆ. ಬಳಿಕ ಸುಮಾರು ದೂರದವರೆಗೆ ಅಟ್ಟಾಡಿಸಿದ ಬಳಿಕ ಕಡಪ್ಪರ ಸಮೀರ್ ತಲೆಗೆ ಯದ್ವಾತದ್ವಾ ತಲವಾರು ದಾಳಿ ನಡೆಸಿದ್ದು ಸ್ಥಳದಲ್ಲೇ ಸಮೀರ್ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ದರೋಡೆ ಪ್ರಕರಣದಲ್ಲಿ ಜೈಲು ಸೇರಿದ್ದ ಸಮೀರ್, ಇತ್ತೀಚೆಗೆ ಮಂಗಳೂರು ಕಾರಾಗೃಹ ದಲ್ಲಿ ಸಮೀರ್ ಮೇಲೆ ಸಹ ಕೈದಿ ಗಳಿಂದ ದಾಳಿ ನಡೆದಿತ್ತು ಎನ್ನಲಾಗಿದೆ. ವಾರದ ಹಿಂದೆ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿದ್ದ ಸಮೀರ್ ಮೇಲೆ ಪೂರ್ವ ದ್ವೇಷದ ಹಿನ್ನೆಲೆ ಕೊಲೆ ನಡೆದಿದೆ ಎನ್ನಲಾಗಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.