-->
PUTTUR: ಸೌಮ್ಯ ಭಟ್ ಕೊಲೆ ಪ್ರಕರಣಕ್ಕೆ ಇಂದಿಗೆ 27 ವರ್ಷ!!

PUTTUR: ಸೌಮ್ಯ ಭಟ್ ಕೊಲೆ ಪ್ರಕರಣಕ್ಕೆ ಇಂದಿಗೆ 27 ವರ್ಷ!!


ಪುತ್ತೂರು: ಕರಾವಳಿಯನ್ನು ಬೆಚ್ಚಿ ಬೀಳಿಸಿದ್ದ  ಸೌಮ್ಯಾ ಭಟ್‌ ಕೊಲೆ ಪ್ರಕರಣಕ್ಕೆ ಇಂದಿಗೆ  27 ವರ್ಷ ತುಂಬಿದ್ದು, ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದ ಆರೋಪಿಯ ಸುಳಿವು ಇನ್ನೂ ಪತ್ತೆಯಾಗಿಲ್ಲ.

ಪುತ್ತೂರು ವಿವೇಕಾನಂದ ಕಾಲೇಜಿನ ಬಿಎಸ್‌ಸಿ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದ ಸೌಮ್ಯಾ ಭಟ್‌ ಅವರನ್ನು ಕುದಂಬ್ಲಾಜೆಯ ಮಿಲಿಟ್ರಿ ಅಶ್ರಫ್‌ ಬರ್ಬರವಾಗಿ ಕೊಲೆಗೈದಿದ್ದ. ಈ ಘಟನೆಯಿಂದ ಇಡೀ ಪುತ್ತೂರು ಕೆರಳಿ ಕೆಂಡದಂತೆ ಆಗಿತ್ತು.

ಘಟನೆ: 

ಅದು 1997ರ ಆಗಸ್ಟ್‌ 7 ರಂದು ಸಂಜೆ 5ರ ಸಮಯ ಕಾಲೇಜು ಮುಗಿಸಿ ಬಸ್‌ನಲ್ಲಿ ಬಂದು ಕಬಕದಲ್ಲಿ ಇಳಿದ ಸೌಮ್ಯಾ ತನ್ನ ಮನೆಗೆ ಕೆದಿಲಕ್ಕೆ ಹೋಗುವ ಒಳ ರಸ್ತೆಯಲ್ಲಿ ರೈಲ್ವೇ ಹಳಿಯನ್ನು ದಾಟಿ ಹೋಗುತ್ತಿದ್ದರು. ಅದು ನಿರ್ಜನ ಪ್ರದೇಶ. ಅಷ್ಟೇ ಅಲ್ಲ ಸಂಜೆಯ ವೇಳೆ ಆಗಿದ್ದ ಕಾರಣ ಕತ್ತಲು ಆವರಿಸಿತ್ತು. ಸೌಮ್ಯಾಳನ್ನು ಕಬಕದಿಂದ ಹಿಂಬಾಲಿಸಿದ್ದ ಆರೋಪಿ ನಿರ್ಜನ ದಾರಿಯಲ್ಲಿ ಆಕೆಗೆ ಅಡ್ಡವಾಗಿ ನಿಂತಿದ್ದ. ಆಕೆಯ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದ. ಈ ವೇಳೆ ಅವನಿಂದ ತಪ್ಪಿಸಿಕೊಂಡ ಸೌಮ್ಯಾ ಅಲ್ಲಿಂದ ಓಡಿದ್ದಾರೆ. ಆದ್ರೆ ಆಲದಗುಂಡಿ ಬಳಿ ಆಕೆಯನ್ನು ಬೆನ್ನತ್ತಿ ಬಂದ ಅಶ್ರಫ್‌ ಚಾಕುವಿನಿಂದ ಮನಬಂದಂತೆ ಚುಚ್ಚಿದ್ದ. 20ಕ್ಕೂ ಅಧಿಕ ಬಾರಿ ಇರಿದು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ. ಆದ್ರೆ ಈ ಪ್ರಕರಣದ ಬಳಿಕ ಇಡೀ ಪುತ್ತೂರಿಗೆ ಪುತ್ತೂರೇ ಹಿಂಸಾಚಾರಕ್ಕೆ ನಲುಗಿತ್ತು. ಪುತ್ತೂರಿನಾದ್ಯಂತ ಕರ್ಫ್ಯೂ ಜಾರಿ ಘೋಷಣೆಯಾಗಿತ್ತು. ಬಂದ್‌ಗೆ ಕರೆ ನೀಡಲಾಯಿತು. ಕೊನೆಗೂ ಆರೋಪಿ ಅಶ್ರಫ್ ಬಂಧನವಾಯಿತು. ಅದಾದ ಎರಡು ತಿಂಗಳಲ್ಲಿ ಆರೋಪಿ ಮಂಗಳೂರಿನಿಂದ ತಪ್ಪಿಸಿಕೊಂಡ. ಕೆಲವೇ ದಿನದಲ್ಲಿ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಬಳಿ ಆತನನ್ನು ಬಂಧಿಸಲಾಯಿತು. ಆ ಬಳಿಕ ಎರಡೇ ವರ್ಷದಲ್ಲಿ ಮತ್ತೆ ಪೊಲೀಸರಿಂದ ತಪ್ಪಿಸಿಕೊಂಡಿದ್ದ. ಹೀಗೆ ತಪ್ಪಿಸಿಕೊಂಡ ಅಶ್ರಫ್‌ ಇನ್ನೂ ಪತ್ತೆಯಾಗಿಲ್ಲ. ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದಾನೆ ಎನ್ನುವ ಮಾತು ಹಬ್ಬಿತ್ತು. ಆದರೆ ಈವರೆಗೆ ಆತನ ಸುಳಿವು ಸಿಕ್ಕಿಲ್ಲ.

ಅಶ್ರಫ್‌ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತಿದ್ದ. ಘಟನೆ ನಡೆಯುವ ಒಂದು ತಿಂಗಳ ಹಿಂದೆ ಊರಿಗೆ ಬಂದಿದ್ದ ಎನ್ನಲಾಗಿದೆ. ಘಟನೆ ನಡೆಯುವ ಎರಡು ದಿನದ ಹಿಂದೆ ಸೌಮ್ಯಾಳ ತಂದೆಯನ್ನು ಭೇಟಿಯಾಗಿ ಮಗಳ ಬಗ್ಗೆ ವಿಚಾರಿಸಿದ್ದ. ಈತ ಸಹಪಾಠಿ ಆಗಿರಬಹುದು ಎಂದು ಭಾವಿಸಿದ ಗಣಪತಿ ಭಟ್ಟರು ಸೌಮ್ಯಾ ಕಾಲೇಜಿಗೆ ಹೋಗುವ ವಿಷಯ ತಿಳಿಸಿದ್ದರು. ಆದರೆ ಆತ ದುಷ್ಕೃತ್ಯ ಎಸಗಲೆಂದೇ ಈ ಮಾಹಿತಿ ಸಂಗ್ರಹಿಸಿದ್ದ. ಕೊಲೆ ಪ್ರಕರಣದ ಬಳಿಕ ಆರೋಪಿ ವಿಕೃತ ಕಾಮಿ ಎನ್ನುವ ಬಗ್ಗೆಯೂ ಮಾಹಿತಿ ಹಬ್ಬಿತ್ತು. ಸೌಮ್ಯಾ ಭಟ್‌ ಕೊಲೆ ನಡೆಯುವ ಎರಡು ದಿನ ಮೊದಲು ಹತ್ತಿರದಲ್ಲೇ ಮನೆಯೊಂದಕ್ಕೆ ನುಗ್ಗಿ ಹುಡುಗಿಯ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿತ್ತು.

Ads on article

Advertise in articles 1

advertising articles 2

Advertise under the article