
KONAJE: ವಯನಾಡ್ ದುರಂತಕ್ಕೆ ಸಂಭ್ರಮಿಸಿದ ನೌಕರನನ್ನು ಕೆಲಸದಿಂದ ಕಿತ್ತೊಗೆದ ಅಂಗಡಿ ಮಾಲೀಕ!!
ಮಂಗಳೂರು: ವಯನಾಡ್ ದುರಂತಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ದ್ವೇಷದ ಪೋಸ್ಟ್ ಹಂಚಿಕೊಂಡ ಆರೋಪದ ಮೇರೆಗೆ ಅಂಗಡಿಯ ನೌಕರನನ್ನು ಮಾಲೀಕರು ಕೆಲಸದಿಂದ ವಜಾಗೊಳಿಸಿದ್ದಾರೆ. ಕೊಣಾಜೆ ಅಸೈಗೋಳಿಯ ಹಾರ್ಡ್‌ವೇರ್ ಅಂಗಡಿಯಲ್ಲಿ ಕೆಲಸಕ್ಕಿದ್ದ ವ್ಯಕ್ತಿ, ವಯನಾಡ್ ಘಟನೆಗೆ ಸಂಬಂಧಿಸಿದಂತೆ ದ್ವೇಷದ ಪೋಸ್ಟನ್ನು ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದ. ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಾರ್ಡ್‌ವೇರ್ ಮಳಿಗೆ ಮಾಲೀಕ ಲಿಯೋ ಮೆಂಡೋನ್ಸ, ‘ನಮ್ಮಲ್ಲಿ ಕೆಲಸಕ್ಕಿದ್ದ ವ್ಯಕ್ತಿ ವಯನಾಡು ಘಟನೆಗೆ ಸಂಬಂಧಿಸಿದಂತೆ ಮಾನವೀಯತೆ ಮೆರೆಯುವ ಬದಲು ದ್ವೇಷದ ಪೋಸ್ಟ್‌ನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ಬೇಸರ ತಂದಿದೆ. ಈ ಪೋಸ್ಟರ್ ನೋಡಿ ಹಲವರು ನನಗೆ ಕರೆ ಮಾಡಿ, ಸಂದೇಶ ಕಳಿಸಿ ವಿಚಾರಿಸಿದ್ದರು. ವಿಷಯ ತಿಳಿದ ಕೂಡಲೇ ನಾನು ಆತನನ್ನು ಕೆಲಸದಿಂದ ತೆಗೆದುಹಾಕಿದ್ದೇನೆ’ ಎಂದಿದ್ದಾರೆ.
‘ನಾವು 38 ವರ್ಷಗಳಿಂದ ಅಸೈಗೋಳಿಯಲ್ಲಿ ವ್ಯವಹಾರ ಮಾಡಿಕೊಂಡು ಬರುತ್ತಿದ್ದೇವೆ. ಇಲ್ಲಿಯವರೆಗೂ ವ್ಯವಹಾರದಲ್ಲಿ ಕಪ್ಪು ಚುಕ್ಕೆ ಬರದ ಹಾಗೆ ನೋಡಿಕೊಂಡಿದ್ದೇವೆ. ಎಲ್ಲಾ ಧರ್ಮದ ಎಲ್ಲಾ ಜಾತಿಯ ಜನರು ಕೂಡಾ ನಮ್ಮೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ’ ಎಂದು ಅವರು ಹೇಳಿದ್ದಾರೆ.