ಮಹೇಶ್ ಶೆಟ್ಟಿ ತಿಮರೋಡಿ ಬಣದಿಂದ ಬಿಜೆಪಿಗನ ಮೇಲೆ ಹಲ್ಲೆ!
Sunday, July 28, 2024
ಪುತ್ತೂರು: ಮಹೇಶ್ ಶೆಟ್ಟಿ ತಿಮರೋಡಿ ಬಣದವರಿಂದ ಬಿಜೆಪಿ ಕಾರ್ಯಕರ್ತನೋರ್ವನ ಮೇಲೆ ಹಲ್ಲೆಗೈದ ಘಟನೆ ಬೆಳ್ತಂಗಡಿ ತಾಲೂಕಿನ ಕಣಿಯೂರು ಎಂಬಲ್ಲಿ ನಡೆದಿದೆ.
ಹಲ್ಲೆಗೊಳಗಾದವರನ್ನ ಕಣಿಯೂರು ಗ್ರಾ.ಪಂ. ಬಿಜೆಪಿ ಬೆಂಬಲಿತ ಸದಸ್ಯ ಪ್ರವೀಣ್ ಗೌಡ ಎಂದು ಗುರುತಿಸಲಾಗಿದೆ. ರಾಧಾಕೃಷ್ಣ ಗೌಡ, ಪ್ರಜ್ವಲ್, ಕಿರಣ್ ಶಿಶಿಲ ಹಾಗೂ ಇತರರು ಸೇರಿ ಹಲ್ಲೆ ಮಾಡಿರುವುದಾಗಿ ತಿಳಿದುಬಂದಿದೆ. ಇವರೆಲ್ಲ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲಿಗರು ಎಂದು ಹೇಳಲಾಗಿದೆ. ಮಾಹಿತಿ ಪ್ರಕಾರ ರಾಜಕೀಯ ವೈಮನಸ್ಸಿನಿಂದಲೇ ಈ ಹಲ್ಲೆ ನಡೆದಿದೆ ಎನ್ನಲಾಗಿದೆ.
ಕಳೆದೆರಡು ದಿನಗಳ ಹಿಂದೆ ರಾಧಾಕೃಷ್ಣ ಗೌಡ ಎಂಬವರು ವಾಟ್ಸಾಪ್ ಗ್ರೂಪ್ ಒಂದರಲ್ಲಿ ಪ್ರವೀಣ್ ಗೌಡ ಅವರ ಬಗ್ಗೆ ಅವಾಚ್ಯವಾಗಿ ನಿಂದಿಸಿ ವಾಯ್ಸ್ ಮೆಸೇಜ್ ಹಾಕಿದ್ದರು. ಇದೇ ವಿಚಾರವಾಗಿ ರಾಧಾಕೃಷ್ಣ ಅವರಲ್ಲಿ ಫೋನ್ ನಲ್ಲಿ ಪ್ರವೀಣ್ ಗೌಡ ಮಾತಿಗೆ ಮಾತು ಬೆಳೆದಿದೆ. ಇದರಿಂದ ಕುಪಿತಗೊಂಡು ಕಣಿಯೂರಿನಲ್ಲಿರುವ ಪ್ರವೀಣ್ ಗೌಡ ಅವರ ಅಂಗಡಿಗೆ ನುಗ್ಗಿ ರಾಧಾಕೃಷ್ಣ ಗೌಡ ಮತ್ತು ತಂಡ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಅಂಗಡಿಯಲ್ಲಿ ಪ್ರವೀಣ್ ಗೌಡ ಅವರು ಒಬ್ಬರೇ ಇದ್ದಾಗ ಬಂದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಹಲ್ಲೆಗೊಳಗಾದ ಪ್ರವೀಣ್ ಗೌಡ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಇದರ ಮುಂದುವರಿದ ಭಾಗವಾಗಿ ರಾಧಾಕೃಷ್ಣ ಗೌಡ ಅವರು ಕೂಡ ಉಜಿರೆಯ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಇನ್ನು ರಾಧಾಕೃಷ್ಣ ಗೌಡರಿಂದ ಹಲ್ಲೆಗೊಳಗಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ಗೌಡ ಅವರನ್ನ ಮಾಜಿ ಶಾಸಕ ಸಂಜೀವ ಮಠಂದೂರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.