ಭಾರೀ ಭೂಕುಸಿತಕ್ಕೆ ವಾಹನಗಳು ಜಖಂ!!
ಹಾಸನ: ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿಘಾಟ್ನ ಸಕಲೇಶಪುರ ತಾಲೂಕಿನ ದೊಡ್ಡತಪ್ಲೆ ಬಳಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಭಾರೀ ಪ್ರಮಾಣದ ಭೂ ಕುಸಿತದ ಪರಿಣಾಮ ಮಣ್ಣಿನಡಿಯಲ್ಲಿ ಹಲವು ವಾಹನಗಳು ಸಿಕ್ಕಿ ಹಾಕಿಕೊಂಡಿದೆ. ಮಣ್ಣು ಕುಸಿತದಿಂದ ಟಿಪ್ಪರ್ ಮತ್ತು ಟ್ಯಾಂಕರ್ ಪಲ್ಟಿಯಾದರೆ, ಎರಡು ಕಾರು, ಒಂದು ಟ್ಯಾಂಕರ್, ಒಂದು ಟಿಪ್ಪರ್ ಸೇರಿ ಕೆಲ ವಾಹನ ವಾಹನಗಳು ಜಖಂ ಆಗಿದೆ. ಅದೃಷ್ಟವಶಾತ್ ವಾಹನ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಬೆಂಗಳೂರು-ಮಂಗಳೂರು ಸಂಚಾರ ಬಂದ್ ಆಗಿದೆ. ಶಿರಾಡಿ ಘಾಟ್ ಬಳಸಿ ವಾಹನ ಓಡಾಟ ನಡೆಸದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮಲೈ ಮುಗಿಲನ್ ಮನವಿ ಮಾಡಿಕೊಂಡಿದ್ದಾರೆ. ಮುಂದಿನ ಆದೇಶವರೆಗೆ ಈ ರಸ್ತೆಯನ್ನು ಬಂದ್ ಮಾಡಿ ಆದೇಶ ನೀಡಲಾಗಿದೆ.
ಸಾರ್ವಜನಿಕರು ಈ ರಸ್ತೆಯನ್ನು ಓಡಾಟಕ್ಕೆ ಬಳಸದಂತೆ ಮನವಿ ಮಾಡಲಾಗಿದೆ. ಇನ್ನು ಭೂಕುಸಿತ ಸ್ಥಳದಲ್ಲಿ ಸಮರೋಪಾದಿಯಲ್ಲಿ ಕಾರ್ಯಾಚರಣೆ ಮುಂದುವರೆದಿದೆ. ಘಾಟ್ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹಾಸನವಾಗಿ ಮಂಗಳೂರಿಗೆ ಆಗಮಿಸುತ್ತಿರುವ ವಾಹನಗಳು ಹಾಗೂ ಮಂಗಳೂರಿನಿಂದ ಹಾಸನ ಮಾರ್ಗವಾಗಿ ಬೆಂಗಳೂರಿಗೆ ತೆರಳುವ ವಾಹನಗಳು ಸದ್ಯ ಶಿರಾಡಿ ಘಾಟ್ ರಸ್ತೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆ ರಸ್ತೆಯನ್ನ ಬಳಸದಂತೆ ಮನವಿ ಮಾಡಿದ್ದಾರೆ.
ಶಿರಾಡಿ ಘಾಟ್ ಬೆಂಗಳೂರು-ಮಂಗಳೂರು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ಇನ್ನೊಂದೆಡೆ ಚಿಕ್ಕಮಗಳೂರ-ದಕ್ಷಿಣ ಕನ್ನಡ ಸಂಪರ್ಕಿಸುವ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕುಸಿತಗಳು ಸಂಭವಿಸಿ, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಇನ್ನು ಸದ್ಯ ಸಂಪಾಜೆ- ಮಡಿಕೇರಿ ರಸ್ತೆಯಾಗಿ ಬೆಂಗಳೂರು-ಮಂಗಳೂರು ವಾಹನಗಳು ಓಡಾಟ ನಡೆಸಬಹುದಾಗಿದೆ. ಆದರೆ, ಪುತ್ತೂರು ಮಾಣಿಯಲ್ಲಿ ಭೂಕುಸಿತವಾಗಿದ್ದರಿಂದ ಇಂದು ಸಂಜೆಯವರೆಗೆ ಆ ರಸ್ತೆಯಲ್ಲೂ ಓಡಾಟ ಕಷ್ಟಕರವಾಗಿದೆ. ಮಾಣಿಯಲ್ಲಿ ಮಣ್ಣಿನ ತೆರವು ಕಾರ್ಯಾಚರಣೆ ಮುಂದುವರೆದಿದೆ. ಹೀಗಾಗಿ ಮಂಗಳೂರು-ಮೈಸೂರು ಸಂಚಾರವು ಸದ್ಯದ ಮಟ್ಟಿಗೆ ಸಂಚಾರ ಬಾಧಿತವಾಗಿದೆ. ಬೆಂಗಳೂರು-ಮಂಗಳೂರು ಗಡಿಗಳಲ್ಲಿ ಗುಡ್ಡ ಕುಸಿತದ ಪರಿಣಾಮ ಸಂಚಾರಕ್ಕೆ ಅಡ್ಡಿಯಾಗಿದೆ. ಈಗಾಗಲೇ ಬೆಂಗಳೂರು-ಮಂಗಳೂರು, ಬೆಂಗಳೂರು-ಕಣ್ಣೂರು, ಬೆಂಗಳೂರು-ಕಾರವಾರ ರೈಲು ಕೂಡಾ ರದ್ದುಗೊಳಿಸಲಾಗಿದೆ. ಅಷ್ಟೇ ಅಲ್ಲ, ಬೆಂಗಳೂರು-ಮಂಗಳೂರು ಕೆಲವೊಂದ ಕಂಪೆನಿಗಳ ಖಾಸಗಿ ಬಸ್‌ಗಳು ಕೂಡಾ ತಮ್ಮ ಓಡಾಟ ರದ್ದುಗೊಳಿಸಿದೆ.
