ಪಟ್ಲಡ್ಕದ ರಸ್ತೆ ಬದಿಯಲ್ಲಿಯೇ ಇದೆ ಅಪಾಯಕಾರಿ ಕೆರೆ..!!
ಪುತ್ತೂರು: ಪುತ್ತೂರಿನ ಪೆರಿಗೇರಿ- ಈಶ್ವರಮಂಗಲ ಸಂಪರ್ಕ ರಸ್ತೆಯ ಪುಳಿತ್ತಡಿ ಸಮೀಪದ ಪಟ್ಲಡ್ಕ ಎಂಬಲ್ಲಿ ರಸ್ತೆಗೆ ಹೊಂದಿಕೊಂಡಿರುವ ತೆರೆದ ಕೆರೆಯೊಂದು ಪ್ರಯಾಣಿಕರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಹೌದು ವಾಹನಗಳಲ್ಲಿ ಸಂಚರಿಸುವವರಿಗಂತೂ ಇದು ಯಮ ಸ್ವರೂಪಿಯಾಗಿದೆ. ಬಡಗನ್ನೂರು ಗ್ರಾ.ಪಂವ್ಯಾಪ್ತಿಯ ಪಡುವನ್ನೂರು ಗ್ರಾಮದಲ್ಲಿ ಈಶ್ವರಮಂಗಲ ಭಾಗದಿಂದ ಎತ್ತರದಿಂದ ಇಳಿಜಾರಿನ ರಸ್ತೆಯಿದ್ದು, ರಸ್ತೆಗೆ ಹೊಂದಿಕೊಂಡಿರುವ ಈ ಅಪಾಯಕಾರಿ ತೆರೆದ ಕೆರೆ ಕಾಣಿಸುವುದೇ ಇಲ್ಲ. ವಾಹನ ಸವಾರರು ಸ್ವಲ್ಪ ಆಯ ತಪ್ಪಿದರೂ ಕೆರೆಗೆ ಬೀಳುವ ಸಾಧ್ಯತೆ ಇದೆ.
ಪಟ್ಟೆ ಪೆರಿಗೇರಿ, ಅಂಬಟೆಮೂಲೆ ಮೂಲಕ ಈಶ್ವರಮಂಗಲ ಪೇಟೆಗೆ ಸಂಪರ್ಕಿಸುವ ರಸ್ತೆ ಇದಾಗಿದ್ದು, ದಿನಂಪ್ರತಿ ಶಾಲಾ ಕಾಲೇಜ್‌ಗಳ ವಿದ್ಯಾರ್ಥಿಗಳ ಸಹಿತ ನೂರಾರು ಮಂದಿ ಸಂಚರಿಸುತ್ತಾರೆ. ರಸ್ತೆಯ ಕೆಳ ಭಾಗದಲ್ಲಿ ನೀರು ಹರಿಯಲು ಮೋರಿ ನಿರ್ಮಿಸಲಾಗಿದೆ. ಈ ಮೋರಿಯೂ ಶಿಥಿಲಾವಸ್ಥೆಯಲ್ಲಿದೆ. ಪಕ್ಕದಲ್ಲಿರುವ ತೆರೆದ ಕೆರೆಯಂತೂ ಇನ್ನೂ ಅಪಾಯಕಾರಿಯಾಗಿದೆ.
ಇನ್ನು ರಸ್ತೆ ಮತ್ತು ಕೆರೆಯಯ ಮಧ್ಯೆ ಯಾವುದೇ ತಡೆ ನಿರ್ಮಾಣ ಮಾಡಿಲ್ಲ. ಪೊದೆಗಳು ಬೆಳೆದಿವೆ. ಈ ರಸ್ತೆಯಲ್ಲಿ ರಾತ್ರಿಯ ಸಂಚಾರವಂತೂ ಅಪಾಯಕಾರಿಯಾಗಿದೆ. ಈ ಹಿಂದೆ ಇಲ್ಲಿ ವಾಹನಗಳು ನಿಯಂತ್ರಣ ತಪ್ಪಿ ಉರುಳಿದ ಘಟನೆಗಳು ನಡೆದಿವೆ ಎನ್ನುತ್ತಾರೆ ಸ್ಥಳೀಯರು.
