`ಕಿವಿಹಣ್ಣು-ಪಪ್ಪಾಯಎಲೆ' ಡೆಂಗ್ಯೂಗೆ ಮದ್ದಲ್ಲ
ಪುತ್ತೂರು: ಡೆಂಗ್ಯೂ ಕಾಯಿಲೆ ಪ್ರಸ್ತುತ ತೀವ್ರವಾಗಿ ಹರಡುತ್ತಿದ್ದು, ಇದಕ್ಕೆ ಚಿಕಿತ್ಸೆಯೇ ಇಲ್ಲ. ವ್ಯಾಕ್ಸೀನ್ ಕೂಡಾ ಇಲ್ಲ. ನಮ್ಮ ಪರಿಸರದ ರಕ್ಷಣೆ ಮೂಲಕ ಸೊಳ್ಳೆ ಉತಾದನೆಯನ್ನು ತಡೆಯುವುದೇ ಡೆಂಗ್ಯೂನಿಂದ ರಕ್ಷಣೆಗೆ ಏಕೈಕ ದಾರಿಯಾಗಿದೆ. ಕಿವಿ ಹಣ್ಣಿನ ರಸವಾಗಲೀ ಪಪ್ಪಾಯಿ ಎಲೆಯ ರಸವಾಗಲೀ ಡೆಂಗ್ಯೂಗೆ ಮದ್ದಲ್ಲ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ನವೀನ್‍ಚಂದ್ರ ಕುಲಾಲ್ ಹೇಳಿದರು.
ಪುತ್ತೂರು ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ನಗರಸಭೆಯ ಸಹಯೋಗದಲ್ಲಿ ಮಲೇರಿಯಾ ಹಾಗೂ ಡೆಂಗ್ಯೂ ರೋಗಗಳ ನಿಯಂತ್ರಣ ಕುರಿತು ಬುಧವಾರ ತಾ.ಪಂ. ಸಭಾಂಗಣದಲ್ಲಿ ಆಯೋಜಿಸಲಾದ ಮುಂಜಾಗ್ರತಾ ಸಭೆ ಹಾಗೂ ಕಾರ್ಯಾಗಾರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಡೆಂಗ್ಯೂ ಜ್ವರದಿಂದ ರಕ್ಷಣೆಗೆ ನಮ್ಮ ಪರಿಸರವನ್ನು ಸ್ವಚ್ಛವಾಗಿಡುವುದು ಬಹಳ ಮುಖ್ಯವಾಗಿದೆ. ಇದೊಂದು ಅಪಾಯಕಾರಿ ರೋಗ. ನೀರಿನಂಶವಿರುವ ಆಹಾರವನ್ನು ಹೆಚ್ಚು ಬಳಕೆ ಮಾಡುವುದು. ಡೆಂಗ್ಯೂ ಬರದೇ ಇರಬೇಕಾದರೆ ಸೊಳ್ಳೆ ಕಚ್ಚಬಾರದು. ಕಚ್ಚದಿರಬೇಕಾದರೆ ಸೊಳ್ಳೆ ಇರಬಾರದು ಎಂದು ಅವರು ಹೆಳಿದರು.
ಮಾಸ್ಟರ್ ಪ್ಲಾನರಿ ನಟೋರಿಯಸ್ ಪ್ಲೇಸ್:
ಸೊಳ್ಳೆ ಉತ್ಪಾದನಾ ಕೇಂದ್ರಗಳನ್ನು ತೆರವು ಮಾಡುವುದು ಅತೀ ಅಗತ್ಯ. ಪುತ್ತೂರಿನಲ್ಲಿ ಮಾಸ್ಟರ್ ಪ್ಲಾನರಿ ಸೊಳ್ಳೆಯ ಉತ್ಪಾದನೆಯ ಕೇಂದ್ರವಾಗಿದೆ. ಇಂತಹ ಪ್ರದೇಶಗಳ ಬಗ್ಗೆ ಆರೋಗ್ಯ ಇಲಾಖೆಯೂ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕಾಗಿದೆ. ಕಟ್ಟಡ ನಿರ್ಮಾಣವಾಗುತ್ತಿರುವ ಸ್ಥಳಗಳ ಬಗ್ಗೆಯೂ ನಿಗಾ ವಹಿಸಬೇಕು ಎಂದು ಅವರು ತಿಳಿಸಿದರು. ಗ್ರಾಮೀಣ ಭಾಗದಲ್ಲಿ ಅಡಿಕೆ ತೋಟ ಹಾಗೂ ರಬ್ಬರ್ ತೋಟಗಳಿಗೆ ಹೋಗುವವರು ತಮ್ಮ ಮೈಕೈಗಳಿಗೆ ಕಹಿಬೇವಿನ ಎಣ್ಣೆ ಹಚ್ಚಿಕೊಂಡು ಹೋದರೆ ಸೊಳ್ಳೆಯಿಂದ ಕಚ್ಚಿಸಿಕೊಳ್ಳುವುದನ್ನು ತಪ್ಪಿಸಬಹುದು. ಸೊಳ್ಳೆಯಲ್ಲಿ 3300 ಜಾತಿಯ ಸೊಳ್ಳೆಗಳಿವೆ. ಈ ಎಲ್ಲಾ ಸೊಳ್ಳೆಗಳಿಂದ ರೋಗ ಹರಡುವುದಿಲ್ಲ, ಈಡೀಸ್ ಜಾತಿಯ ಹೆಣ್ಣುಸೊಳ್ಳೆಗಳಿಂದ ಮಾತ್ರ ಡೆಂಗ್ಯೂ ಹರಡುತ್ತದೆ ಎಂದು ಅವರು ಮಾಹಿತಿ ನೀಡಿದರು.
ಸಹಾಯಕ ಆಯುಕ್ತರ ಸೂಚನೆ:
ಎಲ್ಲಾ ಗ್ರಾ.ಪಂ.ಗಳ ಪಿಡಿಒಗಳು, ನಗರ ಸ್ಥಳೀಯಾಡಳಿತದ ಅಧಿಕಾರಿಗಳಿಗೆ ಸರಕಾರ ಜವಾಬ್ದಾರಿ ನೀಡಿ ಅಧಿಕಾರ ನೀಡಿದೆ. ಪ್ರತಿ ಪಿಡಿಒಗಳು ದಿನಂಪ್ರತಿ ತಮ್ಮ ವ್ಯಾಪ್ತಿಯ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡಿ ಸ್ವಚ್ಛತೆ ಹಾಗೂ ಡ್ರೈ ಮಾಡುವ ಕಾರ್ಯಗಳಿಗೆ ಸಂಬಂಧಿಸಿದ ಕನಿಷ್ಟ 5 ಫೋಟೋಗಳನ್ನು ತೆಗೆದು ಜಿಪಿಎಸ್ ಮಾಡಬೇಕು. ಈ ತಿಂಗಳ ಕೊನೆಯವರೆಗೆ ಈ ಕಾರ್ಯ ಕಡ್ಡಾಯವಾಗಿ ಮಾಡಬೇಕು. ನಿಯಮಗಳು ಉಲ್ಲಂಘನೆಯಾಗಿರುವುದನ್ನು ಕಂಡರೆ ದಂಡ ಹಾಕುವ ಅಧಿಕಾರ ಬಳಸಿಕೊಳ್ಳಬೇಕು. ಜನರಲ್ಲಿ ಅರಿವು ಮೂಡಿಸುವ, ಅಂಗನವಾಡಿ, ಶಾಲೆಗಳು, ಬಸ್ ನಿಲ್ದಾಣ, ಚರಂಡಿ ಬ್ಲಾಕ್ ವಿಚಾರಗಳಲ್ಲಿ ನಿಗಾ ವಹಿಸಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಆಯುಕ್ತರಾದ ಜುಬಿನ್ ಮೊಹಾಪಾತ್ರ ಸೂಚನೆ ನೀಡಿದರು.
ವೇದಿಕೆಯಲ್ಲಿ ತಹಶೀಲ್ದಾರ್ ಪುರಂದರ್, ಬಿಇಒ ಲೋಕೇಶ್ ಎಸ್.ಆರ್. ಉಪಸ್ಥಿತರಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಸ್ವಾಗತಿಸಿ, ನಗರಸಭಾ ಪೌರಾಯುಕ್ತ ಮಧು ಎಸ್. ಮನೋಹರ್ ವಂದಿಸಿದರು. ಪಿಡಿಒಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬಂದಿ ಸಭೆಯಲ್ಲಿ ಪಾಲ್ಗೊಂಡರು.