ಅಧಃಪತನದತ್ತ ಪುತ್ತೂರು ಕಾಂಗ್ರೆಸ್!!
ಪುತ್ತೂರು: ಪುತ್ತೂರು ನಗರ ಯೋಜನಾ ಪ್ರಾಧಿಕಾರದ (ಪೂಡ) ಅಧ್ಯಕ್ಷರಾಗಿ ಕಳೆದ ಮಾರ್ಚ್ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡರಾದ ವಕೀಲ ಭಾಸ್ಕರ ಕೋಡಿಂಬಾಳ ಅವರು ಶನಿವಾರ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಪುತ್ತೂರಿನಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಭಾಸ್ಕರ ಕೋಡಿಂಬಾಳ ಅವರು, ಕಳೆದ ಅತ್ಯಲ್ಪ ಅವಧಿಯಲ್ಲಿ ಪೂಡಾಕ್ಕೆ ಸಂಬಂಧಿಸಿದ ಕೆಲವೊಂದು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಆದರೆ ಶಾಸಕ ಅಶೋಕ್‍ಕುಮಾರ್ ರೈ ಅವರು ಜುಲೈ 11ರಂದು ಬೆಂಗಳೂರಿನಿಂದ ಕರೆ ಮಾಡಿ, ಪೂಡಾ ಈಗ ಕೆಲಸ ಮಾಡುತ್ತಿಲ್ಲ. ಸತ್ತು ಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಶಾಸಕರಿಗೆ ಅಸಮಾಧಾನ ಇರುವುದರಿಂದ ಈ ಹುದ್ದೆಯಲ್ಲಿ ನಾನು ಮುಂದುವರಿಯಲು ಇಚ್ಚಿಸುವುದಿಲ್ಲ. ಸ್ವಂತಿಕೆಯ ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಅವರು ತಿಳಿಸಿದರು.
ಕಡಬ ವಲಯ ಕಾಂಗ್ರೆಸ್ ಅಧ್ಯಕ್ಷನಾಗಿ ಕೆಲಸ ಮಾಡಿದ್ದ ನನಗೆ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗುವ ಅವಕಾಶ ಇತ್ತಾದರೂ ಅದನ್ನು ಬಿಟ್ಟುಕೊಟ್ಟಿದ್ದೆ. ಪುತ್ತೂರಿಗೆ ಬಂದ ಬಳಿಕ ಪುತ್ತೂರು ಬ್ಲಾಕ್‍ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಶಕುಂತಳಾ ಶೆಟ್ಟಿ ಅವರು ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವೇಳೆ ಪ್ರಚಾರ ಸಮಿತಿಯ ಅಧ್ಯಕ್ಷನಾಗಿ, ಕಳೆದ ವಿಧಾನಸಭಾ ಚುನಾವಣೆಯ ವೇಳೆ ಪ್ರಚಾರ ಸಮಿತಿಯ ಅಧ್ಯಕ್ಷನಾಗಿ ಹಾಗೂ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಅಶೋಕ್‍ಕುಮಾರ್ ರೈ ಅವರ ಚುನಾವಣಾ ಏಟೆಂಟ್ ಆಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಯಾರ ಶಿಫಾರಸ್ಸು ಕೂಡ ಇಲ್ಲದೆ ಶಾಸಕರೇ ನನ್ನನ್ನು ಪೂಡಾದ ಅಧ್ಯಕ್ಷರಾಗಿ ಮಾಡಿದ್ದಾರೆ. ನಾನು ಹುದ್ದೆ ಅಪೇಕ್ಷೆ ಮಾಡಿದವನೇ ಅಲ್ಲ ಎಂದರು.
ಕಳೆದ ಮಾ.16ರಂದು ನಾನು ಪೂಡಾ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡಿದ್ದೆ. ಮರುದಿನವೇ ಜಾರಿಗೊಂಡಿದ್ದ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜುಲೈ 6ರ ತನಕ ಇತ್ತು. ಜೂನ್.19ರಂದು ಪೂಡಾದಲ್ಲಿ ಪ್ರಥಮ ಸಭೆ ನಡೆಸಿ ಸಮಸ್ಯೆಗಳನ್ನು ಶಾಸಕರ ನೇತೃತ್ವದಲ್ಲಿ ಪರಿಹರಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದೆವು. ಸಮಸ್ಯೆಗಳು ತುಂಬಾ ಇದೆ. ಕಟ್ ಕನ್ವವರ್ಷನ್ ವಿಚಾರದಲ್ಲಿ ಸಮಸ್ಯೆಯಿದ್ದು, ಇದಕ್ಕೆ ಸಂಬಂಧಿಸಿ ಮಂಗಳೂರು ಮತ್ತು ಉಡುಪಿಯಲ್ಲಿ ಸಣ್ಣ ವಿನಾಯಿತಿ ಇದೆ. ಪುತ್ತೂರಿಗೂ ಈ ತಿದ್ದುಪಡಿ ಮಾಡಬೇಕೆಂದು ಬರೆದುಕೊಳ್ಳುವ ಕೆಲಸವನ್ನೂ ಮಾಡಿದ್ದೇವೆ. ಸಿಕ್ಕಿದ ಅತ್ಯಲ್ಪ ಅವಧಿಯಲ್ಲಿ ಪ್ರ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದರು. ಪ್ರ್ರಾಮಾಣಿಕವಾಗಿ ಕೆಲಸ ಮಾಡಿದ್ದರೂ ಶಾಸಕರು ಅಸಮಾಧಾನ ವ್ಯಕ್ತಪಡಿಸಿರುವುದರಿಂದ ಮನಸ್ಸಿಗೆ ನೋವಾಗಿದೆ. ಹಾಗಾಗಿ ನಾನು ನನ್ನ ಆತ್ಮಸಾಕ್ಷಿಗೆ ಸರಿಯಾಗಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೇನೆ. ಮುಂದೆ ಪಕ್ಷದಲ್ಲಿ ಮುಂದುವರಿಯುತ್ತೇನೆ ಎಂದು ಅವರು ತಿಳಿಸಿದರು.
ಪುತ್ತೂರಲ್ಲಿ ನಿಷ್ಠಾವಂತರ ರಾಜೀನಾಮೆ ಪರ್ವ..!
ಪುಡಾ ಅಧ್ಯಕ್ಷರಾಗಿ ಕೇವಲ 4 ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡ ನ್ಯಾಯವಾದಿ ಭಾಸ್ಕರ ಕೋಡಿಂಬಾಳ ಅವರ ಧಿಡೀರ್ ರಾಜೀನಾಮೆ ಪುತ್ತೂರಿನ ಕಾಂಗ್ರೇಸ್ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಭಾಸ್ಕರ ಕೋಡಿಂಬಾಳ ಅವರ ಪದಗ್ರಹಣದಂದೇ ನೀತಿ ಸಂಹಿತೆ ಜಾರಿಗೊಂಡಿತ್ತು. ಹಾಗಾಗಿ ಅವರ ಅಧಿಕಾರಕ್ಕೆ ಸಿಕ್ಕಿದ್ದು ಕೇವಲ 22 ದಿನಗಳು. ಆದರೆ ಪೂಡಾ ಕೆಲಸ ಮಾಡುತ್ತಿಲ್ಲ. ಸತ್ತು ಹೋಗಿದೆ ಎಂದು ಶಾಸಕ ಅಶೋಕ್ ರೈ ಅವರು ಆಡಿದ ಮಾತು ಭಾಸ್ಕರ ಕೋಡಿಂಬಾಳ ಅವರಿಗೆ ಮರ್ಮಾಘಾತ ಉಂಟು ಮಾಡಿದೆ. ಅಸಮಾಧಾನ ಇರುವ ಕಡೆಯಲ್ಲಿ ನಾನು ಇರುವುದಿಲ್ಲ ಎಂಬ ಕಾರಣಕ್ಕಾಗಿ ಅವರು ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೆಲ ವಾರಗಳ ಹಿಂದೆ ಪುತ್ತೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಹಾಗೂ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ ಕೂಡಾ ಪತ್ರಿಕಾಗೋಷ್ಟಿ ನಡೆಸಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸಿದರು. ಅವಧಿ ಮುಗಿದ ಹಿನ್ನಲೆಯಲ್ಲಿ ತಮ್ಮನ್ನು ಹುದ್ದೆಯಿಂದ ತೆರವುಗೊಳಿಸಿ ಎಂದು ಕೇಳಿರುವುದಾಗಿ ಅವರು ಮೇಲ್ನೋಟದ ಉತ್ತರ ನೀಡಿದ್ದರು.
ಇದೀಗ ಪುತ್ತೂರು ಕಾಂಗ್ರೇಸ್ಸಿನ ಅತ್ಯುತ್ತಮ ಕಾರ್ಯಕರ್ತರಾದ ಮೂವರು ರಾಜೀನಾಮೆ ನೀಡಿದ್ದಾರೆ. ಸಂಘಟನಾ ಚತುರ ವಿಶ್ವನಾಥ ರೈ, ನಿಷ್ಠಾವಂತ ಸಜ್ಜನ ಗುಣ ಹೊಂದಿರುವ ಡಾ.ರಾಜಾರಾಮ್ ಮತ್ತು ಭಾಸ್ಕರ ಕೋಡಿಂಬಾಳ ಅವರ ಸೇವೆಯನ್ನು ಕಾಂಗ್ರೇಸ್ ಕಳೆದುಕೊಳ್ಳಲು ಪುತ್ತೂರು ಕಾಂಗ್ರೇಸ್ ನಲ್ಲಿರುವ ಒಳ ಬೇಗುದಿ ಕಾರಣ ಎನ್ನುವುದು ಸ್ಪಷ್ಟ. ಇದರೊಂದಿಗೆ ಈ ಮೂವರು ಪ್ರತಿನಿಧಿಸುವ ಮೂರು ಸಮುದಾಯಗಳೂ ಜಿಲ್ಲೆಯಲ್ಲಿಯೇ ಬಲಿಷ್ಠ ಸಮುದಾಯಗಳಾಗಿವೆ. ಇದು ಮುಂದಿನ ರಾಜಕೀಯ ಬೆಳವಣಿಗೆಯಲ್ಲಿ ಮಹತ್ತರವಾದ ಪಾತ್ರ ವಹಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹಾಗಾಗಿ ಪುತ್ತೂರು ಕಾಂಗ್ರೇಸ್ ನಲ್ಲಿ ಬಿರುಕು ಉಂಟಾಗದಂತೆ ಕಾಯಬೇಕಾದ ಸವಾಲು ಪುತ್ತೂರು ಶಾಸಕ ಅಶೋಕ್ ರೈ ಅವರ ಮುಂದಿದೆ.