ಆಪತ್ಬಾಂಧವನ ಫ್ಯಾಮಿಲಿ ಮ್ಯಾಟರ್ ಬೀದಿಗೆ!
ಉಡುಪಿ: ತನ್ನ ಸ್ವಂತ ಮಗಳ ವೀಡಿಯೋವೊಂದನ್ನ ಎಡಿಟ್ ಮಾಡಿ ಹರಿಬಿಟ್ಟ ಪ್ರಕರಣ ಸಂಬಂಧ ತಂದೆ ಹಾಗೂ ಸಮಾಜ ಸೇವಕ ಆಸಿಫ್ ಆಪತ್ಬಾಂಧನ ಮೇಲೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧ ವೀಡಿಯೋ ವೈರಲ್ ಮಾಡಿದ ಬೆನ್ನಲ್ಲೇ ಆಸಿಫ್ ಪುತ್ರಿ, ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.
ಹಳೆಯಂಗಡಿಯಲ್ಲಿ ಮೈಮುನಾ ಫೌಂಡೇಶನ್ ಹೆಸರಿನಲ್ಲಿ ಆಶ್ರಮ ನಡೆಸುತ್ತಿದ್ದ ಆಸಿಫ್ ಅಲ್ಲಿ ವೃದ್ಧರಿಗೆ, ವಿಶೇಷ ಚೇತನರಿಗೆ ಆಶ್ರಯ ನೀಡಿದ್ದರು. ಅಷ್ಟೇ ಅಲ್ಲದೇ, ಆಂಬುಲೆನ್ಸ್ ಚಾಲಕನಾಗಿ ದುಡಿಯುತ್ತಿದ್ದು ಆಸಿಫ್ ಆಪತ್ಬಾಂಧವ ಹೆಸರಿನಲ್ಲಿ ಕರಾವಳಿಯಲ್ಲಿ ಚಿರಪರಿಚಿತರು.
ತನ್ನ ಮಗಳ ಪ್ರೇಮ ಪ್ರಕರಣ ತಿಳಿದ ಆಸಿಫ್ ಆಕೆ ಮತ್ತು ಆಕೆಯ ಸ್ನೇಹಿತ ತೌಸೀಫ್ ಎಂಬಾತನ ಮೊಬೈಲ್‌ನಲ್ಲಿದ್ದ ಫೋಟೋಗಳನ್ನು ಬೆದರಿಕೆಯೊಡ್ಡಿ ಪಡೆದು ಅನಂತರ ತಮ್ಮ ಫ್ಯಾಮಿಲಿ ಗ್ರೂಪ್‌ನಲ್ಲಿ ಹಂಚಿದ್ದಾಗಿ ತಿಳಿದು ಬಂದಿದೆ. ಇದರಿಂದ ಮನನೊಂದು ಆಸಿಫ್ ಪುತ್ರಿಗೆ ಪಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಗೊತ್ತಾಗಿದೆ. ಅದಲ್ಲದೇ, ಮಗಳ ಪ್ರೇಮ ವಿಚಾರವಾಗಿ ತನ್ನ ಮೇಲೆ ಹಾಗೂ ಮಗಳ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾಗಿ ಆಸಿಫ್ ವಿರುದ್ಧ ಸ್ವತಃ ಆತನ ಪತ್ನಿ ಶಬನಮ್ ದೂರು ನೀಡಿದ್ದಾರೆ. ಘಟನೆ ಸಂಬಂಧಿಸಿದಂತೆ ಹಲ್ಲೆಯ ಸಿಸಿಟಿವಿ ವೀಡಿಯೋ ಲಭ್ಯವಾಗಿದೆ.
ಡ್ರಗ್ಸ್ ದಾಸ ಆಪತ್ಬಾಂಧವ!
ಮಾಧ್ಯಮಗಳ ಜೊತೆ ಮಾತನಾಡಿದ ಆಸಿಫ್ ಪತ್ನಿ ಶಬನಮ್ ತನ್ನ ಪತಿ ಡ್ರಗ್ಸ್ ವ್ಯಸನಿಯಾಗಿದ್ದು, ಅಮಲು ಪದಾರ್ಥದ ಸೇವನೆಯಿಂದ ಮನೆಯಲ್ಲಿ ನಿರಂತರ ಕಿರುಕುಳ ನೀಡುತ್ತಾ ಬಂದಿದ್ದಾರೆ. ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಾ ಬಂದಿದ್ದಾಗಿ ದೂರಿದ್ದಾರೆ. ಇನ್ನು ಸಮಾಜ ಸೇವೆ ಹೆಸರಿನಲ್ಲಿ ಆಸಿಫ್ ಪೊಲೀಸರ ಸಖ್ಯ ಬೆಳೆಸಿಕೊಂಡಿದ್ದು ಇದರಿಂದಾಗಿ ಪೊಲೀಸರು ಆತನ ಮೇಲೆ ಪ್ರಕರಣ ದಾಖಲಿಸಲು ಮೀನಮೇಷ ಎಣಿಸುತ್ತಿರುವುದಾಗಿ ಶಬನಮ್ ದೂರಿದ್ದಾರೆ.
ಹುಡುಗನ ಕಿಡ್ನ್ಯಾಪ್!
ಇನ್ನು ತನ್ನ ಮಗಳನ್ನು ಪ್ರೀತಿಸುತ್ತಿದ್ದ, ಆಸಿಫ್ ಸಂಬಂಧಿಯೂ ಆಗಿರುವ ತೌಸೀಫ್ ಎಂಬಾತನನ್ನು ಆಸಿಫ್ ತನ್ನ ಸಹಚರರ ಜೊತೆಗೆ ಸೇರಿ ಕಿಡ್ನ್ಯಾಪ್ ಮಾಡಿ, ತನ್ನ ಪತ್ನಿ ಹಾಗೂ ಮಗಳಿಗೆ ಕರೆ ಮಾಡಿಸಿ ದೂರು ವಾಪಸ್ ಪಡೆಯುವಂತೆ ಒತ್ತಡ ಹೇರಿದ್ದಾಗಿ ತೀರ್ಥಹಳ್ಳಿ ಠಾಣೆಯಲ್ಲಿ ಸಂತ್ರಸ್ತ ಯುವಕ ದೂರು ನೀಡಿದ್ದಾನೆ. ಈ ವೀಡಿಯೋ ಕೂಡಾ ಈಗ ಜಾಲತಾಣದಲ್ಲಿ ವೈರಲ್ ಆಗಿದೆ.