-->
ಬಳಸಿ ಎಸೆದ ಗುಜರಿ ಕಬ್ಬಿಣದಿಂದಲೇ ಸೇತುವೆ ನಿರ್ಮಾಣ!!

ಬಳಸಿ ಎಸೆದ ಗುಜರಿ ಕಬ್ಬಿಣದಿಂದಲೇ ಸೇತುವೆ ನಿರ್ಮಾಣ!!


ಉಡುಪಿ: ಸೇತುವೆ ಎಂದ ಕ್ಷಣ ನೆನಪಿಗೆ ಬರುವುದು ಮರದ ಸೇತುವೆ, ಕಬ್ಬಿಣದ ಸೇತುವೆ, ಕಾಂಕ್ರೀಟ್ ಸೇತುವೆಗಳು. ಆದರೆ ಸರಕಾರದ ಅನುದಾನ ಹರಿದು ಬಾರದ ಹಿನ್ನೆಲೆಯಲ್ಲಿ ಇಲ್ಲಿ ಹೊಸ ಕಾನ್ಸೆಪ್ಟ್ ನಲ್ಲಿ ಸೇತುವೆ ಸಿದ್ಧವಾಗಿದೆ. ಬಳಸಿ ಎಸೆದ ಕಬ್ಬಿಣದ ವಸ್ತುಗಳು, ಹಳೆಯ ಬೋರ್ವೆಲ್ ಪೈಪ್, ಲಾರಿ ಚಾಸ್ಸಿ ಇದೇ ಮೊದಲಾದ ವಸ್ತುಗಳನ್ನ ಬಳಸಿ ಅದ್ಭುತ ಸೇತುವೆಯನ್ನು ನಿರ್ಮಿಸಲಾಗಿದೆ.

ಹೌದು ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಲ್ಲಿ ರಸ್ತೆಗಳಿಗಿಂತ ಹೆಚ್ಚಾಗಿ ಕಾಲು ಸಂಖ್ಯೆಗಳ ಅವಶ್ಯಕತೆ ಇದೆ ಎಂದರೆ ನೀವು ನಂಬಲೇಬೇಕು. ಪ್ರತಿ 10 ಮನೆಗೆ ಒಂದು ಕಾಲು ಸಂಕ ಎನ್ನುವಂತೆ ಕ್ಷೇತ್ರದಾದ್ಯಂತ ಒಟ್ಟು 400 ಕ್ಕೂ ಅಧಿಕ ಕಾಲು ಸಂಕಲ ಅಗತ್ಯತೆ ಇದೆ. ಸದ್ಯ ರಾಜ್ಯ ಸರ್ಕಾರ ಕಿರು ಸೇತುವೆಗಳ ನಿರ್ಮಾಣಕ್ಕೆ ಅನುದಾನಗಳನ್ನ ಬಿಡುಗಡೆ ಮಾಡುತ್ತಿಲ್ಲ. ಹಿಂದೆ ನರೇಗಾ ಯೋಜನೆಯ ಮೂಲಕ ಕಿರು ಸೇತುವೆ ಗಳನ್ನ ಮಾಡುವ ಅವಕಾಶ ಇತ್ತು, ಸದ್ಯ ಅದಕ್ಕೂ ಬ್ರೇಕ್ ಬಿದ್ದಿದೆ.  ಬೈಂದೂರು ಕ್ಷೇತ್ರದ ಯಡಮೊಗೆ ಎನ್ನುವ ಪ್ರದೇಶದಲ್ಲಿ ಸುಮಾರು 50 ವರ್ಷಗಳಿಂದ 30 ಮನೆಯವರು ಮಳೆಗಾಲದಲ್ಲಿ ಜಲದಿಗ್ಬಂದನಕ್ಕೆ ಒಳಗಾಗುತ್ತಿದ್ದಾರೆ. ಮಳೆಗಾಲದಲ್ಲಿ ದೈನಂದಿನ ಬಳಕೆಗೆ ಸೂಕ್ತವಾದ ಸೇತುವೆ ಇಲ್ಲದೆ ದೈನಂದಿನ ಕೆಲಸಗಳಿಗೆ ತೆರಳುವವರು ಮತ್ತು ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ದೊಡ್ಡ ತಲೆ ನೋವಾಗಿತ್ತು. ಸದ್ಯ ಇಲ್ಲಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರ ಪರಿಕಲ್ಪನೆಯಲ್ಲಿ ಸೇತುವೆಯೊಂದನ್ನು ನಿರ್ಮಿಸಲಾಗಿದೆ. ಇದು ಸಾಮಾನ್ಯ ಸೇತುವೆಯಲ್ಲ ಲಾರಿ ಚಾಸ್ಸಿ ಮತ್ತು ಇನ್ನಿತರ ಉಪಯೋಗಿಸಿ ಬಳಸಿ ಎಸೆದ ಗುಜರಿ ಕಬ್ಬಿಣದ ವಸ್ತುಗಳನ್ನು ಬಳಸಿ ಸೇತುವೆಯನ್ನು ನಿರ್ಮಿಸಲಾಗಿದೆ.


ಯಡಮೊ ಪ್ರದೇಶಕ್ಕೆ ಸುಮಾರು ಐವತ್ತು ವರ್ಷಗಳಿಂದ ಮಳೆಗಾಲ ಬಂತೆಂದರೆ ಸಾಕು, ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ. ದೈನಂದಿನ ಕೆಲಸ ಕಾರ್ಯಗಳಿಗೆ ತೆರಳುವಾಗ ತೊರೆಯನ್ನ ದಾಟುವುದೆ ದೊಡ್ಡ ಹರ ಸಾಹಸ ಎನ್ನುವಂತಿತ್ತು. ಸದ್ಯ ಐವತ್ತು ವರ್ಷಗಳ ಬಳಿಕ ಗ್ರಾಮಸ್ಥರು ಕಂಡ ಕನಸು ನನಸಾಗಿದೆ, ಭೋರ್ಗರಿಯತ್ತ ಹರಿಯುವ ತೊರೆಯನ ದಾಟಲು ಸೇತುವೆ ನಿರ್ಮಾಣವಾಗಿರೋದು ಸ್ಥಳೀಯರ ಸಂತಸಕ್ಕೆ ಕಾರಣವಾಗಿದೆ. ಸಮೃದ್ಧ ಬೈಂದೂರು ಮತ್ತು ಬೆಂಗಳೂರಿನ ಅರುಣಾಚಲ ಟ್ರಸ್ಟ್ ಸಹಭಾಗಿತ್ವದಲ್ಲಿ ಇಲ್ಲಿ ರಾಜ್ಯದಲ್ಲಿ ಪ್ರಪ್ರಥಮ ಎನ್ನುವಂತೆ ಮೂರು ಲಾರಿ ಚಾಸ್ಸಿ ಬಳಸಿ ಸೇತುವೆ ನಿರ್ಮಿಸಲಾಗಿದೆ. ಅನುದಾನ ಕೊರತೆಯಿಂದ ಕ್ರೌಡ್ ಫಂಡಿಂಗ್ ಮೂಲಕ ಸೇತುವೆ ನಿರ್ಮಾಣ ಕಾರ್ಯಕ್ಕೆ ಶಾಸಕರು ಕೈ ಹಾಕಿದ್ದು ಪ್ರಾಯೋಗಿಕವಾಗಿ ಯಡಮೊಗೆ ಪ್ರದೇಶದಲ್ಲಿ ಸುಮಾರು 2 ಲಕ್ಷ ವೆಚ್ಚದಲ್ಲಿ ಈ ಸೇತುವೆ ನಿರ್ಮಿಸಲಾಗಿದೆ. 72 ಫೀಟ್ ಉದ್ದ ಆರು ಫೀಟ್ ಅಗಲ ಇರುವ ಈ ಕಬ್ಬಿಣದ ಸೇತುವೆ ಸದ್ಯ ಇಲ್ಲಿನ ಗ್ರಾಮಸ್ಥರ ಮುಖ್ಯ ಸಂಚಾರಿ ಸಾಧನವಾಗಿದೆ. 

ಒಟ್ಟಾರೆಯಾಗಿ ತಮ್ಮ ವಿಭಿನ್ನ ಶೈಲಿಯಿಂದನೆ ರಾಜ್ಯದಲ್ಲಿಯೇ ಗುರುತಿಸಿಕೊಂಡಿರುವ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆಯವರು ಕ್ಷೇತ್ರದಲ್ಲೂ ಕೂಡ ಹೊಸ ಹೊಸ ಯೋಜನೆಗಳನ್ನ ಜಾರಿಗೆ ತರುತ್ತಿದ್ದಾರೆ. ಸರಕಾರ ನೆರವು ನೀಡದಿದ್ದರೂ, ಇನ್ನೇನಾದರೂ ಮಾಡಬೇಕು ಎನ್ನುವ ಇವರ ಆಲೋಚನೆ ರಾಜ್ಯದ ಉಳಿದ ಶಾಸಕರಿಗೂ ಮಾದರಿ ಎಂದರೆ ತಪ್ಪಾಗಲಾರದು.

Ads on article

Advertise in articles 1

advertising articles 2

Advertise under the article