ಕ್ರೈಸ್ತ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರ..!!
ಕಡಬ: ಕಳೆದ ಹಲವು ವರ್ಷಗಳಿಂದ ಹಿಂದೂ ಧರ್ಮವನ್ನು ತ್ಯಜಿಸಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಕುಟುಂಬಗಳು ಇದೀಗ ಮತ್ತೆ ಹಿಂದೂ ಧರ್ಮಕ್ಕೆ ಮರಳಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪಂಜ ಮತ್ತು ಪಲ್ಲೋಡಿಯಲ್ಲಿನ 6 ಕುಟುಂಬದ ಒಟ್ಟು 21 ಸದಸ್ಯರು ಹಿಂದೂ ಧರ್ಮದ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಹಿಂದೂ ಧರ್ಮಕ್ಕೆ ಸೇರ್ಪಡೆಗೊಂಡಿದ್ದಾರೆ. ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ನೇತೃತ್ವದಲ್ಲಿ ಈ ಘರ್ ವಾಪಸಿ ಕಾರ್ಯಕ್ರಮ ನಡೆದಿದ್ದು, ಮುಂದಿನ ಎರಡು ವರ್ಷಗಳಲ್ಲಿ ಈ ಎಲ್ಲಾ ಕುಟುಂಬಗಳಿಗೆ ಪಕ್ಕಾ ಮನೆಯನ್ನು ನೀಡುವ ಯೋಜನೆಯನ್ನೂ ಸಂಘಟನೆಗಳು ಹಾಕಿಕೊಂಡಿದೆ.
ಹೌದು ಕಳೆದ 60 ವರ್ಷಗಳ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಪರಿಶಿಷ್ಟ ಪಂಗಡಗಳಿಗೆ ಸೇರಿದ 6 ಕುಟುಂಬಗಳು ಹಿಂದೂ ಧರ್ಮಕ್ಕೆ ಮರಳಿದೆ. ಕರಾವಳಿಯ ಮೂಲನಿವಾಸಿಗಳಾದ ಕೊರಗ ಜನಾಂಗಕ್ಕೆ ಸೇರಿದ ಈ ಕುಟುಂಬದ ಹಿರಿಯರು ಯಾವುದೋ ಕಾರಣಕ್ಕೆ ಅಂದು ಹಿಂದೂ ಧರ್ಮವನ್ನು ತ್ಯಜಿಸಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಕೇವಲ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿರುವುದು ಬಿಟ್ಟರೆ ಈ ಕುಟುಂಬಗಳ ಪರಿಸ್ಥಿತಿ ಮಾತ್ರ ಹಿಂದಿಗಿಂತಲೂ ಕೆಟ್ಟದಾಗಿತ್ತು. ಧರ್ಮ ಪರಿವರ್ತನೆ ಮಾಡಿದ ಕಾರಣಕ್ಕಾಗಿ ಸರಕಾರದಿಂದ ಪರಿಶಿಷ್ಟ ಪಂಗಡಗಳಿಗೆ ಸಿಗುತ್ತಿದ್ದ ಯೋಜನೆಗಳಿಂದಲೂ ಈ ಕುಟುಂಬಗಳು ವಂಚಿತಗೊಂಡಿತ್ತು. ಈ ಕುಟುಂಬದ ಸದಸ್ಯರ ಹೆಸರು ಮತ್ತು ಮನೆಯೊಳಗೆ ಕ್ರೈಸ್ತ ಧರ್ಮಕ್ಕೆ ಸೇರಿದ ಫೋಟೋಗಳನ್ನು ಹೊರತುಪಡಿಸಿ ಇನ್ಯಾವುದೇ ಸೌಲಭ್ಯ ಈ ಕುಟುಂಬಳಿಗೆ ಸಿಗುತ್ತಿರಲಿಲ್ಲ. ಈ ನಡುವೆ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳಕ್ಕೆ ಈ ವಿಚಾರ ಗಮನಕ್ಕೆ ಬಂದ ದಿನದಿಂದ ಈ ಕುಟುಂಬಗಳನ್ನು ನಿರಂತರವಾಗಿ ಸಂಪರ್ಕಿಸಿ, ಮನಪರಿವರ್ತನೆ ಮಾಡಿ ಈ 6 ಕುಟುಂಬಗಳನ್ನು ಮತ್ತೆ ಹಿಂದೂ ಧರ್ಮಕ್ಕೆ ಘರ್ ವಾಪಸಿ ಮಾಡಲಾಗಿದೆ. ಪಂಜದ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಎಲಗಲಾ ಕುಟುಂಬದ ಸದಸ್ಯರ ಉಪಸ್ಥಿತಿಯಲ್ಲಿ ಹಿಂದೂ ಸಂಘಟನೆಗಳ ಮುಖಂಡರು ಹೋಮ-ಹವನಗಳ ಮೂಲಕ ಘರ್ ವಾಪಸಿ ವಿಧಿಗಳನ್ನು ನಡೆಸಲಾಗಿದೆ.
ಹಿಂದೂ ಧರ್ಮಕ್ಕೆ ಸಂಬಂಧಪಟ್ಟ ದೇವರ ಫೋಟೋಗಳನ್ನು ಪ್ರತಿ ಮನೆಗೂ ನೀಡಲಾಗಿದೆ. ಹಿಂದೂ ಧರ್ಮದ ಬಗ್ಗೆ ಪ್ರತೀ ಸದಸ್ಯನಿಗೂ ತಿಳಿಸುವ ವ್ಯವಸ್ಥೆಯನ್ನೂ ಹಿಂದೂ ಸಂಘಟನೆಗಳು ಮಾಡಿಕೊಂಡಿವೆ. ಹಿರಿಯರು ಯಾವುದೋ ಅಮಿಷಕ್ಕೂ, ಅವಮಾನಕ್ಕೋ ಒಳಗಾಗಿ ಹಿಂದೂ ಧರ್ಮದಿಂದ ಕ್ರೈಸ್ತ ಮತಕ್ಕೆ ಮತಾಂತರಗೊಂಡಿದ್ದರುಮ ಆದರೆ ಇಂದಿನ ಪೀಳಿಗೆ ಹಿಂದೂ ಧರ್ಮದ ಬಗ್ಗೆ ಒಲವು ಹೊಂದಿದ ಹಿನ್ನಲೆಯಲ್ಲಿ ಮತ್ತೆ ಹಿಂಧೂ ಧರ್ಮಕ್ಕೆ ವಾಪಾಸಾಗಿರುವುದಾಗಿ ಕುಟುಂಬದ ಸದಸ್ಯರು ಮಾಹಿತಿ ನೀಡುತ್ತಾರೆ.
ಪಂಜ ಹಾಗು ಪಚ್ಚೋಡಿ ಪರಿಸರದಲ್ಲಿ ಇನ್ನೂ ಹಲವು ಕುಟುಂಬಗಳು ಅಮಿಷಗಳಿಗೆ ಒಳಗಾಗಿ ಅನ್ಯಧರ್ಮಗಳನ್ನು ಸ್ವೀಕರಿಸಿದೆ. ಮುಂದಿನ ದಿನಗಳಲ್ಲಿ ಆ ಕುಟುಂಬಗಳನ್ನೂ ಸಂಪರ್ಕಿಸಿ ಹಿಂದೂ ಧರ್ಮಕ್ಕೆ ಮರಳಿ ತರುವ ಪ್ರಯತ್ನದಲ್ಲಿ ಹಿಂದೂ ಸಂಘಟನೆಗಳಿವೆ. ಅಲ್ಲದೆ ಇದೀಗ ಘರ್ ವಾಪಾಸಾದ ಕುಟುಂಬಳಿಗೆ ಮುಂದಿನ ಎರಡು ವರ್ಷಗಳೊಳಗೆ ಪಕ್ಕಾ ಮನೆ ನಿರ್ಮಾಣದ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ.


