
ನಕಲಿ ಪರಶುರಾಮನ ಮೂರ್ತಿ ಸ್ಥಾಪನೆಯಲ್ಲಿ ಮೊದಲ ತಲೆದಂಡ!!
ಉಡುಪಿ: ಕಾರ್ಕಳದ ಉಮಿಕಲ್ ಬೆಟ್ಟದ ಪರಶುರಾಮ ಥೀಂ ಪಾರ್ಕ್ ಸಂಬಂಧಿಸಿ ಮಹತ್ವದ ಬೆಳವಣಿಗೆ ಆಗಿದ್ದು, ನಿರ್ಮಿತಿ ಕೇಂದ್ರದ ಉಡುಪಿ ಜಿಲ್ಲೆಯ ಯೋಜನಾ ನಿರ್ದೇಶಕರನ್ನು ಅಮಾನತುಗೊಳಿಸಿ ಜಿಲ್ಲಾಡಳಿತ ಆದೇಶ ನೀಡಿದೆ. ಈಗಾಗಲೇ ಪ್ರಕರಣ ಸಂಬಂಧ ಹೈಕೋರ್ಟ್‌ನಲ್ಲಿ ತನಿಖೆ ನಡೆಯುತ್ತಿದೆ. ಜೊತೆಗೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ವಿಚಾರಣಾ ಆಯೋಗವು ತನಿಖೆ ಕೈಗೊಂಡಿದೆ.
ಈ ನಿಟ್ಟಿನಲ್ಲಿ ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ನಡೆಸದಂತೆ ಹಾಗೂ ಅಡ್ಡಿ ಉಂಟು ಮಾಡುವ ಸಾಧ್ಯತೆ ಹಿನ್ನೆಲೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾಗಿದ್ದ ಅರುಣ್ ಕುಮಾರ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಈ ಪ್ರಕರಣದ ಮೊದಲ ತಲೆದಂಡ ಇದಾಗಿದ್ದು, ಈ ಮೂಲಕ ಭಾರೀ ವಿವಾದ ಸೃಷ್ಟಿಸಿದ್ದ ಥೀಂ ಪಾರ್ಕ್ ಪ್ರಕರಣ ತನಿಖೆ ಭಾರೀ ಕುತೂಹಲ ಮೂಡಿಸಿದೆ.
ತೆರವಾದ ಸ್ಥಾನಕ್ಕೆ ನಿರ್ಮಿತಿ ಕೇಂದ್ರದ ಸಹಾಯಕ ಯೋಜನಾ ನಿರ್ದೇಶಕರಾಗಿದ್ದ ದಿವಾಕರ್ ಪಿ. ಅವರಿಗೆ ಹೆಚ್ಚುವರಿಯಾಗಿ ಪ್ರಭಾರ ಆದೇಶ ನೀಡಿ ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಆದೇಶಿಸಿದ್ದಾರೆ. 2023ರ ಜನವರಿ 27 ರಂದು ಪರಶುರಾಮ ಥೀಂ ಪಾರ್ಕ್ ಇದನ್ನು ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟನೆ ಮಾಡಿದ್ದರು. ನಂತರದ ದಿನಗಳಲ್ಲಿ ಅಲ್ಲಿ ಸ್ಥಾಪಿಸಲಾಗಿದ್ದ ಪರಶುರಾಮನ ಮೂರ್ತಿ ಫೈಬರ್‌ನಿಂದ ಕೂಡಿದ್ದೇ ಹೊರತು ಕಂಚಿನ ಪ್ರತಿಮೆ ಅಲ್ಲ ಎಂದು ಸ್ಥಳೀಯ ಹೋರಾಟಗಾರರು ಆರೋಪಿಸಿದ್ದರು. ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದ ಮೇಲೆ ಇದರ ವಿಚಾರಣೆ ಕೈಗೆತ್ತಿಕೊಂಡಿತ್ತು. ಸ್ಥಳೀಯ ಶಾಸಕ ಸುನಿಲ್ ಕುಮಾರ್ ಅವರ ಮಹತ್ವದ ಈ ಯೋಜನೆಯ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು.