-->
ಇದೇನಿದು ಖಾದರ್ ಸಾಹೆಬ್ರೆ...!!!

ಇದೇನಿದು ಖಾದರ್ ಸಾಹೆಬ್ರೆ...!!!

ಬೆಂಗಳೂರು: ವಿಧಾನಸಭೆ ಸ್ಪೀಕರ್ ಪೀಠಕ್ಕೆ ಸಂಸದೀಯ ಪದ್ದತಿಯಲ್ಲಿ ಭಾರೀ ಮಹತ್ವವಿದೆ. ಆದರೆ ಸ್ಪೀಕರ್‌ ಪೀಠದ ಮುಂದೆ ನಿಂತು ಮಂಗಳೂರಿನ ಕಾಂಗ್ರೆಸ್ ನಾಯಕರು ಫೋಟೋ ಶೂಟ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.  ಇದು ವಿಧಾನಸಭೆಯ ನಿಯಮಾವಳಿಗಳ  ಉಲ್ಲಂಘನೆಯಲ್ಲವೇ? ಹಾಗೂ ಸ್ಪೀಕರ್ ಪೀಠದ ಗೌರವದ ನಿಟ್ಟಿನಲ್ಲಿ ಇದು ಸರಿಯಾದ ಕ್ರಮವೇ ಎಂಬ ಆಕ್ಷೇಪಗಳು ವ್ಯಕ್ತವಾಗುತ್ತಿವೆ. 

ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಸಮುದಾಯದ ಮುಖಂಡರೂ ಹಾಗೂ ಕಾಂಗ್ರೆಸ್ ನಾಯಕ ಕೆ ಅಶ್ರಫ್ ಎಂಬುವವರು ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಆಗಿದ್ದರು. ಸದ್ಯ ದಕ್ಷಿಣ ಕನ್ನಡ  ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರೂ ಆಗಿದ್ದಾರೆ. ವಿಧಾನಸೌಧಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದರು. ಸ್ಪೀಕರ್ ಯು.ಟಿ ಖಾದರ್ ಹಾಗೂ ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್ ಅವರ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕರು ನಡೆಸಿದ ಸಭೆಯಲ್ಲೂ ಭಾಗಿಯಾಗಿದ್ದ ಅವರು ಇದರ ಫೋಟೋಗಳನ್ನು ಹಂಚಿಕೊಂಡಿದ್ದರು. 

ಅವರ ಜೊತೆಗೆ ಮಂಗಳೂರು ಪಾಲಿಗೆಯ ಕಾಂಗ್ರೆಸ್ ಸದಸ್ಯರಾಗಿರುವ ನವೀನ್ ಡಿಸೋಜಾ ಕೂಡಾ ಸ್ಪೀಕರ್ ಪೀಠದ ಮುಂದೆ ಸ್ಪೀಕರ್ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ. ಇವೆಲ್ಲವೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.


ಸ್ಪೀಕರ್ ಪೀಠದ ಪಕ್ಕ ನಿಂತ ಫೋಟೋ ವೈರಲ್:  ವಿಧಾನಸಭೆಯ ಸಭಾಂಗಣಕ್ಕೆ ಸಾರ್ವಜನಿಕರಿಗೂ ಎಂಟ್ರಿ ಇರುವುದಿಲ್ಲ. ಸ್ಪೀಕರ್ ಅನುಮತಿಯ ಮೇರೆಗೆ ಅಧಿವೇಶನ ಇಲ್ಲದ ವೇಳೆ ಭೇಟಿ ಕೊಡಲು ಅವಕಾಶ ಇದೆ. ಇನ್ನು ಸದನ ನಡೆಯುವ ಸಂದರ್ಭದಲ್ಲಿ ಮಾತ್ರ ಸ್ಪೀಕರ್ ಪೀಠದ ಮೇಲೆ ಆಸೀನರಾಗಿರುತ್ತಾರೆ. ಆದರೆ ಈ ಫೋಟೋದಲ್ಲಿ ಸ್ಪೀಕರ್‌ ಯು.ಟಿ ಖಾದರ್ ಅವರು ಪೀಠದಲ್ಲಿ ಕುಳಿತುಕೊಂಡಿದ್ದು, ಪಕ್ಕದಲ್ಲೇ ಕೆ. ಅಶ್ರಫ್‌ ಹಾಗೂ ನವೀನ್ ಡಿಸೋಜಾ ಕಾಣಿಸಿಕೊಂಡಿದ್ದಾರೆ. ಇವರೆಲ್ಲಾ  ಸ್ಪೀಕರ್ ಖಾದರ್ ಅವರಿಗೂ ಆಪ್ತರು ಎಂದು ಹೇಳಲಾಗುತ್ತಿದೆ. 

ಕೆ. ಅಶ್ರಫ್ ಅವರು ತಮ್ಮ ವಾಟ್ಸಪ್‌ ಸ್ಟೇಟಸ್‌ನಲ್ಲೂ ಸ್ಪೀಕರ್‌ ಜೊತೆಗೆ ಇರುವ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜಿಲ್ಲೆಯ ವಿಚಾರಕ್ಕೆ ಸಂಬಂಧಿಸಿದಂತೆ ಇತರ ಮುಖಂಡರ ಜೊತೆಗೆ ನಡೆದ ಸಭೆಯಲ್ಲಿ ಅಶ್ರಫ್ ಹಾಗೂ ನವೀನ್ ಕೂಡಾ ಇದ್ದರು.  ಇದೇ ವಿಚಾರವಾಗಿ ‘ಪತ್ರಕರ್ತ ಇರ್ಷಾದ್ ಉಪ್ಪಿನಂಗಡಿ' ಅವರ ಜೊತೆಗೆ ಮಾತನಾಡಿದ ಮಾಜಿ ಸ್ಪೀಕರ್ ಹಾಗೂ ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, “ಸ್ಪೀಕರ್ ಪೀಠಕ್ಕೆ ಅದರದ್ದೇ ಆದ ಗೌರವ ಇದೆ. ಪೀಠದ ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವುದು ಸರಿಯಾದ ಪದ್ದತಿಯಲ್ಲ. ನಿಯಮಾವಳಿಯ ಪ್ರಕಾರ ನೋಡೋದಾದರೆ ಇದು ಸ್ಪೀಕರ್ ವಿವೇಚನೆಗೆ ಬಿಟ್ಟಿದ್ದು. ಆದರೂ ಪೀಠದ ಗೌರವದ ನಿಟ್ಟಿನಲ್ಲಿ ನೈತಿಕವಾಗಿ ಸರಿಯಾದ ಕ್ರಮ ಅಲ್ಲ” ಎಂದರು. 

ಮಾಜಿ ಸಭಾಪತಿ ಬಿಎಲ್ ಶಂಕರ್ ಇದೇ ವಿಚಾರವಾಗಿ ಮಾತನಾಡಿ, “ಸ್ಪೀಕರ್ ಪೀಠದಲ್ಲಿ ಕುಳಿತುಕೊಂಡಾಗ ಯಾರೂ ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವುದು ಸರಿಯಾದ ಕ್ರಮ ಅಲ್ಲ. ಸದನ ನಡೆಯುತ್ತಿರುವಾಗ ಮಾತ್ರ ಸ್ಪೀಕರ್ ತನ್ನ ಪೀಠದಲ್ಲಿ ಕುಳಿತುಕೊಳ್ಳುವುದು ಪದ್ದತಿಯಾಗಿದೆ. ಬೇರೆ ಸಂದರ್ಭದಲ್ಲಿ ಸಾಮಾನ್ಯಾವಾಗಿ ಯಾರೂ ಕುಳಿತುಕೊಳ್ಳುವುದಿಲ್ಲ. ಹಾಗಾಗಿ ಇದು ಸರಿಯಾದ ಕ್ರಮ ಅಲ್ಲ” ಎಂದು ಅಭಿಪ್ರಾಯಪಟ್ಟರು.

ಸ್ಪೀಕರ್ ಸ್ಥಾನಕ್ಕೆ ಹಾಗೂ ಪೀಠಕ್ಕೆ ಸಂಸದೀಯ ಪದ್ದತಿಯಲ್ಲಿ ಅತ್ಯಂತ ಗೌರವ ಇದೆ. ಸ್ಪೀಕರ್ ಪೀಠಕ್ಕೆ ಯಾರೂ ತಪ್ಪಾಗಿ ನಡೆದುಕೊಳ್ಳಬಾರದು. ಸದನ ನಡೆಯುವಾಗಲೂ ಶಾಸಕರು ಸ್ಪೀಕರ್ ಪೀಠಕ್ಕೆ ಅತ್ಯಂತ ಗೌರವಯುತವಾಗಿ ನಡೆದುಕೊಳ್ಳುತ್ತಾರೆ. ಹೀಗಿರುವಾಗ ಇಂತಹ ಫೋಟೋ ಶೂಟ್ ತಪ್ಪು ಸಂದೇಶ ನೀಡುತ್ತದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಇದಕ್ಕೆ ಸ್ಪೀಕರ್ ಖಾದರ್ ಅವರೇ ಉತ್ತರಿಸಬೇಕಾಗಿದೆ.

ವರದಿ: ವಿಜಯ ಕರ್ನಾಟಕ

Ads on article

Advertise in articles 1

advertising articles 2

Advertise under the article