"ಬೆಂದ್ರ್" ಇಲ್ಲದ ತೀರ್ಥ!?
ಪುತ್ತೂರು: ಪ್ರೇಕ್ಷಣೀಯ ಸ್ಥಳ ಹಾಗೂ ಚರ್ಮರೋಗ ಸಮಸ್ಯೆ ನಿವಾರಣೆ ನಂಬಿಕೆಯ ಸ್ಥಳವಾಗಿ ಗುರುತಿಸಿಕೊಂಡಿದ್ದ ದಕ್ಷಿಣ ಭಾರತದ ಏಕೈಕ ಬಿಸಿನೀರಿನ ಚಿಲುಮೆ 'ಇರ್ದೆ ಬೆಂದ್ರ್ ತೀರ್ಥ' ಈಗ ತಣ್ಣಗಾಗಿ ಸಂಪೂರ್ಣ ನಿರ್ಲಕ್ಷಿಸಲ್ಪಟ್ಟಿದೆ. ಪ್ರವಾಸೋದ್ಯಮದ ದೃಷ್ಟಿಯಿಂದಲೂ ವಿಶೇಷ ಮತ್ತು ವಿರಳವಾದ ಈ ಸ್ಥಳದ ಕುರಿತು ಮರು ಅಧ್ಯಯನ, ಅಭಿವೃದ್ಧಿ ಆಗಬೇಕಾಗಿದೆ.
ಹೌದು ಅತಿ ವಿಶೇಷ ದಕ್ಷಿಣ ಭಾರತದ ಏಕೈಕ ಬಿಸಿನೀರಿನ ಚಿಲುಮೆ ಹಲವು ವರ್ಷಗಳ ಹಿಂದೆ ಪುತ್ತೂರು ತಾಲೂಕಿನ ಇರ್ದೆ ಗ್ರಾಮದಲ್ಲಿ ಕಾಣಿಸಿಕೊಂಡಿತ್ತು. ಇದರಿಂದ ಗಂಟೆಗೆ 1,350ರಿಂದ 4,600 ಲೀ. ನೀರು ಚಿಮ್ಮುತ್ತಿತ್ತು. 99ರಿಂದ 106 ಡಿಗ್ರಿ ಫಾರನ್ ಹೀಟ್ ಉಷ್ಣಾಂಶ ಹಾಗೂ ಗಂಧಕದ ವಾಸನೆಯನ್ನು ಹೊಂದಿರುವ ನೀರು ಚಿಮ್ಮುವುದು ಇಲ್ಲಿನ ವಿಶೇಷತೆಯಾಗಿತ್ತು. ಈ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮರೋಗಗಳು ವಾಸಿಯಾಗುತ್ತದೆ ಎಂಬ ನಂಬಿಕೆಯಿಂದ ನಿತ್ಯ ನೂರಾರು ಮಂದಿ ಇಲ್ಲಿಗೆ ಆಗಮಿಸುತ್ತಿದ್ದರು. ಪ್ರವಾಸಿ ತಾಣವಾಗಿ ಈ ಸ್ಥಳ ಗುರುತಿಸಿಕೊಂಡಿತ್ತು.
ಇನ್ನು ವರ್ಷದ ಎಲ್ಲ ಕಾಲಗಳಲ್ಲೂ ಬಿಸಿ ನೀರಿನ ಚಿಲುಮೆ ಹೊಂದಿದ್ದ 'ಇರ್ದೆ ಬೆಂದ್ರ್ ತೀರ್ಥ' ಕೆರೆಯಲ್ಲಿ ಏಕಾಏಕಿ ನೀರು ಕಡಿಮೆಯಾಗತೊಡಗಿತು. ನೀರಿನ ಉಷ್ಣಾಂಶವೂ ಇಳಿಕೆಯಾಗಿತ್ತು. ಈ ಪರಿಸರದಲ್ಲಿ ಹಲವು ಕೊಳವೆ ಬಾವಿಗಳನ್ನು ಕೊರೆಸಿದ ಕಾರಣದಿಂದ ಈ ಸ್ಥಿತಿ ನಿರ್ಮಾಣವಾಗಿದೆ ಎಂಬ ಚರ್ಚೆಗಳು ನಡೆದವು. ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಯಿತು. ಆದರೆ ತೀರ್ಥ ಅಮಾವಾಸ್ಯೆ ಹಾಗೂ ಇತರ ವಿಶೇಷ ದಿನಗಳಲ್ಲಿ ಇಲ್ಲಿ ಬಂದು ತೀರ್ಥ ಸ್ನಾನ ಮಾಡುವವರು ಈಗಲೂ ಇದ್ದಾರೆ. ವರ್ಷವಿಡೀ ನೀರಿನಿಂದ ತುಂಬಿರುತ್ತಿದ್ದ ಕೆರೆಯಲ್ಲಿ ಈಗ ಬೇಸಗೆಯಲ್ಲಂತೂ ನೀರು ಪೂರ್ಣ ಆವಿಯಾಗುತ್ತದೆ.
ಬೆಂದ್ರ್ ತೀರ್ಥಕೆರೆ ಬಳಿ ಸ್ಥಾನಕ್ಕೆ ಬರುವವರ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ ಕೊಠಡಿ ಗಳು ನಿರ್ವಹಣೆಯಿಲ್ಲದೆ ಹಲವು ವರ್ಷಗಳಿಂದ ಪಾಳುಬಿದ್ದಿವೆ. ಇಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳೂ ನಡೆಯುತ್ತಿದ್ದವು. ಬೆಂದ್ರತೀರ್ಥದ ಕೊಠಡಿಗಳು ಕಿಡಿಗೇಡಿಗಳ ಬರಹಗಳಿಗೆ ಜಾಗ ಒದಗಿಸುತ್ತಿವೆ.
ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ವೇಳೆ ಅಕಾಡೆಮಿ ಭಾಷೆಗೆ ಮಾತ್ರ ಸೀಮಿತವಾಗದೆ ಶುಳುನಾಡಿನ ಸಂಸ್ಕೃತಿ, ವಿಶೇಷಣೆಗಳಿಗೂ ಆದ್ಯತೆ ನೀಡಬೇಕೆಂಬ ಉದ್ದೇಶವನ್ನಿಟ್ಟುಂಡು ಇರ್ದೆ ಬೆಂದ್ರ ತೀರ್ಥದ ಅಭಿವೃದ್ಧಿಗೂ ಜನಪ್ರತಿನಿಧಿಗಳು, ಇಲಾಖೆಗಳ ಸಮನ್ವಯ ಸಾಧಿಸಲು ಪ್ರಯತ್ನಿಸಿದ್ದರು. ಈ ನಿಟ್ಟಿನಲ್ಲಿ ಬೆಂದ್ರ ತೀರ್ಥ ಅಭಿವೃದ್ಧಿ ಸಮಿತಿಯನ್ನೂ ರಚಿಸಿ ಸಭೆಯನ್ನೂ ನಡೆಸಲಾಗಿತ್ತು. ಅಭಿವೃದ್ಧಿಯ ರೂಪುರೇಷೆಯ ಯೋಜನೆ ಸಿದ್ಧಪಡಿಸಿ ಜಿಲ್ಲಾಧಿ ಕಾರಿ, ಪ್ರವಾಸೋದ್ಯಮ ಇಲಾಖೆ, ಜಿ.ಪಂ.ಗೂ ಒತ್ತಡ ಹೇರಲಾಗಿತ್ತು. ದೇವಸ್ಥಾನದ ಭಾಗದಿಂದ ಬೆಂದ್ರ ತೀರ್ಥದ ಭಾಗಕ್ಕೆ ಬರಲು ತೂಗುಸೇತುವೆ ಅಗಬೇಕು. ಬಿಸಿ ನೀರಿನ ಚಿಲುಮೆಯ ಒರತೆ ಪತ್ತೆ ಮಾಡಿ ಅಭಿವೃದ್ಧಿಪಡಿಸಬೇಕು. ಪಕ್ಕದ ಸೀರೆ ಹೊಳೆಯಲ್ಲಿ ಹೊಳೆಯಲ್ಲಿ ಡ್ಯಾಂನ್ನು ಮೇಲಕ್ಕೆ ಕಟ್ಟಬೇಕು ಎನ್ನುವ ಪ್ರಯತ್ನ ನಡೆಸಿದ್ದರು. ವರ್ಷದ ಹಿಂದೆ ದ.ಕ. ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂ ವಿಜ್ಞಾನಿಗಳು, ನೈರ್ಮಲ್ಯ ಇಲಾಖೆಯ ಭೂ ವಿಜ್ಞಾನಿ, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ನಿರ್ದೇಶಕರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ ಮುಂದೆ ಏನಾಗಿದೆ ಎಂಬುದು ತಿಳಿಯುತ್ತಿಲ್ಲ ಬೆಂದ್ರತೀರ್ಥ ಪ್ರವಾಸಿ ತಾಣ, ವಿಷ್ಣುಮೂರ್ತಿ ದೇವಸ್ಥಾನ, ಕದಿಕೆ ಚಾವಡಿ, ಪಳ್ಳಿತಡ್ಕ ಪ್ರಸಿದ್ಧ ಮಸೀದಿ ಒಂದೇ ಪರಿಸರದಲ್ಲಿ ಇರುವುದರಿಂದ ಅಭಿವೃದ್ಧಿ ಕಾರ್ಯಗಳು ನಡೆದರೆ ಪ್ರವಾಸಿ ತಾಣವಾಗಿ ಪೂರಕವಾಗುತ್ತದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.
ವಸತಿಗೃಹ ಉದ್ಘಾಟನೆಗೊಂಡಿಲ್ಲ:
ಬೆಂದ್ರ್ ತೀರ್ಥದ ಬಳಿ ಪ್ರವಾಸೋದ್ಯಮ ಇಲಾಖೆ ರೂ. 25 ಲಕ್ಷ ರೂ. ವೆಚ್ಚದಲ್ಲಿ ವಸತಿ ಗೃಹ ನಿರ್ಮಿಸಿದೆ. ನಿರ್ಮಿತಿ ಕೇಂದ್ರ ದಿಂದ ಕಾಮಗಾರಿ ನಡೆಸಿತ್ತು. ದಿ. ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಅಧ್ಯಕ್ಷತೆಯ ಬೆಂದ್ ತೀರ್ಥ ಅಭಿವೃದ್ಧಿ ಸಮಿತಿಯಿಂದ ಪ್ರಯತ್ನ ನಡೆಸಿದ ಬಳಿಕ ಅನುದಾನ ನೀಡಲಾಗಿತ್ತು. ಆದರೆ ದಶಕ ಕಳೆದರೂ ಕಟ್ಟಡ ಉದ್ಘಾಟನೆ ಭಾಗ್ಯ ಕಂಡಿಲ್ಲ. ಕಟ್ಟಡದ ಅಲ್ಲಲ್ಲಿ ಬಿರುಕು ಉಂಟಾಗಿದೆ. ಆದರೆ ಸ್ಥಳೀಯ ಗ್ರಾ.ಪಂ. ಆಡಳಿತಕ್ಕೆ ಹಸ್ತಾಂತರ ಮಾಡದೆ ಇಲಾಖೆ ಮಾಡದೆ ಮೌನ ವಹಿಸಿದೆ.
.jpeg)
.jpeg)
.jpeg)