-->
CPCRI ವಿರುದ್ಧ ಕೆಂಡಾಮಂಡಲರಾದ ಶಾಸಕ ಅಶೋಕ್ ಕುಮಾರ್ ರೈ

CPCRI ವಿರುದ್ಧ ಕೆಂಡಾಮಂಡಲರಾದ ಶಾಸಕ ಅಶೋಕ್ ಕುಮಾರ್ ರೈ


ಪುತ್ತೂರು:  ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ತೋಟದ ಬೆಳೆಗಳ ಸಂಶೋಧನಾ ಕೇಂದ್ರ ( ಸಿಪಿಸಿಆರ್‌ಐ) ಎರಡು ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ವಿಟ್ಲ ಹಾಗೂ ನೆಟ್ಟಣದ ಕಿದು ಎಂಬಲ್ಲಿ ಈ ತೋಟಗಾರಿಕಾ ಬೆಳೆಗಳ ಬಗ್ಗೆ ಸಂಶೋಧನೆಗಾಗಿ ವ್ಯವಸ್ಥೆಗಳಿವೆ. ಆದರೆ ಈ ಸಿಪಿಸಿಆರ್‌ಐ ರೈತರಿಗೆ ಯಾವುದೇ ಪ್ರಯೋಜನವಿಲ್ಲದ ವ್ಯರ್ಥ ಕೇಂದ್ರಗಳು. ಈ ಕೇಂದ್ರಗಳ ಸ್ಥಳಗಳನ್ನು ಕೃಷಿ ಇಲಾಖೆಗೆ ನೀಡಿದರೆ ರೈತರಿಗಾದರೂ ಪ್ರಯೋಜನವಾಗಬಹುದು ಎಂದು ಪುತ್ತೂರು ಶಾಸಕ ಅಶೋಕ್ ರೈ ಮತ್ತೊಮ್ಮೆ ಗುಡುಗಿದ್ದಾರೆ.

ಕಾವು ಸಿಎ ಬ್ಯಾಂಕ್ ವಠಾರದಲ್ಲಿ ಮಾಸ್ ವತಿಯಿಂದ ಅಡಿಕೆ ಖರೀದಿ ಕೇಂದ್ರ ಉದ್ಘಾಟಿಸಿದ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಸಿಪಿಸಿಆರ್‌ಐಯಲ್ಲಿ ಅಡಿಕೆ ಹಾಗೂ ತೆಂಗು ಕೃಷಿಗಳ ಬಗ್ಗೆ ಸಂಶೋಧನೆ ನಡೆಯಬೇಕು. ಅದಕ್ಕೆ ಬರುವ ರೋಗಗಳ ನಿವಾರಣೆ ಬಗ್ಗೆ ಇಲ್ಲಿ ಸಂಶೋಧನೆ ನಡೆಸಬೇಕು. ಆದರೆ ಅಂತಹ ಪ್ರಯತ್ನಗಳೇ ಇಲ್ಲಿ ನಡೆಯುತ್ತಿಲ್ಲ. ಆ ಬಗ್ಗೆ ಇಲ್ಲಿನ ಬಹುತೇಕ ವಿಜ್ಞಾನಿಗಳಿಗೆ ಆಸಕ್ತಿಯೂ ಇಲ್ಲ.  ಈ ಕೃಷಿ ವಿಜ್ಞಾನಿಗಳು ದಕ ಮತ್ತು ಉಡುಪಿ ಜಿಲ್ಲೆಯ ಜೀವನಾಧಾರ ಬೆಳೆ ಅಡಿಕೆ ಬಗ್ಗೆ ಸಮರ್ಪಕ ಚಿಂತನೆಯನ್ನೇ ಮಾಡುತ್ತಿಲ್ಲ ಎಂದು ಆರೋಪಿಸಿದರು. ಈ ಹಿಂದೆಯೂ ಸಿಪಿಸಿಆರ್‌ಐ ಕಾರ್ಯಚಟುವಟಿಕೆಯ ಅಸಮರ್ಪಕತೆ, ಬೇಜವಾಬ್ದಾರಿತನದ ಕುರಿತು ರೈತರನ್ನು ಸೇರಿಸಿಕೊಂಡು ಅಶೋಕ್ ರೈ ಅವರು ಪ್ರತಿಭಟನೆ ನಡೆಸುವುದಾಗಿಯೂ ತಿಳಿಸಿದ್ದರು.

ಜಿಲ್ಲೆಯ ರೈತವರ್ಗದ ಜೀವನಾಡಿ ಬೆಳೆಯಾದ ಅಡಿಕೆಗೆ ಕಳೆದ 10 ವರ್ಷಗಳಿಂದ ಹಳದಿರೋಗ ಮಹಾಮಾರಿಯಾಗಿ ಕಾಡುತ್ತಿದೆ. ಯಾವುದೇ ರೋಗಕ್ಕೂ ಔಷಧಿ ಇದೆ. ಆದರೆ ಹಳದಿರೋಗಕ್ಕೆ ಔಷಧಿ ಕಂಡು ಹಿಡಿಯಲು ಈ ವಿಜ್ಞಾನಿಗಳಿಂದ ಸಾಧ್ಯವಾಗಿಲ್ಲ.  ಜಿಲ್ಲೆಯಲ್ಲಿಯೇ ಅತ್ಯಂತ ಹೆಚ್ಚು ಅಡಿಕೆ ಉತ್ಪಾದನೆಯಾಗುತ್ತಿದ್ದ ಸುಳ್ಯ ತಾಲೂಕಿನಲ್ಲಿ ಈ ಹಳದಿರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಸುಳ್ಯ ತಾಲೂಕಿನ 32 ಗ್ರಾಮಗಳಲ್ಲಿ ಹಳದಿರೋಗದಿಂದ ಅಡಿಕೆ ಬೆಳೆ ಸಂಪೂರ್ಣ ನಾಶವಾಗಿದೆ.  ಅಲ್ಲಿನ ರೈತರ ಬದುಕೇ ನಾಶವಾಗಿದೆ. ಇಂತಹ ರೋಗಳ ಬಗ್ಗೆ ಸಂಶೋಧನೆ ಮಾಡದ ಸಿಪಿಸಿಆರ್‌ಐ ಕೇಂದ್ರಗಳ ಔಚಿತ್ಯವಾದರೂ ಏನು ಎಂದು ಅವರು ಪ್ರಶ್ನಿಸಿದರು.

ಕಡಬ ತಾಲೂಕಿನಲ್ಲಿರುವ ನೆಟ್ಟಣದ ಕಿದು ಎಂಬಲ್ಲಿ ತೆಂಗು ಕೃಷಿ ಸಂಶೋಧನೆಗಾಗಿ ರಾಜ್ಯ ಸರ್ಕಾರ 350 ಎಕರೆ ಸ್ಥಳವನ್ನು ಸಿಪಿಸಿಆರ್‌ಐಗೆ ಲೀಸ್ ಮೂಲಕ ನೀಡಿದೆ. ಕಳೆದ 10 ವರ್ಷಗಳ ಹಿಂದೆಯೇ ಇದರ ಲೀಸ್ ಮುಗಿದುಹೋಗಿದೆ. ಇದನ್ನು ಮತ್ತೆ ನವೀಕರಣ ಮಾಡಬೇಕು ಎಂದು ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ನಡೆಯುತ್ತಿದೆ.  ಆದರೆ ಇಲ್ಲಿ ರೈತಪೂರಕ ಸಂಶೋಧನೆಗಳ ನಡೆಯುತ್ತಿಲ್ಲ. ಅಪ್ರಯೋಜಕ ವ್ಯವಸ್ಥೆಯಲ್ಲಿರುವ ಈ ಕೇಂದ್ರದಲ್ಲಿರುವ ಭೂಮಿಯನ್ನು ಸರ್ಕಾರ ಸಿಪಿಸಿಆರ್‌ಐ ಗೆ ನವೀಕರಣ ಮಾಡದೆ ಕೃಷಿ ಇಲಾಖೆಯ ಸುಪರ್ದಿಗೆ ನೀಡಬೇಕು. ಕನಿಷ್ಠ ಕೃಷಿಪೂರಕ ವ್ಯವಸ್ಥೆ ಇಲ್ಲಿ ನಿರ್ಮಾಣವಾಗಬಹುದು ಎಂದು ಅವರು ಹೇಳಿದರು.

ಇನ್ನು ದಕ ಜಿಲ್ಲೆಯ ಕಡಬ ತಾಲೂಕಿನ ನೆಟ್ಟಣ ಬಳಿಯ ಕಿದು, ವಿಟ್ಲ ಹಾಗೂ ಕಾಸರಗೋಡಿನ ಮಂಜೇಶ್ವರದಲ್ಲಿ ಈ ಸಿಪಿಸಿಆರ್‌ಐ ಕೇಂದ್ರಗಳಿವೆ. ಸುಮಾರು 450 ಮಂದಿ ಇದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕೃಷಿ ವಿಜ್ಞಾನಿಗಳು ತಿಂಗಳಿಗೆ ರೂ.2.20 ಲಕ್ಷ ವೇತನ ಪಡೆಯುತ್ತಿದ್ದಾರೆ. ಕಾರು, ಚಾಲಕ, ಸೇರಿದಂತೆ ಎಲ್ಲಾ ಬಗೆಯ ಸವಲತ್ತುಗಳನ್ನೂ ಪಡೆಯುತ್ತಿದ್ದಾರೆ. ಆದರೆ ಇಲ್ಲಿನ ಪ್ರಮುಖ ಬೆಳೆಗಳಾದ ಅಡಿಕೆ ಮತ್ತು ತೆಂಗು ಕೃಷಿಗೆ ಈ ಕೇಂದ್ರಗಳ ಕೊಡುಗೆ ಏನು ಎಂಬುವುದನ್ನು ಅವರು ಹೇಳಲಿ ಎಂದು ಗುಡುಗಿದರು.

Ads on article

Advertise in articles 1

advertising articles 2

Advertise under the article