ಅಪಾಯ ಮಟ್ಟ ಮೀರಿದ ನೇತ್ರಾವತಿ; ನದಿ ತಟದ ಜನರ ಸೇವೆಗೆ 24 ಗಂಟೆ ಮಸೀದಿ ಓಪನ್!
Tuesday, July 30, 2024
ಬೆಳ್ತಂಗಡಿ: ಕರಾವಳಿಯಲ್ಲಿ ಮಳೆ ಅಬ್ಬರ ಮುಂದುವರೆದಿದೆ. ನಾಳೆಯೂ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಈ ನಡುವೆ ವಯನಾಡ್ ದುರಂತ ಜನರನ್ನ ಅಕ್ಷರಶಃ ಬೆಚ್ಚಿಬೀಳುವಂತೆ ಮಾಡಿದೆ. ನೇತ್ರಾವತಿ, ಕುಮಾರಧಾರ ನದಿಗಳು ಉಕ್ಕಿ ಹರಿಯುತ್ತಿದ್ದು ಉಪ್ಪಿನಂಗಡಿ, ಬಂಟ್ವಾಳ ಭಾಗದಲ್ಲಿ ನದಿಗಳ ಅಪಾಯ ಮಟ್ಟ ಮೀರಿದ್ದರಿಂದ ಆತಂಕ ಎದುರಾಗಿದೆ.
ಈ ಮಧ್ಯೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಬದ್ರಿಯಾ ಜುಮ್ಮಾ ಮಸೀದಿ ಮಹತ್ವದ ಪ್ರಕಟಣೆ ಹೊರಡಿಸಿದೆ. ತನ್ನ ಜಮಾಅತ್ ಮಾತ್ರವಲ್ಲದೇ ಸುತ್ತಮುತ್ತಲಿನ ಯಾರೇ ಇದ್ದರೂ ಪ್ರವಾಹ ಸ್ಥಿತಿಯಿಂದ ಸಂಕಷ್ಟದಲ್ಲಿದ್ದರೆ ತಕ್ಷಣ ಮಸೀದಿಯನ್ನ ಸಂಪರ್ಕಿಸುವಂತೆ ಕೋರಿದೆ. ವಿಶೇಷವಾಗಿ ನದಿ ತಟದಲ್ಲಿರುವ ಗ್ರಾಮಗಳಾದ ಶಿಶಿಲ, ಅರಸಿನಮಕ್ಕಿ, ಮುದ್ದಿಗೆ , ಪಟ್ರಮೆ, ಪಟ್ಟೂರು ಅಥವಾ ಕೊಕ್ಕಡಕ್ಕೆ ಸಂಬಂಧಪಟ್ಟ ಯಾವುದೇ ಹತ್ತಿರದ ಊರಿನಲ್ಲಿ ಸಂಕಷ್ಟದಲ್ಲಿದ್ದರೆ ಆಸರೆಗಾಗಿ ಕೊಕ್ಕಡದ ಬದ್ರಿಯಾ ಜುಮ್ಮಾ ಮಸೀದಿ ಸಂಪರ್ಕಿಸುವಂತೆ ಮಸೀದಿ ಆಡಳಿತ ಸಮಿತಿ ತಿಳಿಸಿದೆ. ಈ ಕುರಿತಂತೆ ವಾಟ್ಸಾಪ್ ಮೂಲಕ ಸಂದೇಶವನ್ನು ರವಾನಿಸಿದೆ.
ಈ ವಿಚಾರದ ಸ್ಪಷ್ಟನೆಗಾಗಿ 'ದಿ ನ್ಯೂಸ್ ಅವರ್' ಮಸೀದಿ ಕಮಿಟಿಯ ಅಧ್ಯಕ್ಷ ಹೈದರ್ ಎಮ್ಎಸ್ ಅವರನ್ನು ಸಂಪರ್ಕಿಸಿದ್ದು, ಇಂತಹ ಪ್ರಕಟಣೆ ಹೊರಡಿಸಿರುವುದನ್ನು ದೃಢಪಡಿಸಿದ್ದಾರೆ.
ಕೊರೊನಾ ಅವಧಿಯಲ್ಲೂ ಮಸೀದಿ ಕಮಿಟಿ ಕಿಟ್ ನೀಡಿತ್ತು. ಈಗ ನದಿ ಅಪಾಯ ಮಟ್ಟ ಮೀರಿದ್ದರಿಂದ 24 ಗಂಟೆಯೂ ಮಸೀದಿಯನ್ನು ತೆರೆದು ಸೇವೆ ನೀಡಲು ನಾವು ಸದಾ ಸಿದ್ಧರಿದ್ದೇವೆ. ನಮ್ಮ ಸೇವೆಯು ಯಾವುದೋ ಒಂದು ಧರ್ಮ, ಜನಾಂಗಕ್ಕೆ ಸೀಮಿತವಾಗಿಲ್ಲ. ಯಾವುದೇ ವ್ಯಾಪ್ತಿ, ಯಾವುದೇ ಧರ್ಮದವನೂ ಬಂದರೂ ಅವರಿಗೆ ನಮ್ಮ ಮಸೀದಿಯಲ್ಲಿ ಆಸರೆ ನೀಡುವುದಾಗಿ 'ದಿ ನ್ಯೂಸ್ ಅವರ್'ಗೆ ತಿಳಿಸಿದ್ದಾರೆ.
ಸಂಪರ್ಕಕ್ಕಾಗಿ ಹೈದರ್ ಎಂಎಸ್ (ಅಧ್ಯಕ್ಷರು) 8971740932, ಅನ್ಸರ್ ಕೊಕ್ಕಡ, ಪ್ರಧಾನ ಕಾರ್ಯದರ್ಶಿ - 99028595291 ಸಂಪರ್ಕಿಸಬಹುದಾಗಿದೆ.