ಕುಸಿತದ ಭೀತಿಯಲ್ಲಿದೆ 'ಆದಾಯದ' ಸೇತುವೆ...!!!
ಪುತ್ತೂರು: ಕರ್ನಾಟಕ ಮತ್ತು ಕೇರಳ ಗಡಿ ಭಾಗದ ಜನರ ಸಂಪರ್ಕದ ಕೊಂಡಿಯೊಂದು ಇದೀಗ ಕಳಚಿ ಬೀಳುವ ಭೀತಿಯಲ್ಲಿದೆ. ದಕ್ಷಿಣ ಕನ್ನಡ ಮತ್ತು ಕೇರಳದ ಕಾಸರಗೋಡು ಜಿಲ್ಲೆಯ ಗಡಿ ಭಾಗವಾದ ಸುಳ್ಯಪದವಿನ ದೇವಸ್ಯದಲ್ಲಿ ನಿರ್ಮಾಣವಾದ ಈ ಸೇತುವೆ ಸಮರ್ಪಕ ನಿರ್ವಹಣೆ ಮತ್ತು ಹೆಚ್ಚುತ್ತಿರುವ ವಾಹನ ಸಂಚಾರದಿಂದಾಗಿ ಕುಸಿಯುವ ಹಂತಕ್ಕೆ ತಲುಪಿದೆ.
ಸುಮಾರು 42 ವರ್ಷಗಳ ಹಿಂದೆ ನಿರ್ಮಾಣವಾದ ಅಂತರ್ ರಾಜ್ಯ ಸಂಪರ್ಕಿಸುವ ಸೇತುವೆ ಕುಸಿಯುವ ಭೀತಿಯನ್ನು ಎದುರಿಸುತ್ತಿದೆ. ಕರ್ನಾಟಕ ಮತ್ತು ಕೇರಳ ರಾಜ್ಯದ ಗಡಿಭಾಗದ ರಸ್ತೆ ಅಭಿವೃದ್ಧಿಗೊಂಡಿದ್ದರೂ, ಸೇತುವೆ ಮಾತ್ರ ಅಭಿವೃದ್ಧಿಯಾಗದೆ ಪ್ರಯಾಣಿಕರಿಗೆ ಸಮಸ್ಯೆಯನ್ನು ತಂದೊಡ್ಡಿದೆ.
1980 ರಲ್ಲಿ ಅಂದಿನ ಸಂಸದರಾಗಿದ್ದ ಜನಾರ್ದನ ಪೂಜಾರಿ ಅವರು ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿ ಸೇತುವೆ ನಿರ್ಮಿಸಲು ಮುತುವರ್ಜಿ ವಹಿಸಿ ಕಾಮಗಾರಿಗೂ ಪೂರ್ಣಗೊಂಡಿತ್ತು. ಆ ಬಳಿಕ ಈ ಸೇತುವೆಯ ಬಗ್ಗೆ ಗಮನವನ್ನೇ ಹರಿಸದ ಕಾರಣಕ್ಕೆ ಇದೀಗ ಸೇತುವೆ ಶಿಥಿಲಗೊಂಡಿದ್ದು ಸೇತುವೆಯು ತಡೆಗೋಡೆ ಹಾಗೂ ಸೇತುವೆಯ ಕೆಳಗಿನ ಒಂದು ಭಾಗ ಕುಸಿದು ಬಿಳುವ ಸ್ಥಿತಿಯಲ್ಲಿದೆ. ಸೇತುವೆ ಇಕ್ಕೆಡೆಗಳಲ್ಲಿ ಇರುವ ತಡೆಗೋಡೆ ವಾಹನಗಳ ಅಪಘಾತಕ್ಕೆ ಒಳಗಾಗಿ ನೇತಾಡುವ ಸ್ಥಿತಿಯಲ್ಲಿದೆ.
ಕಾಸರಗೋಡಿನಿಂದ ಬದಿಯಡ್ಕ ಮೂಲಕ ಪುತ್ತೂರು ಸೇರುವ ರಸ್ತೆ ವಿಸ್ತರಣೆಯಾಗಿ ಅಭಿವೃದ್ಧಿಯಾಗಿದೆ. ರಾಜ್ಯದ ಸುಳ್ಯಪದವಿನಿಂದ ಸುಮಾರು 600 ಮೀಟರ್ ರಸ್ತೆ ಮಾಜಿ ಶಾಸಕ ಸಂಜೀವ ಮಠಂದೂರವರ ಮುತುವರ್ಜಿಯಿಂದ ಅಭಿವೃದ್ಧಿಗೊಂಡ ಕಾಂಕ್ರೀಟ್ ರಸ್ತೆಯಾಗಿದೆ. ಇವುಗಳ ನಡುವೆ ಇರುವ ಸೇತುವೆ ಮಾತ್ರ ಅಭಿವೃದ್ಧಿಯಾಗಿಲ್ಲ. ಗಡಿಭಾಗದ ಸಾವಿರಾರು ಜನರು ನಿತ್ಯ ಈ ರಸ್ತೆಯನ್ನು ಅವಲಂಬಿಸಿದ್ದಾರೆ. ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಕೇರಳ ಭಾಗದಿಂದ ಕರ್ನಾಟಕದ ಪುತ್ತೂರು ಹಾಗೂ ಇತರ ಕಡೆಗಳಿಗೆ ಇದೇ ರಸ್ತೆಯ ಮೂಲಕ ಬರುತ್ತಿದ್ದು, ಒಂದು ವೇಳೆ ಸೇತುವೆ ಕುಸಿದು ಹೋದಲ್ಲಿ ಈ ಎಲ್ಲಾ ವ್ಯವಸ್ಥೆಗಳು ಬುಡಮೇಲು ಆಗಲಿದೆ. ಕೇರಳ ಹಾಗು ಕರ್ನಾಟಕದ ರಸ್ತೆಗಳು ಹಿರಿದಾಗಿದ್ದರೂ, ನಡುವೆ ಇರುವ ಈ ಸೇತುವೆ ಮಾತ್ರ ಕಿರಿದಾಗಿರುವ ಕಾರಣ, ಕೇರಳ ಕಡೆಯಿಂದ ಬರುವ ವಾಹನಗಳು ಸೇತುವೆ ಕಿರಿದಾದ ಕಾರಣ ಸೇತುವೆಗೆ ಡಿಕ್ಕಿ ಹೊಡೆಯುವ ಘಟನೆಗಳು ಹೆಚ್ಚಾಗಿ ನಡೆಯುತ್ತಿದೆ.
ಕೇರಳ, ನೋಂದಾಯಿತ ಎರಡು ಖಾಸಗಿ ಬಸ್ಸುಗಳು, ಗಡಿಭಾಗದ 2 ರಾಜ್ಯವನ್ನು ಸಂಧಿಸುವ ಸೇತುವೆ ಶಾಲಾ ಕಾಲೇಜುಗಳ ಸ್ಕೂಲ್ ಬಸ್ಸುಗಳು, ಈ ರಸ್ತೆಯ ಮೂಲಕ ಓಡಾಟ ನಡೆಸುತ್ತಿದೆ. ಮಾತ್ರ ಇನ್ನೂ ಅಭಿವೃದ್ಧಿಯಾಗದೆ ಕೆಲವು ಕಲ್ಲು ಸಾಟದ ಲಾರಿಗಳು, ಇತರ ವಾಹನಗಳು ದಿನನಿತ್ಯ ಸಂಚರಿಸುತ್ತಿದೆ. ಕೇರಳದಲ್ಲಿ ಮದ್ಯ ಮಾರಾಟಕ್ಕೆ ನಿಯಂತ್ರಣ ಇರುವ ಕಾರಣಕ್ಕಾಗಿ ಕೇರಳದ ಭಾಗದಿಂದ ಮದ್ಯಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಗಡಿ ದಾಟಿ ಕರ್ನಾಟಕಕ್ಕೆ ಬರುತ್ತಾರೆ. ಒಂದು ವಿಧದಲ್ಲಿ ಈ ರಸ್ತೆ ರಾಜ್ಯಕ್ಕೆ ಆದಾಯವನ್ನೂ ತರುವ ರಸ್ತೆ ಎಂದೂ ಗುರುತಿಸಲ್ಪಟ್ಟಿದೆ. ಇದರ ಜೊತೆಗೆ ಕರ್ನಾಟಕದ ಜನರು ಕೇರಳದ ಲಾಟರಿ ತೆಗೆಯಲು ಆ ಭಾಗಕ್ಕೆ ಅದೇ ಸೇತುವೆ ಮೂಲಕ ಹೋಗುತ್ತಾರೆ. ಇದರಿಂದ ಎರಡೂ ಭಾಗಕ್ಕೂ ಈ ರಸ್ತೆ ಸಂಪರ್ಕ ಕೊಂಡಿ ಆದಾಯದ ಮೂಲವಾಗಿದೆ. ಒಟ್ಟಿನಲ್ಲಿ ಇಷ್ಟೆಲ್ಲ ಆದಾಯದ ಮೂಲ ಈ ರಸ್ತೆ ಸಂಪರ್ಕಕ್ಕೆ ಇರುವಾಗ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸೇತುವೆ ಸರಿಪಡಿಸಬೇಕಿದೆ.


.jpeg)
