
ಜಾಗದ ಮೋಹಕ್ಕೆ ಸೌಜನ್ಯ ಅತ್ಯಾಚಾರ, ಕೊಲೆ...!!!
ಬೆಳ್ತಂಗಡಿ: ಜಾಗದ ವಿಚಾರಕ್ಕೆ ಸಂಬಂಧಿಸಿ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆ ನಡೆದಿದೆ ಎಂದು ಮಾಜಿ ಶಾಸಕ ವಸಂತ ಬಂಗೇರ ಸ್ಫೋಟಕ ಬಾಂಬ್ ಸಿಡಿಸಿದ್ದಾರೆ.
ಬೆಳ್ತಂಗಡಿಯಲ್ಲಿ ನಡೆದ ಜನತಾ ನ್ಯಾಯಾಲಯದ ಮುಂದೆ ಬಯಲಾದ ಹೆಗ್ಗಡೆ ಕರ್ಮಕಾಂಡ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಹೆಗಡೆ ಪರಿವಾರದಂತಹ ಜಮೀನ್ದಾರರು ಹುಟ್ಟಲೇಬಾರದು. ಬೆಳ್ತಂಗಡಿ ತಾಲೂಕಿನ ಎಲ್ಲಾ ಜಮೀನುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ನನ್ನ ತಂದೆಯೂ ಜಮೀನ್ದಾರರು ಆಗಿದ್ದವರು. ಆದ್ರೆ ಯಾರು ಯಾರ ಜಮೀನನ್ನ ವಶಪಡಿಸಿಕೊಳ್ಳಲು ನಾನು ಬಿಡಲಿಲ್ಲ. ಆ ಕಾರಣಕ್ಕಾಗಿ ನನ್ನ ಹೆಸರಿನಲ್ಲಿ ಇಂದಿಗೂ ಯಾವುದೇ ಜಮೀನಿಲ್ಲ' ಎಂದರು.
`ಇನ್ನು ರಾಜ್ಯ, ರಾಷ್ಟ್ರ ಹೆದ್ದಾರಿಗಳ ಪಕ್ಕದ ಜಮೀನುಗಳನ್ನೇ ವಶಪಡಿಸಿಕೊಳ್ಳುತ್ತಿದ್ದಾರೆ. ಬಿಟ್ಟಿಯಾಗಿ ಜಮೀನು ಸಿಕ್ಕರೆ ಆ ಪರಿವಾರಕ್ಕೆ ಭಾರೀ ಖುಷಿ. ಹಣ ಕೊಟ್ಟು ಜಮೀನು ಪಡೆದಿದ್ದರೆ ಅವರಿಗೆ ಕೊಂಚ ಬಿಸಿ. ಇಂತಹ ಜಮೀನ್ದಾರಿಕೆಯನ್ನು ನಾವು ವಿರೋಧಿಸಲೇಬೇಕು. ವಿರೋಧಿಸದೇ ಇದ್ದಲ್ಲಿ ಇಂತಹ ಘಟನೆಗಳು ನಡೆಯುತ್ತದೆ. ಸೌಜನ್ಯ ಪ್ರಕರಣವೂ ಇದೇ ಕಾರಣಕ್ಕೆ ನಡೆದಿರುವುದು. ಸೌಜನ್ಯ ಕೊಲೆ ನಡೆದಿರುವುದೂ ಕೂಡ ಜಾಗದ ವಿಚಾರಕ್ಕೆ' ಎಂದು ಧರ್ಮಸ್ಥಳ ಹೆಗ್ಗಡೆ ಪರಿವಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಇನ್ನು ಮಾಜಿ ಶಾಸಕ ವಸಂತ ಬಂಗೇರ ಅವರ ಈ ಹೇಳಿಕೆ ಎಷ್ಟು ಸರಿ ಎಷ್ಟು ತಪ್ಪು ಅನ್ನೋದನ್ನ ಕಾಲವೇ ಉತ್ತರಿಸಬೇಕಿದೆ. ಆದ್ರೆ ಕರಾವಳಿಯಲ್ಲಿ ಮಾತ್ರ ವಸಂತ ಬಂಗೇರ ಅವರ ಈ ಹೇಳಿಕೆ ಸಂಚಲನ ಸೃಷ್ಟಿಸಿದೆ.