ಉಡುಪಿ: ಹಲ್ಲೆ ಆರೋಪಿಯನ್ನು ರಕ್ಷಿಸಿದರೆ ಬಿಜೆಪಿಯಿಂದ ಉಗ್ರ ಪ್ರತಿಭಟನೆ: ರವಿ ಸಾಲ್ಯಾನ್ ಎಚ್ಚರಿಕೆ!
Saturday, June 10, 2023
ಉಡುಪಿ: ಯುವಕನೋರ್ವನ ಮೇಲೆ ಹಲ್ಲೆ ನಡೆಸಿದ ಪ್ರಮುಖ ಆರೋಪಿಯನ್ನು ಪೊಲೀಸರು ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದು, ಕೂಡಲೇ ಬಂಧಿಸದಿದ್ದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಉಗ್ರವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಉದ್ಯಾವರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿ ಸಾಲ್ಯಾನ್ ಪಡುಕೆರೆ ಎಚ್ಚರಿಕೆ ನೀಡಿದ್ದಾರೆ.
ಇಲ್ಲಿನ ಉದ್ಯಾವರ ಗರೋಡಿ ರಸ್ತೆಯ ಸಮೀಪ ಮನೆಗೆ ಅಕ್ರಮವಾಗಿ ನುಗ್ಗಿ ರಮೇಶ್ ಕೋಟ್ಯಾನ್ ಎಂಬವರ ಪುತ್ರ ರಕ್ಷಿತ್ ಕೋಟ್ಯಾನ್ ಗೆ ಕಿಡಿಗೇಡಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಘಟನೆ ಸಂಬಂಧ ಕಿಡಿಗೇಡಿಗಳನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸ್ ವಿಚಾರಣೆಯ ಸಮಯದಲ್ಲಿ ಹಲ್ಲೆಗೆ ಕುಮ್ಮಕ್ಕು ನೀಡಿದ ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯನ ಹೆಸರನ್ನು ಸಂತ್ರಸ್ತನು ಉಲ್ಲೇಖ ಮಾಡಿದ್ದು, ಆದರೆ ಪೊಲೀಸರು ಪ್ರಮುಖ ಅರೋಪಿಯನ್ನು ಬಂಧಿಸುವಲ್ಲಿ ಮೀನ ಮೇಷ ಮಾಡುತ್ತಿದ್ದಾರೆ. ಇದು ಖಂಡನಾರ್ಹವಾಗಿದೆ. ತಕ್ಷಣ ಪ್ರಮುಖ ಅರೋಪಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿರುವ ರವಿ ಸಾಲ್ಯಾನ್ ಪಡುಕೆರೆ, ಇಲ್ಲವಾದಲ್ಲಿ ಬಿಜೆಪಿ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.