ಅಲ್ಪಸಂಖ್ಯಾತರ ಕುರಿತು ಕಾಂಗ್ರೆಸ್, ಬಿಜೆಪಿ ಅಹಂಕಾರ ಮನೋಭಾವ ಹೊಂದಿದೆ: ಉಮಾನಾಥ ಕೋಟ್ಯಾನ್ ಟೀಕೆ
ಕಿನ್ನಿಗೋಳಿ: ಅಲ್ಪಸಂಖ್ಯಾತ ಕ್ರೈಸ್ತ ಹಾಗೂ ಮುಸ್ಲಿಂ ಸಮುದಾಯದ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಒಂದು ರೀತಿ ಅಹಂಕಾರ ಮನೋಭಾವ ಹೊಂದಿದೆ ಎಂದು ಮುಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ವಾಗ್ದಾಳಿ ನಡೆಸಿರುವ ವೀಡಿಯೋ ವೈರಲ್ ಆಗಿದೆ.
ಕಿನ್ನಿಗೋಳಿಯ ಸಮುದಾಯ ಭವನವೊಂದರಲ್ಲಿ ಮುಸ್ಲಿಮ್ ಸಮುದಾಯದವರ ಜೊತೆಗಿನ ಸಭೆ ವೇಳೆ ಶಾಸಕರು ಖುದ್ದು ಸ್ವಪಕ್ಷದ ಬಗ್ಗೆಯೂ ಟೀಕಿಸಿ ಅಚ್ಚರಿ ಮೂಡಿಸಿದರು.
“ಕಾಂಗ್ರೆಸ್ ಪಕ್ಷವು ಮುಸಲ್ಮಾನರು ಮತ್ತು ಕ್ರೈಸ್ತರು ನಮಗೆ ವೋಟ್ ನೀಡದೇ ಅವರ ಅಪ್ಪಂದಿರಿಗೆ ನೀಡ್ತಾರ? ಅನ್ನೋ ಅಹಂಕಾರ ಹೊಂದಿದೆ. ಆ ಪಕ್ಷವು ಅಲ್ಪಸಂಖ್ಯಾತರನ್ನು ಕೂಲಿಯಾಳುಗಳಂತೆ ನೋಡ್ತಿದೆ. ನಮ್ಮವರಿಗೆ (ಬಿಜೆಪಿ ಪಕ್ಷದವರಿಗೆ) ನಮಗೆ ವೋಟ್ ನೀಡದ ಮುಸಲ್ಮಾನರ ಕೆಲಸ ಯಾಕೆ ಮಾಡಬೇಕು ಅನ್ನೋ ಅಹಂಕಾರ ಇದೆ. ಹೀಗೆ ಎರಡೂ ಪಕ್ಷಗಳು ಕ್ರೈಸ್ತರು ಹಾಗೂ ಮುಸಲ್ಮಾನರ ಕುರಿತು ಇಂತಹ ಅಹಂಕಾರ ಭಾವ ಹೊಂದಿದೆ. ಈ ಎರಡಕ್ಕೂ ನಾನು ವಿರೋಧಿಯಾಗಿ ಕೆಲಸ ಮಾಡಿದ್ದೇನೆ ಎಂದರು.
“ನೀವು ಯಾವುದೇ ಪಕ್ಷದಲ್ಲಿ ಬೇಕಿದ್ರೆ ಇರಿ, ಆದ್ರೆ ಕೆಲಸ ಮಾಡುವವರನ್ನು ಸಪೋರ್ಟ್ ಮಾಡಿ. ನನ್ನ ಐದು ವರ್ಷದ ಅವಧಿಯಲ್ಲಿ ನಾನು ಯಾವುದೇ ಕೋಮು ಗಲಭೆ, ಕೋಮು ಭಾಷಣ ಮಾಡಿದ್ರೆ ಹೇಳಿ. ನಾನು ಯಾವತ್ತೂ ಭೇದ ಮಾಡದೇ ಸಮಾನವಾಗಿ ಕೆಲಸ ಮಾಡಿದ್ದೇನೆ. ದುಡಿದವನಿಗೆ ಸಂಬಳ ಕೊಡುವುದು ನಮ್ಮ ಜವಾಬ್ದಾರಿ, ಹಾಗಾಗಿ ನನ್ನ ಐದು ವರ್ಷದ ದುಡಿಮೆಗೆ ಧೈರ್ಯದಿಂದ ಸಂಬಳ ಕೊಡಿ ಎಂದು ಕೇಳುತ್ತಿದ್ದೇನೆ”ಎಂದು ಮಾರ್ಮಿಕವಾಗಿ ನುಡಿದರು.
ಸದ್ಯ ಈ ವೀಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಭೆಯಲ್ಲಿ ನೂರಕ್ಕೂ ಅಧಿಕ ಮುಸ್ಲಿಂ ಯುವಕರು ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.
ವೀಡಿಯೋ ವೀಕ್ಷಿಸಿ