ರಾಯಿ ಅನೈತಿಕ ಪೊಲೀಸ್ ಗಿರಿ ಪ್ರಕರಣ; ಮೂವರು ಆರೋಪಿಗಳು ಅರೆಸ್ಟ್
ಮಂಗಳೂರು: ಬಂಟ್ವಾಳದ ರಾಯಿಯಲ್ಲಿ ನಡೆದ ಅನೈತಿಕ ಪೊಲೀಸ್ ಗಿರಿ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದಾಗಿ ದಕ್ಷಿಣ ಕನ್ನಡ ಎಸ್ಪಿ ಋಷಿಕೇಶ್ ಸೋನಾವಣೆ ತಿಳಿಸಿದ್ದಾರೆ.
ಮನೋಹರ್, ಚೇತನ್ ಹಾಗೂ ಕಿಶೋರ್ ಬಂಧಿತ ಆರೋಪಿಗಳು. ಇವರೆಲ್ಲರೂ ಸ್ಥಳೀಯ ಸಂಘ ಪರಿವಾರದ ಕಾರ್ಯಕರ್ತರು ಎನ್ನಲಾಗಿದೆ.
ಬುಧವಾರ ಬಂಟ್ವಾಳದಿಂದ ಮೂಡಬಿದ್ರಿಗೆ ಖಾಸಗಿ ಬಸ್ ನಲ್ಲಿ ತೆರಳುವ ವೇಳೆ ರಾಯಿ ಬಳಿ ಇಸಾಕ್ ಎಂಬವರನ್ನು ಮಹಿಳೆಗೆ ಕಿರುಕುಳ ನೀಡಿದ್ದಾಗಿ ಆರೋಪಿಸಿ ಬಸ್ ನಿಂದ ಕೆಳಗಿಳಿಸಿದ್ದ ಬಸ್ಸಿನ ಕಂಡೆಕ್ಟರ್ ಹಿಂದುತ್ವ ಸಂಘಟನೆ ಕಾರ್ಯಕರ್ತರ ಕೈಗೆ ಒಪ್ಪಿಸಿದ್ದಾನೆ ಎನ್ನಲಾಗಿದೆ. ಬಳಿಕ ರಾಯಿಯಲ್ಲಿರುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ತಂಡವು ಇಸಾಕ್ ಅವರನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಗುರುವಾರ ಘಟನೆ ಬೆಳಕಿಗೆ ಬರುತ್ತಲೇ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಇದೀಗ ಎಚ್ಚೆತ್ತುಕೊಂಡ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.
ಗಾಯಾಳು ಇಸಾಕ್ ಅವರಿಗೆ ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಕುರಿತು ಮುಸ್ಲಿಮ್ ಮುಖಂಡರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರತೀಕಾರದ ಸಂದೇಶಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.