ಜಲೀಲ್ ಹತ್ಯೆ ಪ್ರಕರಣ: ಸೂಕ್ತ ತನಿಖೆ, ಪರಿಹಾರಕ್ಕೆ ಆಗ್ರಹಿಸಿ ಸಿಎಂ, ಗೃಹ ಸಚಿವರ ಬಳಿಗೆ ಮುಸ್ಲಿಮ್ ಮುಖಂಡರ ನಿಯೋಗ
ಮಂಗಳೂರು: ಇತ್ತೀಚೆಗೆ ನಡೆದ ಜಲೀಲ್ ಕೃಷ್ಣಾಪುರ ಹತ್ಯೆ ಪ್ರಕರಣ ಸಂಬಂಧ ಸೂಕ್ತ ಪರಿಹಾರ, ತನಿಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಗೆ ಬೇಕಾದ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ, ಗೃಹ ಸಚಿವ, ವಿಪಕ್ಷ ನಾಯಕ ಹಾಗೂ ಉಪನಾಯಕರನ್ನು ಜಿಲ್ಲೆಯ ಮುಸ್ಲಿಂ ಮುಖಂಡರ ನಿಯೋಗವು ಭೇಟಿಯಾಗಿ ಚರ್ಚಿಸಿತು.
ಬೆಳಗಾವಿ ಅಧಿವೇಶನ ಸಮಯದ ಬಿಡುವಿನ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,
ಗೃಹ ಸಚಿವ ಆರಗ ಜ್ಞಾನೇಂದ್ರ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ವಿಪಕ್ಷ ಉಪನಾಯಕ ಯುಟಿ ಖಾದರ್ ಅವರನ್ನು
ಭೇಟಿಯಾದ ನಿಯೋಗವು ಜಲೀಲ್ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸುವಂತೆ ಮನವಿ ಸಲ್ಲಿಸಿದರು.
ಅಲ್ಲದೇ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಹಾಗೂ ದಕ್ಷಿಣ ಕನ್ನಡ
ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಬೇಕಾದ ಕಾನೂನು ಕ್ರಮ ಜಾರಿಗೊಳಿಸುವಂತೆ ಒತ್ತಾಯಿಸಿದರು.
ನಿಯೋಗದಲ್ಲಿ ಮೂಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ದಕ್ಷಿಣ
ಕನ್ನಡ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್, ಉಪಾಧ್ಯಕ್ಷ ಅದ್ದು ಕೃಷ್ಣಾಪುರ, ಕಾರ್ಯದರ್ಶಿ
ಸಿಎಂ ಮುಸ್ತಫ ಉಪಸ್ಥಿತರಿದ್ದರು.