ಮುಲ್ಕಿ: ಅಪ್ರಾಪ್ತ ಬಾಲಕಿ ಮುಂದೆ ಅಸಭ್ಯ ವರ್ತನೆ ಆರೋಪ; ಯುವಕನನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಗುಂಪು!
ಮಂಗಳೂರು:
ಅಪ್ರಾಪ್ತ ಬಾಲಕಿಯೋರ್ವಳ ಮುಂದೆ ಅಶ್ಲೀಲವಾಗಿ ವರ್ತಿಸಿದ ಭಿನ್ನ ಕೋಮಿನ ಯುವಕನನ್ನು ಗುಂಪೊಂದು ಕಂಬಕ್ಕೆ ಕಟ್ಟಿ
ಹಾಕಿ ಹಲ್ಲೆ ನಡೆಸಿದ ಘಟನೆ ಮುಲ್ಕಿ ಠಾಣಾ ವ್ಯಾಪ್ತಿಯ ಕೆರೆಕಾಡುವಿನಲ್ಲಿ ನಡೆದಿದೆ.
ಡಿಸೆಂಬರ್
13 ರಂದು ಕೆರೆಕಾಡು ಪ್ರದೇಶದಲ್ಲಿ ಆಗಮಿಸಿದ್ದ ಆರೋಪಿ ಹಳೆಯಂಗಡಿಯ ಕೊಪ್ಪಳ ನಿವಾಸಿ ದಾವೂದ್ ಅಲ್ಲಿದ್ದ
ಅಪ್ರಾಪ್ತ ಬಾಲಕಿ ಮುಂದೆ ಅಶ್ಲೀಲವಾಗಿ ವರ್ತಿಸಿದ್ದ ಎನ್ನಲಾಗಿದೆ. ಈ ವಿಚಾರವನ್ನ ಬಾಲಕಿ ತನ್ನ ತಂದೆಗೆ
ತಿಳಿಸಿದ್ದು, ತಂದೆ ಹಾಗೂ ಅವರ ಸ್ನೇಹಿತರು ಶನಿವಾರ ಮಧ್ಯಾಹ್ನ ಮತ್ತೆ ಈ ವ್ಯಕ್ತಿಯನ್ನು ಕಂಡಿದ್ದು,
ಬಾಲಕಿಯನ್ನ ಬೈಕ್ ನಲ್ಲಿ ಫಾಲೋ ಮಾಡಿಕೊಂಡ ಬಂದ ದಾವೂದ್ ಮತ್ತೆ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.
ತಕ್ಷಣವೇ ಹಿಂದೂ ಸಂಘಟನೆ ಕಾರ್ಯಕರ್ತರು ದಾವೂದ್ ನನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ
ಎನ್ನಲಾಗಿದೆ.
ಈ ಕುರಿತು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಇತ್ತಂಡಗಳು ಪ್ರಕರಣ ದಾಖಲಿಸಲಾಗಿದ್ದು, ಬಾಲಕಿಯ ಪೋಷಕರು ನೀಡಿದ ದೂರಿನನ್ವಯ ಆರೋಪಿ ದಾವೂದ್ ಮೇಲೆ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ಇನ್ನು ಹಲ್ಲೆಗೊಳಗಾದ ದಾವೂದ್ ನೀಡಿದ ದೂರಿನನ್ವಯ ಹಲ್ಲೆ ನಡೆಸಿದ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ನೈತಿಕ ಪೊಲೀಸ್
ಗಿರಿಗೆ ಬೆಚ್ಚಿ ಬಿದ್ದ ಕರಾವಳಿ
ಆರಂಭದಲ್ಲಿ ದಾವೂದ್ ಮೇಲೆ ದನ ಸಾಗಾಟ ವಿಚಾರದಲ್ಲಿ ಹಲ್ಲೆ ನಡೆದಿದೆ ಎಂದು ಸಂದೇಶ ವೈರಲ್ ಆಗಿದ್ದು, ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಅಲ್ಲದೇ, ಮುಸ್ಲಿಂ ಯುವಕರ ಗುರಿಯಾಗಿಸಿ ನಿರಂತರ ದಾಳಿ ನಡೆಯುತ್ತಿದ್ದು, ಹಿಂದೂ ಸಂಘಟನೆಗಳ ಕಾರ್ಯಕರ್ತರ ಅನೈತಿಕ ಪೊಲೀಸ್ ಗಿರಿ ಮಟ್ಟ ಹಾಕುತ್ತಿಲ್ಲ ಅನ್ನೋ ಕುರಿತು ಆಕ್ರೋಶ ಕೇಳಿ ಬಂತು. ಆದರೆ, ಅಪ್ರಾಪ್ತ ಬಾಲಕಿಗೆ ಕಿರುಕುಳ ವಿಚಾರ ತಿಳಿಯುತ್ತಲೇ ಮುಸ್ಲಿಂ ಸಮುದಾಯದ ಮುಖಂಡರು ಚರ್ಚೆಗೆ ವಿರಾಮ ಹಾಕಿದ್ದಾರೆ.
ಜಾಲತಾಣದಲ್ಲಿ
ಆಸಿಫ್ ಆಪತ್ಬಾಂಧವ ಮನವಿ
ಇದಾದ ಬೆನ್ನಿಗೇ
ಅನಗತ್ಯ ಪ್ರಚೋದನಕಾರಿ ಸಂದೇಶ ತಪ್ಪಿಸುವ ನಿಟ್ಟಿನಲ್ಲಿ ಸಾಮಾಜಿಕ ಕಾರ್ಯಕರ್ತ ಆಸಿಫ್ ಆಪತ್ಬಾಂಧವ
ಆಡಿಯೋ ಸಂದೇಶ ರವಾನಿಸಿದ್ದು, ನೈತಿಕ ಪೊಲೀಸ್ ಗಿರಿ ನಡೆದಿರುವುದು ತಪ್ಪಾದರೂ, ಘಟನೆ ಬಗ್ಗೆ ಸತ್ಯಾಸತ್ಯತೆ
ತಿಳಿಯದೇ ಮಾತನಾಡುವುದು ಕೂಡಾ ಅಷ್ಟೇ ತಪ್ಪು. ಹಲ್ಲೆಗೊಳಗಾದ ವ್ಯಕ್ತಿ ಪುಟ್ಟ ಬಾಲಕಿ ಜೊತೆ ಅಸಭ್ಯವಾಗಿ
ವರ್ತಿಸಿದ್ದರಿಂದ ಈ ಹಲ್ಲೆ ನಡೆದಿದೆ. ಇದಕ್ಕೆ ಯಾವೊಬ್ಬ ಮುಸಲ್ಮಾನನೂ ಬೆಂಬಲಿಸಬಾರದು. ಮುಸ್ಲಿಂ
ಸಮುದಾಯ ಇಂತಹ ಅಸಭ್ಯ ವರ್ತನೆ ವಿರುದ್ಧ ನಿಂತು ಕೆಡುಕಿನ ವಿರುದ್ಧ ಪ್ರವಾದಿ ಮಾದರಿಯ ಹೋರಾಟ ಮಾಡಬೇಕಿದೆ
ಎಂದು ಮುಸ್ಲಿಮರಿಗೆ ಕರೆ ನೀಡಿದ್ದಾರೆ.