ಮಂಗಳೂರು: ಗಾಂಜಾ, ಮರಳು ವ್ಯಾಪಾರಿಗಳ ಲಾಭಕ್ಕಾಗಿ ಯುಟಿ ಖಾದರ್ ಗೆಲ್ಲಿಸಬೇಕೆ!?: ಮುಸ್ಲಿಮರ ಆಕ್ರೋಶ!
ಮಂಗಳೂರು: ಮುಡಿಪುವಿನಲ್ಲಿ ಬೀಫ್ ಇದೆ ಎಂಬ ಕಾರಣಕ್ಕಾಗಿ ಹೊಟೇಲ್ ಮೇಲೆ ದಾಳಿ ನಡೆಸಿದ ಪ್ರಕರಣ ಸಂಬಂಧ ಮಾಜಿ ಸಚಿವ, ಮಂಗಳೂರು ಶಾಸಕ ಯುಟಿ ಖಾದರ್ ವಿರುದ್ಧ ಜಾಲತಾಣದಲ್ಲಿ ಮುಸ್ಲಿಮರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಜಾಲತಾಣದಲ್ಲಿ ನಿರಂತರ ವಾಗ್ದಾಳಿ ನಡೆಸಿರುವ ಆ ಭಾಗದ ಮಂದಿ, ಯುಟಿ ಖಾದರ್ ಗೆಲ್ಲಿಸಿ ಆಗಬೇಕಾದದ್ದು ಏನೂ ಇಲ್ಲ. ಅದಕ್ಕಿಂತ ಸೋಲಿಸುವುದು ಲೇಸು ಎಂದು ಮಾತನಾಡಿದ್ದಾರೆ. ಯುಟಿ ಖಾದರ್ ಬೆಂಬಲಿಗರು ರಾಜಕಾರಣ ಮಾಡುವುದಕ್ಕಿಂತ ಗೊಬ್ಬರ ತುಂಬುವುದು ಒಳ್ಳೆಯದು. ರಾಜ್ಯದಲ್ಲಿ ಗೋಹತ್ಯೆಗಷ್ಟೇ ನಿಷೇಧವಿದ್ದು, ಬೀಫ್ ಸೇವನೆಗಲ್ಲ. ಅಲ್ಲಿಗೆ ಬಜರಂಗದಳ ಹಾಗೂ ಪೊಲೀಸರು ದಾಳಿ ನಡೆಸಿ ಹೊಟೇಲ್ ಮಾಲಿಕರನ್ನು ಬಂಧಿಸಿದ್ದಾರೆ. ಈ ಬಗ್ಗೆ ಒಬ್ಬರು ಖಂಡನಾ ಹೇಳಿಕೆ ನೀಡಿಲ್ಲ.
ಒಬ್ಬ ಮುಸ್ಲಿಮ್ ಶಾಸಕನಿದ್ದು ಅವರನ್ನು ಸೋಲಿಸಬೇಡಿ ಎನ್ನುತ್ತಾರೆ. ಆದರೆ ಅವರನ್ನು ಗೆಲ್ಲಿಸಿ ಏನಾಗಬೇಕು? ಅವರ ಲಾಭಕ್ಕಾಗಿ ಗೆಲ್ಲಿಸಬೇಕೆ? ವೋಟ್ ಹಾಕಿದವನಿಗೆ ಯಾವುದೇ ಲಾಭ ಇಲ್ಲ. ದೋ ನಂಬರ್ ವ್ಯಾಪಾರ ಮಾಡಲಿಕ್ಕಾಗಿ ಗೆಲ್ಲಿಸಬೇಕ? ಗಾಂಜಾ, ಮರಳು ಬ್ಯುಸಿನೆಸ್ ಮಾಡುವವರ ಲಾಭಕ್ಕಾಗಿ ಯುಟಿ ಖಾದರ್ ಗೆಲ್ಲಿಸಬೇಕೆ? ಎಂದು ಮತದಾರನೊಬ್ಬ ಆಕ್ರೋಶ ವ್ಯಕ್ತಪಡಿಸಿರುವ ಆಡಿಯೋ ವೈರಲ್ ಆಗಿದೆ.
ಇದು ಮಾತ್ರವಲ್ಲದೇ ಸ್ವತಃ ಕಾಂಗ್ರೆಸ್ ಕಾರ್ಯಕರ್ತರೇ ಯುಟಿ ಖಾದರ್ ವಿರುದ್ಧ ತಿರುಗಿ ಬಿದ್ದ ಹತ್ತಾರು ಆಡಿಯೋಗಳು ಜಾಲತಾಣದಲ್ಲಿ ವೈರಲ್ ಆಗಿದ್ದು, ಚುನಾವಣೆ ಹತ್ತಿರವಾಗುತ್ತಿದ್ದಂತೆ ಯುಟಿ ಖಾದರ್ ಗೆ ಮುಳುವಾಗುವ ಸಾಧ್ಯತೆ ಇದೆ ಎಂದು ರಾಜಕೀಯ ಚರ್ಚೆ ಆರಂಭವಾಗಿದೆ.
ಸಮಾನ ಮನಸ್ಕರ ಸಭೆ
ಮುಡಿಪು ಘಟನೆ ಹಾಗೂ ಈ ಹಿಂದೆ ಹಿಜಾಬ್ ವಿಚಾರದಲ್ಲಿ ಮುಸ್ಲಿಮ್ ಹುಡುಗಿಯರ ವಿರುದ್ಧ ವಿವಾದಾತ್ಮಕ ಹೇಳಿಕೆ ಹೀಗೆ ಹಲವು ವಿಚಾರಗಳ ಕುರಿತು ಶೀಘ್ರದಲ್ಲೇ ಉಳ್ಳಾಲದಲ್ಲಿ ಸಮಾನ ಮನಸ್ಕ ಮುಸ್ಲಿಮರು ಸಭೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಭೆಯಲ್ಲಿ ಯುಟಿ ಖಾದರ್ ಬೆಂಬಲಿಸಬೇಕೆ? ಬೇಡವೇ? ಅಥವಾ ಪರ್ಯಾಯವೇನು? ಅನ್ನೋದರ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.