VHP ಅರ್ಜಿ ಪುರಸ್ಕಾರ| ಮಳಲಿಯಲ್ಲಿ ಬೃಹತ್ ದೇಗುಲಕ್ಕೆ ತಯಾರಿ: ಶರಣ್ ಪಂಪ್ವೆಲ್
ಮಂಗಳೂರು: ಮಳಲಿ ಮಸೀದಿ ಕಮಿಟಿಯ ಅರ್ಜಿ ವಜಾಗೊಳಿಸಿದ ಬೆನ್ನಿಗೆ ವಿಶ್ವ ಹಿಂದೂ ಪರಿಷತ್ ತನ್ನ ಮಂಗಳೂರು ನಗರದಲ್ಲಿರುವ ವಿಹಿಂಪ ಕಚೇರಿ ಮುಂಭಾಗ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿತು.
ಇದೇ ಸಂದರ್ಭ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ವಿಹಿಂಪ ನಾಯಕ ಶರಣ್ ಪಂಪ್ವೆಲ್, ಮಳಲಿ ಮಸೀದಿ ಕಮಿಟಿಯ ವಕ್ಫ್ ಆಸ್ತಿಯೆಂಬ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಇದು ಹಿಂದುಗಳಿಗೆ ಸಂದ ಜಯ. ಅಲ್ಲಿ ದೇವಸ್ಥಾನದ ಚಿತ್ರಣ ಇದ್ದ ಕಾರಣಕ್ಕೆ ನವೀಕರಣಕ್ಕೆ ತಡೆ ತಂದಿದ್ದೆವು. 800 ವರ್ಷಗಳ ಹಿಂದಿನ ದೇವಸ್ಥಾನ, ಪುರಾತತ್ವ ಇಲಾಖೆಯಿಂದ ಸರ್ವೆ ನಡೆಸಲು ಕೋರಿದ್ದೆವು. ಅದರಂತೆ ಮಂಗಳೂರಿನ ಕೋರ್ಟ್ ತೀರ್ಪು ನೀಡಿದ್ದು ಮಸೀದಿ ಅರ್ಜಿಯನ್ನು ವಜಾ ಮಾಡಿದೆ. ನಮ್ಮ ಅಹವಾಲನ್ನು ಎತ್ತಿ ಹಿಡಿದಿದೆ, ದೇವಸ್ಥಾನ ಅನ್ನುವ ವಾದಕ್ಕೆ ಪುಷ್ಟಿ ಸಿಕ್ಕಿದೆ ಎಂದರು.
ಅಲ್ಲದೇ, ಆ ಜಾಗದಲ್ಲಿ ಬೃಹತ್ ದೇವಸ್ಥಾನ ನಿರ್ಮಾಣಕ್ಕೆ ತಯಾರಿ ಮಾಡುತ್ತೇವೆ. ಅಷ್ಟಮಂಗಳ ಪ್ರಶ್ನೆ ಇಟ್ಟು ಮುಂದಿನ ನಿರ್ಧಾರ ಮಾಡುತ್ತೇವೆ ಎಂದಿದ್ದಾಗಿ.
ಸುದ್ದಿಗೋಷ್ಟಿಯಲ್ಲಿ ಪುನೀತ್ ಅತ್ತಾವರ, ಭುಜಂಗ ಕುಲಾಲ್ ಉಪಸ್ಥಿತರಿದ್ದರು.
ಡಿಸಿಪಿ ಭೇಟಿ: ನ್ಯಾಯಾಲಯ ತೀರ್ಪು ಬರುತ್ತಲೇ ವಿವಾದಿತ ಮಸೀದಿ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಡಿಸಿಪಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತು ಒದಗಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.