ಉಡುಪಿ: ಬಿಜೆಪಿಯ ಕಾರ್ಯಕರ್ತನಿಗೂ ತಟ್ಟಿದ ಧರ್ಮ ದಂಗಲ್ ಬಿಸಿ; ಜ್ಯೂಸ್ ಅಂಗಡಿ ತೆರವು!
ಉಡುಪಿ: ಇಲ್ಲಿನ
ಉದ್ಯಾವರದ ಮಾಂಗೋಡು ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಅಂಗಡಿ ಹಾಕಿದ್ದ
ಸ್ಥಳೀಯ ಬಿಜೆಪಿ ಕಾರ್ಯಕರ್ತನಿಗೂ ಧರ್ಮ ದಂಗಲ್ ಬಿಸಿ ತಟ್ಟಿದೆ. ಜಾತ್ರೆಯಲ್ಲಿ ಜ್ಯೂಸ್ ಅಂಗಡಿ ಹಾಕಿದ್ದ
ಆರೀಫ್ ಎಂಬ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಮುಖಂಡನ ಅಂಗಡಿಯನ್ನು ತೆರವುಗೊಳಿಸುವಂತೆ ಹಿಂದೂ ಸಂಘಟನೆಯು
ಎಚ್ಚರಿಕೆ ನೀಡಿದ ಹಿನ್ನೆಲೆ ಅಂಗಡಿ ಖಾಲಿ ಮಾಡಿಕೊಂಡು ಹೋದ ಘಟನೆ ನಡೆದಿದೆ.
ಸೋಮವಾರ ಸಂಜೆ
ಅಂಗಡಿ ಹಾಕಿದ್ದ 9 ಮಂದಿ ಮುಸ್ಲಿಂ ವ್ಯಾಪಾರಿಗಳನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಸ್ಥಳದಿಂದ ತೆರವುಗೊಳಿಸಿದ್ದರು.
ಆದರೆ ಸ್ಥಳೀಯ ಬಿಜೆಪಿ ಮುಖಂಡನೂ, ರಾಮ್ ಧೂತ್ ವ್ಯಾಯಾಮ ಶಾಲೆಯ ಸದಸ್ಯನೂ ಆಗಿರುವ ಆರೀಪ್ ಕೂಡಾ ತನ್ನ
ಜ್ಯೂಸ್ ಅಂಗಡಿ ಇರಿಸಿದ್ದರು. ಸೋಮವಾರ ಸಂಜೆ ಮುಸ್ಲಿಮರ
ಅಂಗಡಿ ತೆರವುಗೊಳಿಸುವ ವೇಳೆ ಆರಿಫ್ ಹಾಗೂ ಇತರೆ ಸದಸ್ಯರು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಜೊತೆಗೆ
ಜಟಾಪಟಿಗೆ ಇಳಿದಿದ್ದರು. ಹೀಗಾಗಿ ಅಲ್ಲಿಂದ ತೆರಳಿದ್ದ ಜಾಗರಣ ಕಾರ್ಯಕರ್ತರು ಮಂಗಳವಾರ ಬೆಳಿಗ್ಗೆ
ತನಕ ಸಮಯ ನೀಡಿದ್ದರು. ಇಲ್ಲದೇ ಹೋದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿ ಆರೀಫ್ ಗೆ
ಸಂಬಂಧಿಸಿದ್ದ ಜ್ಯೂಸ್ ಅಂಗಡಿ ತೆರವು ಮಾಡಲು ಮುಂದಾಗಿದ್ದರು ಎನ್ನಲಾಗಿದೆ.
ಅಪಾಯ ಅರಿತ ಆರೀಫ್ ಇಂದು ಮುಂಜಾನೆಯೇ ಅಂಗಡಿ ಖಾಲಿ ಮಾಡಿ ಹೋಗಿದ್ಧಾರೆ ಎಂದು ಸ್ಥಳೀಯರು ತಿಳಿಸಿದ್ಧಾರೆ.
