Uchila: 'ಬ್ಲ್ಯೂ ವೇವ್ಸ್' ಅಪಾರ್ಟ್ ಮೆಂಟ್ ಕರ್ಮಕಾಂಡ; ಶಾಸಕ ಲಾಲಾಜಿ ಸ್ಪಂದನೆ
ಉಡುಪಿ: ಇಲ್ಲಿನ ಕಾಪು ತಾಲೂಕಿನ ಉಚ್ಚಿಲ ಪೇಟೆಯಲ್ಲಿರುವ 'ಬ್ಲೂ ವೇವ್ಸ್' ಅಪಾರ್ಟ್ ಮೆಂಟ್ ಅವ್ಯವಸ್ಥೆ ಆಗರದಿಂದ ಕೂಡಿದ್ದು, ಇಡೀ ಉಚ್ಚಿಲ ಪರಿಸರಕ್ಕೆ ರೋಗ ಭೀತಿ ಎದುರಿಸುವಂತೆ ಮಾಡಿದೆ. ಈ ಕುರಿತಂತೆ 'ದಿ ನ್ಯೂಸ್ ಅವರ್' ವಿಶೇಷ ವರದಿಯನ್ನು ಪ್ರಕಟಿಸಿತ್ತು.
ವರದಿ ಪ್ರಕಟವಾದ ಬಳಿಕ ಅಪಾರ್ಟ್ ಮೆಂಟ್ ಮಾಲಿಕರು ಸಮಸ್ಯೆ ಸರಿಪಡಿಸುವ ಭರವಸೆ ನೀಡಿದ್ದರು. ಇದೀಗ ಅಪಾರ್ಟ್ ಮೆಂಟ್ ನಿಂದಾಗಿ ಆಗಿರುವ ಅವ್ಯವಸ್ಥೆಯ ಬಗ್ಗೆ ಶಾಸಕರಿಗೂ ದೂರಿತ್ತ ಹಿನ್ನೆಲೆ, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅಧಿಕಾರಿಗಳ ಜೊತೆ ಭೇಟಿ ನೀಡಿದರು.
ಈ ಸಂದರ್ಭ ಕಸ ವಿಲೇವಾರಿ, ನೀರಿನ ಅವ್ಯವಸ್ಥೆ ಬಗ್ಗೆ ಪರಿಶೀಲಿಸಿದರು. ಖಾಸಗಿ ಕಟ್ಟಡವಾದ್ದರಿಂದ ಅಪಾರ್ಟ್ ಮೆಂಟ್ ಒಳಗಿನ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಿ ಎಂದು ಫ್ಲ್ಯಾಟ್ ನಿವಾಸಿಗಳಿಗೆ ತಿಳಿಸಿದ್ದಾರೆ.
ಸೊಸೈಟಿ ರಚನೆ, ಡ್ರೈನೇಜ್, ನೀರು, ಕಸ ವಿಲೇವಾರಿ ಮುಂತಾದ ಅವ್ಯವಸ್ಥೆ ಬಗ್ಗೆಯೂ ಫ್ಲ್ಯಾಟ್ ನಿವಾಸಿಗಳು ಶಾಸಕರ ಜೊತೆ ಮಾತನಾಡಿದರು. ಸಂಬಂಧಪಟ್ಟವರ ಜೊತೆ ತಾನು ಮಾತಾಡುವುದಾಗಿ ಶಾಸಕರು ಈ ಸಂದರ್ಭ ಭರವಸೆ ನೀಡಿದ್ದಾರೆ. ಅಲ್ಲದೇ, ಅಪಾರ್ಟ್ ಮೆಂಟ್ ನಲ್ಲಿ 4 ಮಹಡಿಗಳಿಗಷ್ಟೇ ಅನುಮತಿಯಿದ್ದು, ಉಳಿದಂತೆ 2 ಅಂತಸ್ತಿಗೆ ಯಾವುದೇ ಲೈಸೆನ್ಸ್ ಇಲ್ಲ ಎನ್ನುವುದು ಗಮನಕ್ಕೆ ಬಂದಿದೆ. ಇದರ ಬಗ್ಗೆಯೂ ಕ್ರಮ ಕೈಗೊಳ್ಳಲು ಸ್ಥಳೀಯ ಪಂಚಾಯತ್ ಗೆ ಸೂಚಿಸುವುದಾಗಿ ತಿಳಿಸಿದರು.
ಈ ಸಂದರ್ಭ ಉಚ್ಚಿಲ ಗ್ರಾಮ ಪಂಚಾಯತ್ ಪಿಡಿಒ ಸತೀಶ್, ಫ್ಲ್ಯಾಟ್ ನಿವಾಸಿಗಳಾದ ಇಸ್ಮಾಯಿಲ್ ಕಾಪು, ತಸ್ನೀಮ್, ನಿಸಾರ್ ಅಹ್ಮದ್, ಇರ್ಫಾನ್ ಮಿರ್ಚಿ ಮೊದಲಾದವರು ಉಪಸ್ಥಿತರಿದ್ದರು.
