ಮತ್ತೆ ಭಜರಂಗದಳ ಅನೈತಿಕ ಪೊಲೀಸ್ ಗಿರಿ; ಬಸ್ ನಿಂದ ಎಳೆದೊಯ್ದು ಭಿನ್ನಕೋಮಿನ ಜೋಡಿಗೆ ಹಲ್ಲೆ!
ಮಂಗಳೂರು: ಬಸ್ ನಲ್ಲಿ ಮಂಗಳೂರು ನಗರಕ್ಕೆ ಆಗಮಿಸುತ್ತಿದ್ದ ಭಿನ್ನಕೋಮಿನ ಜೋಡಿಯೊಂದನ್ನು ಬಸ್ ನಿಂದ ಎಳೆದೊಯ್ದು ಹಲ್ಲೆ ನಡೆಸಿರುವ ಘಟನೆ ನಗರದ ನಂತೂರಿನಲ್ಲಿ ನಡೆದಿದೆ.
ಕಾರ್ಕಳದ ನಿಟ್ಟೆ ಕಾಲೇಜಿನ ವಿದ್ಯಾರ್ಥಿಗಳಾದ ಇವರು ಭಿನ್ನ ಧರ್ಮಕ್ಕೆ ಸೇರಿದವರಾಗಿದ್ದು ಗುರುವಾರ ಸಂಜೆ ಮಂಗಳೂರು ನಗರಕ್ಕೆ ಖಾಸಗಿ ಬಸ್ ನಲ್ಲಿ ಜೊತೆಗೆ ಆಗಮಿಸುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭ ನಂತೂರಿನಲ್ಲಿ ತಡೆದು ನಿಲ್ಲಿಸಿದ ಭಜರಂಗದಳದ ಕಾರ್ಯಕರ್ತರು ಯುವಕ ಹಾಗೂ ಯುವತಿಯನ್ನು ಬಸ್ ನಿಂದ ಕೆಳಗಿಳಿಸಿ ಯುವಕನಿಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಯುವತಿಗೆ ನಿಂದಿಸಿದ್ದಾಗಿ ತಿಳಿದು ಬಂದಿದೆ. ತಕ್ಷಣ ಸ್ಥಳಕ್ಕೆ ಬಂದ ಕದ್ರಿ ಠಾಣಾ ಪೊಲೀಸರು ಭಿನ್ನಕೋಮಿನ ಜೋಡಿಯನ್ನು ವಶಪಡಿಸಿಕೊಂಡಿದ್ದಾಗಿ ತಿಳಿದು ಬಂದಿದೆ.
ಯುವಕನಿಂದ ದೂರು ದಾಖಲು
ಹಲ್ಲೆಗೊಳಗಾದ ಯುವಕ ಜೆಪ್ಪು ಮಾರ್ಕೆಟ್ ನಿವಾಸಿ ಸೈಯದ್ ರಸೀಮ್ ಉಮರ್ ಕದ್ರಿ ಠಾಣೆಯಲ್ಲಿ ದೂರು ನೀಡಿದ್ದು, ಗುರುವಾರ ಸಂಜೆ ಮನೆಗೆ ಹಿಂತಿರುಗುತ್ತಿದ್ದಾಗ ನಂತೂರು ಸರ್ಕಲ್ ಬಳಿ ಬಸ್ ನೊಳಗೆ ಬಂದ 4 ರಿಂದ 5 ಮಂದಿ ಅಪರಿಚಿತರು ಏಕಾಏಕಿ ಅವಾಚ್ಯವಾಗಿ ಬೈದು, ಬೆನ್ನು ಹಾಗೂ ಮುಖಕ್ಕೆ ಹೊಡೆದಿರುತ್ತಾರೆ. ಬಳಿಕ ಬಸ್ ನಿಂದ ಕೆಳಗಿಳಿಸಿ ದೊಣ್ಣೆ ಹಾಗೂ ಬೆತ್ತದಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೇ, ಜೀವ ಬೆದರಿಕೆ ಒಡ್ಡಿದ್ದಾಗಿ ದೂರು ನೀಡಿದ್ದಾರೆ.