MOODBIDIRE: ಖಾಸಗಿ ಕಾಲೇಜಿನ ಕ್ಲರ್ಕ್ ನ ಮುಖವಾಡ ಬಯಲು...!!!
ಮೂಡುಬಿದಿರೆ: ಮೂಡುಬಿದಿರೆಯ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಲೈಂಗಿಕ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ತನ್ನ ಮನೆಯ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ವಿದ್ಯಾರ್ಥಿನಿಗೆ ಮಂಗಳವಾರ ತರಗತಿಯಲ್ಲಿ ಕಿವಿನೋವು ಕಾಣಿಸಿಕೊಂಡಿತ್ತು. ಹಾಗಾಗಿ ಕಾಲೇಜಿನ ಪ್ರಾಂಶುಪಾಲರು ಆಕೆಯನ್ನ ಮನೆಗೆ ಕಳುಹಿಸಿದ್ದರು. ವಿದ್ಯಾರ್ಥಿನಿಯನ್ನ ಮನೆಗೆ ತಲುಪಿಸುವಂತೆ ಪರಿಚಿತರಾದ ಕಾಲೇಜಿನ ನಿವೃತ್ತ ಕ್ಲರ್ಕ್ ಶ್ರೀಧರ ಪುರಾಣಿಕ್ ಅವರಲ್ಲಿ ತಿಳಿಸಲಾಗಿತ್ತು. ಕಾರಿನಲ್ಲಿ ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ವಿದ್ಯಾರ್ಥಿನಿಗೆ ಕ್ಲರ್ಕ್ ಶ್ರೀಧರ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.
ಇದರಿಂದ ಮಾನಸಿಕವಾಗಿ ನೊಂದ ವಿದ್ಯಾರ್ಥಿನಿ, ತನ್ನ ಆತ್ಮಹತ್ಯೆಗೆ ಕ್ಲರ್ಕ್ ಶ್ರೀಧರ ಪುರಾಣಿಕ್ ಅವರೇ ಕಾರಣ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾಳೆ. ಹಾಗಾಗಿ ಆರೋಪಿ ಶ್ರೀಧರ ಪುರಾಣಿಕ್ (62) ಬಂಧಿಸಿ, ಮೂಡುಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಿ, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪಣಂಬೂರು ಎಸಿಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.