Dakshina Kannada: ಯುವಕನ ಆತ್ಮಹತ್ಯೆ ಪ್ರಕರಣ; ಓರ್ವ ಆರೋಪಿ ಅರೆಸ್ಟ್
![]() |
| ಮೃತ ಯುವಕ ಚಂದ್ರಶೇಖರ್, ಆರೋಪಿ ಮೇಸ್ತ್ರಿ ಯೋಗೀಶ |
ಬೆಳ್ತಂಗಡಿ: ಇಲ್ಲಿನ ತೋಟತ್ತಾಡಿ ಗ್ರಾಮದ ನೆಲ್ಲಿಗುಡ್ಡೆ ಯುವಕನೋರ್ವನ ಆತ್ಮಹತ್ಯೆ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.
ಮೃತ ಯುವಕ ನೆಲ್ಲಿಗುಡ್ಡೆ ನಿವಾಸಿ ಚಂದ್ರಶೇಖರ ಪೂಜಾರಿ (24) ಜೀವ ಬೆದರಿಕೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರಿಗೆ ಘಟನೆ ಹಿಂದೆ ಗುಂಪೊಂದರ ಕೈವಾಡವಿರುವುದು ತಿಳಿದಿತ್ತು. ಇದೀಗ ಪ್ರಕರಣ ಸಂಬಂಧ ಆರೋಪಿ ತೋಟತ್ತಾಡಿ ನಿವಾಸಿ ಮೇಸ್ತ್ರೀ ಕೆಲಸ ಮಾಡುವ ಯೋಗೀಶ್ (34) ಬಂಧಿಸಲಾಗಿದೆ.
ಈತ ಮತ್ತು ಇತರ ಮೂವರು ಸಂಘದ ಸಾಲ ಕಟ್ಟುವ ವಿಚಾರದಲ್ಲಿ ಧಮ್ಕಿ ಹಾಕಿದ್ದರು. ಇದರಿಂದ ಭಯಗೊಂಡ ಚಂದ್ರಶೇಖರ್ ಆಗಸ್ಟ್ 25 ರಂದು ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಮನೆ ಮಂದಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು.
ಆದ್ರೆ ಸೆಪ್ಟೆಂಬರ್ 23 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದು ಈ ಬಗ್ಗೆ ಮನೆಯವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನಾಲ್ಕು ಜನ ಮೇಲೆ ಪ್ರಕರಣ ದಾಖಲಿಸಿದ್ದರು.
ಇದೀಗ ಆರೋಪಿಯನ್ನು ಧರ್ಮಸ್ಥಳದಲ್ಲಿ ಖಚಿತ ಮಾಹಿತಿ ಮೇರೆಗೆ ಧರ್ಮಸ್ಥಳ ಪಿಎಸ್ಐ ಅನಿಲ್ ಕುಮಾರ್ ಡಿ ನೇತೃತ್ವದಲ್ಲಿ ಬಂಧಿಸಿಲಾಗಿದ್ದು, ಆರೋಪಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಉಳಿದ ಮೂವರು ಆರೋಪಿಗಳ ಬಂಧನಕ್ಕೆ ಧರ್ಮಸ್ಥಳ ಪೊಲೀಸರು ಬಲೆ ಬಿಸಿದ್ದಾರೆ.